ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 02-3-2021

>> ವಕೀಲರ ಹತ್ಯೆ; ವ್ಯಾಪಕ ಖಂಡನೆ >> ಜನ್ಮದಿನದ ಶುಭಾಶಯ ಕೋರಿ ಜೈಲುಪಾಲಾದ ವಕೀಲ >> ದೂರುಗಳ ವರ್ಗಾವಣೆ ಕೋರಿದ ಕಂಗನಾ ಸಹೋದರಿಯರು >> ಅಪ್ರಾಪ್ತೆಯಿಂದ ಗರ್ಭಪಾತಕ್ಕೆ ಕೋರಿಕೆ >> ಅಶಿಷ್ಟ ಭಾಷೆ, ಅರ್ಜಿ ವಜಾ >> ಸದಸ್ಯತ್ವಕ್ಕೆ ಎರವಾದ ಧರಣಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 02-3-2021

ವಕೀಲ ವೆಂಕಟೇಶ ಹತ್ಯೆಯು ವೃತ್ತಿ ಸ್ವಾತಂತ್ರ್ಯದ ಮೇಲಿನ ದಾಳಿ: ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಒಕ್ಕೊರಲ ಆಗ್ರಹ

ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಫೆಬ್ರವರಿ 27ರಂದು ನಡೆದ ವಕೀಲ ತಾರಿಹಳ್ಳಿ ವೆಂಕಟೇಶ್‌ ಅವರ ಹತ್ಯೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಬಲವಾಗಿ ಖಂಡಿಸಿದ್ದು, ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿದೆ. ಇದಕ್ಕೆ ದನಿಗೂಡಿಸಿರುವ ಬೆಂಗಳೂರು ವಕೀಲರ ಒಕ್ಕೂಟ (ಎಎಬಿ) ಮಸೂದೆಯ ಕರಡು ತಯಾರಿಸಲು ನಾಲ್ವರು ಹಿರಿಯ ವಕೀಲರ ಸಮಿತಿಯನ್ನು ರಚಿಸಿದೆ. ವಕೀಲರ ಹತ್ಯೆಯ ವಿಚಾರ ಮತ್ತು ಅದನ್ನು ನಿಯಂತ್ರಿಸುವ ಸಂಬಂಧ ಕಾಯಿದೆ ಜಾರಿಗೊಳಿಸುವ ವಿಚಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ವಕೀಲರು ದೇಶಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಕೆಎಸ್‌ಬಿಸಿ ಎಚ್ಚರಿಸಿದೆ.

Karnataka State Bar Council
Karnataka State Bar Council

ವಕೀಲ ವೆಂಕಟೇಶ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕಿದೆ. ಭಾರತೀಯ ವಕೀಲರ ಪರಿಷತ್‌ ಸದಸ್ಯರು ಬಿಸಿಎ ಪ್ರಕರಣವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಸಂಬಂಧ ಒತ್ತಡ ಹೇರಬೇಕಿದೆ ಎಂದು ಕೆಎಸ್‌ಬಿಸಿ ಆಗ್ರಹಿಸಿದೆ. ಬಿಸಿಐಗೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ವಕೀಲರ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಲು ಪ್ರಯತ್ನಿಸುವ ನಿರ್ಧಾರವನ್ನು ಎಎಬಿ ಕೈಗೊಂಡಿದೆ. ಕರಡು ಮಸೂದೆ ತಯಾರಿಸಲು ಎಎಬಿಯು ನಾಲ್ವರು ಹಿರಿಯ ವಕೀಲರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಿದ್ದು, ಇದರಲ್ಲಿ ಉದಯ್‌ ಹೊಳ್ಳ, ಸಿ ಎಚ್‌ ಹನುಮಂತರಾಯ, ಎ ಎಸ್‌ ಪೊನ್ನಣ್ಣ ಮತ್ತು ಡಿ ಆರ್‌ ರವಿಶಂಕರ್‌ ಇರಲಿದ್ದಾರೆ. ನ್ಯಾಯಾಲಯದ ವ್ಯಾಪ್ತಿಯಲ್ಲಿ ವಕೀಲರ ಮೇಲೆ ದಾಳಿ ನಡೆದರೆ ತಕ್ಷಣ ಕ್ರಮಕೈಗೊಳ್ಳುವ ಕುರಿತು ಅಗತ್ಯವಾದ ಮಾರ್ಗಸೂಚಿ ರೂಪಿಸುವಂತೆ ಎಎಬಿಯು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿಗೆ ಮನವಿ ಮಾಡಿದೆ.

ನ್ಯಾಯಾಧೀಶರಿಗೆ ಜನ್ಮದಿನದ ಶುಭಾಶಯ ಕೋರಿದ ವಕೀಲ ಜೈಲಿಗೆ; ಜಾಮೀನು ಮನವಿ ವಿಚಾರಣೆ ನಡೆಸಲಿರುವ ಮಧ್ಯಪ್ರದೇಶ ಹೈಕೋರ್ಟ್‌!

ನ್ಯಾಯಾಧೀಶರೊಬ್ಬರಿಗೆ ಜನ್ಮದಿನದ ಶುಭಾಶಯ ಕಳುಹಿಸಿದ್ದ ವಕೀಲರೊಬ್ಬರನ್ನು ಜೈಲಿಗೆ ಹಾಕಲಾಗಿದ್ದು, ಅವರಿಗೆ ಸಂಬಂಧಿಸಿದ ಜಾಮೀನು ಮನವಿಯ ವಿಚಾರಣೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠವು ಬುಧವಾರ ನಡೆಸಲಿದೆ. ಇಮೇಲ್‌ ಮೂಲಕ ಜನವರಿ 29ರಂದು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ಮಿಥಾಲಿ ಪಾಠಕ್‌ ಅವರಿಗೆ ಜನ್ಮದಿನದ ಶುಭಾಶಯ ಕಳುಹಿಸಿದ್ದ ವಕೀಲ ವಿಜಯ್‌ಸಿಂಗ್‌ ಯಾದವ್‌ ಅವರನ್ನು ಫೆಬ್ರವರಿ 9ರಂದು ರತ್ಲಮ್‌ ಪೊಲೀಸರು ಬಂಧಿಸಿದ್ದರು. ಪಾಠಕ್‌ ಅವರ ಫೋಟೊವನ್ನು ಅವರ ಫೇಸ್‌ಬುಕ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಅದನ್ನು ಜನ್ಮದಿನದ ಶುಭಾಶಯ ಕೋರುವ ಕಾರ್ಡ್‌ನಲ್ಲಿ ಯಾದವ್‌ ಅಡಕಗೊಳಿಸಿದ್ದರು ಎಂದು ಆರೋಪಿಸಲಾಗಿದೆ.

Ratlam Court, Madhya Pradesh
Ratlam Court, Madhya Pradesh

ಪೂರ್ವಾನುಮತಿ ಪಡೆಯದೇ ಯಾದವ್‌ ಅವರು ನ್ಯಾಯಾಧೀಶೆ ಅವರ ಫೋಟೊವನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಅವರ ಅಧಿಕೃತ ಇಮೇಲ್‌ಗೆ ಕಳುಹಿಸಿದ್ದಾರೆ. ಯಾದವ್‌ ಅವರನ್ನು ನ್ಯಾ. ಪಾಠಕ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯ ಸ್ನೇಹಿತರ ಪಟ್ಟಿಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಪೂರ್ವಾನುಮತಿ ಪಡೆಯದೇ ಖಾತೆಗೆ ಪ್ರವೇಶ ಅಥವಾ ಫೋಟೊದ ಬಳಕೆಯು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಅಪರಾಧವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಐಪಿಸಿಯ ಸೆಕ್ಷನ್‌ಗಳಾದ 420, 467, 468, 469 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 41ರ ಜೊತೆಗೆ 67ರ ಅಡಿ ದೂರು ದಾಖಲಿಸಲಾಗಿದೆ. ಫೆಬ್ರವರಿ 13ರಂದು ವಕೀಲರ ಕುಟುಂಬ ಸದಸ್ಯರು ಜಾಮೀನು ಕೋರಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಯಾದವ್‌ ಅವರು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠದಲ್ಲಿ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ.

ಧರಣಿ ನಡುವೆಯೂ ಇ-ಫೈಲಿಂಗ್‌ ಮೂಲಕ ಪ್ರಕರಣ ದಾಖಲಿಸಿದ ವಕೀಲರ ಸದಸ್ಯತ್ವ ರದ್ದುಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಪರಿಷತ್

Allahabad High Court Bar Association lawyers
Allahabad High Court Bar Association lawyers

‌ಕೆಲಸಕ್ಕೆ ಗೈರಾಗುವಂತೆ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಪರಿಷತ್‌ (ಎಎಚ್‌ಸಿಬಿಎ) ಸೋಮವಾರ ಕರೆ ನೀಡಿದ್ದರೂ ಇ-ಫೈಲಿಂಗ್‌ ವ್ಯವಸ್ಥೆಯ ಮೂಲಕ ದೂರು ದಾಖಲಿಸಿ ವಕೀಲರೊಬ್ಬರ ಸದಸ್ಯತ್ವವನ್ನು ಎಎಚ್‌ಸಿಬಿಎ ರದ್ದುಪಡಿಸಿದೆ. ಮಾರ್ಚ್‌ 2ರ ಮಧ್ಯಾಹ್ನ 12 ಗಂಟೆಗೆ ಸದಸ್ಯರ ಮುಂದೆ ಹಾಜರಾಗಿ ಕ್ಷಮೆ ಕೋರುವಂತೆ ವಕೀಲ ಸುನಿಲ್‌ ಕುಮಾರ್‌ ಚೌಧರಿ ಅವರಿಗೆ ಎಎಚ್‌ಸಿಬಿಎ ಹೇಳಿದ್ದು, ತಪ್ಪಿದ್ದಲ್ಲಿ ಉತ್ತರ ಪ್ರದೇಶ ವಕೀಲರ ಪರಿಷತ್‌ಗೆ ಚೌಧರಿ ಅವರ ಸದಸ್ಯತ್ವ ರದ್ದತಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದೆ. ಶಿಕ್ಷಣ ನ್ಯಾಯಾಧಿಕರಣದ ಮಸೂದೆಯನ್ನು ವಿರೋಧಿಸಿ ಎಎಚ್‌ಸಿಬಿಎ ಪ್ರತಿಭಟನೆ ಆಯೋಜಿಸಿತ್ತು.

ತಮ್ಮ ವಿರುದ್ಧದ ನಾಲ್ಕು ಕ್ರಿಮಿನಲ್‌ ಮೊಕದ್ದಮೆಗಳನ್ನು ಮುಂಬೈನಿಂದ ಶಿಮ್ಲಾಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕಂಗನಾ-ರಂಗೋಲಿ ಸಹೋದರಿಯರು

ಮುಂಬೈನ ವಿವಿಧ ನ್ಯಾಯಾಲಯಗಳಲ್ಲಿ ಬಾಲಿವುಡ್‌ ನಟಿ ಕಂಗನಾ ರನೌತ್‌ ಮತ್ತು ರಂಗೋಲಿ ಚಂದೇಲ್‌ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಹೋದರಿಯರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

Kangana Ranaut, Rangoli Chandel
Kangana Ranaut, Rangoli Chandel

ರಿಪಬ್ಲಿಕ್‌ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ವಿರುದ್ಧ ಕಂಗನಾ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಅಖ್ತರ್‌ ಅವರು ಮುಂಬೈನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಲ್ಲಿ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಕೊರೊನಾ ವೈದ್ಯಕೀಯ ಪರೀಕ್ಷೆಗೆ ತೆರಳಿದ್ದ ವೈದ್ಯರೊಬ್ಬರ ಮೇಲಿನ ದಾಳಿಯನ್ನು ತೀವ್ರ ಖಂಡಿಸಿ ಚಂದೇಲ್‌ ಟ್ವೀಟ್‌ ಮಾಡಿದ್ದರು. ಆಕ್ಷೇಪಾರ್ಹ ಅಂಶಗಳ ಬಳಕೆಯ ಹಿನ್ನೆಲೆಯಲ್ಲಿ ಟ್ವಿಟರ್‌ ಚಂದೇಲ್‌ ಖಾತೆ ನಿರ್ಬಂಧಿಸಿತ್ತು. ಇದನ್ನು ವಿರೋಧಿಸಿ ಕಂಗನಾ ಪ್ರತಿಕ್ರಿಯಿಸಿದ್ದರು. ಸಹೋದರಿಯರಿಬ್ಬರ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ವಕೀಲ ಅಲಿ ಖಾಸಿಫ್‌ ಖಾನ್‌ ದೇಶ್‌ಮುಖ್‌ ಎಂಬವರು ದೂರು ದಾಖಲಿಸಿದ್ದಾರೆ. ಇದೇ ಪ್ರಕರಣವನ್ನು ಆಧರಿಸಿ ಮುಂಬೈನ ಅಂಧೇರಿಯ 66ನೇ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಲ್ಲಿ ದೂರು ದಾಖಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟ್ವೀಟ್‌ ಮಾಡಿದ್ದನ್ನು ಆಧರಿಸಿ ಮುನಾವರ್‌ ಅಲಿ ಎಂಬವರು ರನೌತ್‌ ಮತ್ತು ಚಂದೇಲ್‌ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಶಿಮ್ಲಾಕ್ಕೆ ವರ್ಗಾಯಿಸುವಂತೆ ಕೋರಿ ಸಹೋದರಿಯರು ಮನವಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು, ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನೆಯ ಸದಸ್ಯರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಅತ್ಯಾಚಾರ ಹಿನ್ನೆಲೆ: 26 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ14 ವರ್ಷದ ಅಪ್ರಾಪ್ತೆಯಿಂದ ಮನವಿ

ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೆ ಒಳಗಾಗಿರುವ ಹರಿಯಾಣದ 14 ವರ್ಷದ ಅಪ್ರಾಪ್ತೆಯು 26 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಮನವಿಯ ಬಗ್ಗೆ ನಿರ್ಧಾರಕೈಗೊಳ್ಳುವುದಕ್ಕೂ ಮುನ್ನ ಮುಂದಿನ ವಾರದೊಳಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅಪ್ರಾಪ್ತೆಯು ಗರ್ಭಧರಿಸಿ 26ನೇ ವಾರವಾಗಿದ್ದು, ತಕ್ಷಣ ಕಾರ್ಯಪ್ರವೃತ್ತವಾಗುವಂತೆ ಅರ್ಜಿದಾರೆಯ ಪರ ವಕೀಲ ವಿ ಕೆ ಬಿಜು ಕೋರಿದ್ದಾರೆ.

Pregnancy
Pregnancy

ಮುಂದಿನ ವಾರದೊಳಗೆ ಪ್ರಕರಣ ವಿಚಾರಣೆ ನಡೆಯುವುದಕ್ಕೂ ಮುನ್ನ ವರದಿ ಸಲ್ಲಿಸುವಂತೆ ವೈದ್ಯಕೀಯ ಮಂಡಳಿಗೆ ಸೂಚಿಸಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯಮ್‌ ಅವರಿದ್ದ ತ್ರಿಸದಸ್ಯ ಪೀಠವು ನೋಟಿಸ್‌ ಜಾರಿ ಮಾಡಿದೆ. ವೈದ್ಯಕೀಯ ಗರ್ಭಧಾರಣೆ ಕಾಯಿದೆ 1971ರ ಅನ್ವಯ ನ್ಯಾಯಾಲಯದ ಅನುಮತಿ ಪಡೆಯದೇ ಇಪ್ಪತ್ತು ವಾರ ಪೂರೈಸಿದ ಭ್ರೂಣದ ಗರ್ಭಪಾತ ಮಾಡುವಂತಿಲ್ಲ.

ಅಶಿಷ್ಟ ಭಾಷೆ ಬಳಕೆ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಅರ್ಜಿಯಲ್ಲಿ ಅಶಿಷ್ಟ ಭಾಷೆ ಬಳಕೆ ಮಾಡಿದ್ದರಿಂದ ದೆಹಲಿ ಹೈಕೋರ್ಟ್‌ ಮನವಿಯ ವಿಚಾರಣೆ ನಡೆಸಲು ಈಚೆಗೆ ನಿರಾಕರಿಸಿದೆ. ಮನವಿಯಲ್ಲಿ ಅರ್ಜಿದಾರರು ಬಳಸಿದ್ದ ಭಾಷೆಗೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Delhi High Court
Delhi High Court

ಎರಡೂ ನ್ಯಾಯಾಧಿಕರಣಗಳು ತಪ್ಪಾದ ಪದ್ಧತಿ ಅಳವಡಿಸಿಕೊಂಡಿವೆ ಎಂದು ತಾವೇ ಸ್ವತಃ ಪ್ರಕರಣ ಪ್ರತಿನಿಧಿಸಿದ್ದ ಮನವಿದಾರರು ಹೇಳಿದರು. "ಪ್ರತಿವಾದಿಯನ್ನು ಪ್ರತಿನಿಧಿಸಲು ಐಬಿಸಿಯು ಟಾಮ್‌, ಡಿಕ್‌ ಅಥವಾ ಹ್ಯಾರಿಯಂಥ ಯಾರಿಗೋ ಅವಕಾಶ ಕಲ್ಪಿಸಲಾಗದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ. “ಮನವಿಯಲ್ಲಿ ಇಂಥ ಭಾಷೆಯನ್ನು ನೀವು ನೋಡಿದ್ದೀರಾ… ನೀವು ನ್ಯಾಯಾಧಿರಣದ ಬಗ್ಗೆ ಬರೆಯುತ್ತಿದ್ದೀರಿ” ಎಂದು ನ್ಯಾ. ಪ್ರತಿಭಾ ಸಿಂಗ್‌ ಹೇಳಿದರು. ಅರ್ಜಿದಾರರು ಕ್ಷಮೆ ಕೋರಿದರೂ ನ್ಯಾಯಾಲಯವು ಮನವಿಯ ವಿಚಾರಣೆಗೆ ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com