ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-4-2021

>> ನಮಾಜ್‌ ಮಾಡಲು ಅನುಮತಿ ಕೋರಿ ಜುಮ್ಮಾ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಮನವಿ ವಜಾ >> ಕೇರಳ ಕಾನೂನು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಡಾ. ನಾರಾಯಣನ್‌ ನಾಯರ್ ನಿಧನ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-4-2021

ರಂಜಾನ್‌: ಮಸೀದಿಯೊಳಗೆ ನಮಾಜ್‌ ಮಾಡಲು ಅನುಮತಿ ಕೋರಿ ಜುಮ್ಮಾ ಮಸೀದಿ ಟ್ರಸ್ಟ್‌ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್‌

ರಂಜಾನ್‌‌ ಮಾಸದಲ್ಲಿ ಜುಮ್ಮಾ ಮಸೀದಿಯೊಳಗೆ ನಮಾಜ್‌ ಮಾಡಲು ಅವಕಾಶ ಕೋರಿ ಬಾಂಬೆ ಟ್ರಸ್ಟ್‌ನ ಜುಮ್ಮಾ ಮಸೀದಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ಮಸೀದಿಯೊಳಗೆ ದಿನಂಪ್ರತಿ ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾರವೀಹ್‌ ನಮಾಜ್‌ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಿ ಜುಮ್ಮಾ ಮಸೀದಿ ಟ್ರಸ್ಟ್‌ ಬಾಂಬೆ ಹೈಕೋರ್ಟ್‌ನ ರಜಾಕಾಲದ ಪೀಠದ ಮುಂದೆ ಮನವಿ ಮಾಡಿತ್ತು.

ಮಹಾರಾಷ್ಟ್ರ ಮತ್ತು ಮುಂಬೈ ನಗರದಲ್ಲಿ ವ್ಯಾಪಕವಾಗಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ವಿ ಜಿ ಬಿಷ್ಟ್‌ ಅವರಿದ್ದ ವಿಭಾಗೀಯ ಪೀಠವು ಮನವಿ ಆಲಿಸಲು ನಿರಾಕರಿಸಿದೆ. “ಸಂಭ್ರಮಾಚರಣೆಯ ಹಕ್ಕು ಅಥವಾ ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದು ಮುಖ್ಯವಾದರೂ ಸಾರ್ವಜನಿಕ ಹಿತಾಸಕ್ತಿ ಮತ್ತು ನಾಗರಿಕರ ಸುರಕ್ಷತೆ ಬಹುಮುಖ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ. “ಸದ್ಯ ಕೋವಿಡ್‌ ಪರಿಸ್ಥಿತಿ ಗಂಭೀರವಾಗುತ್ತಿರುವುದರಿಂದ ನಮ್ಮ ದೃಷ್ಟಿಯಿಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲಾಗದು” ಎಂದು ಪೀಠ ಹೇಳಿದೆ.

ಕೇರಳ ಕಾನೂನು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ, ಶಿಕ್ಷಣ ತಜ್ಞ ಡಾ. ನಾರಾಯಣನ್‌ ನಾಯರ್ ನಿಧನ

ಕೇರಳ ಕಾನೂನು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಡಾ. ಎನ್‌ ನಾರಾಯಣನ್‌ ನಾಯರ್‌ ಅವರು ಬುಧವಾರ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಡಾ. ನಾಯರ್‌ ಅವರು 1953ರಲ್ಲಿ ಎರ್ನಾಕುಲಂನಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ (ಬಿ ಎಲ್‌) ಪಡೆದರು. ಬಳಿಕ ಕೇರಳ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಮತ್ತು ಪಿಎಚ್‌.ಡಿ ಪದವಿ ಪಡೆದರು.

Dr. N.Narayanan Nair
Dr. N.Narayanan Nair

ಕೇರಳ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದ ಮೊದಲಿಗರು ಎಂಬ ಶ್ರೇಯವೂ ಡಾ. ನಾಯರ್‌ ಅವರಿಗೆ ಸಂದಿದ್ದು, ವಿಶ್ವವಿದ್ಯಾಲಯದ ಸುದೀರ್ಘ ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದರು. 1990ರಿಂದ ಕೇರಳ ವಕೀಲರ ಪರಿಷತ್‌ನ ಸದಸ್ಯರಾಗಿದ್ದ ನಾಯರ್‌ ಅವರು ಕಳೆದ 15 ವರ್ಷಗಳಿಂದ ಕೇರಳ ವಕೀಲರ ಪರಿಷತ್‌ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದರು. ಕೊಚ್ಚಿಯಲ್ಲಿರುವ ರಾಷ್ಟ್ರೀಯ ಉನ್ನತ ಕಾನೂನು ಅಧ್ಯಯನ ವಿಶ್ವವಿದ್ಯಾಲಯ (ಎನ್‌ಯುಎಎಲ್‌ಎಸ್‌) ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಡಾ. ನಾಯರ್‌ ಅವರು ಕೆಲ ಕಾಲ ಅದರ ಹಂಗಾಮಿ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com