ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 8-2-2021

>> ಶಬ್ದ ಮಾಲಿನ್ಯ ತಡೆಗೆ ಸೂಚನೆ >> ನಾಪತ್ತೆಯಾದ ಪ್ರತಿಭಟನಾಕಾರನ ಪ್ರಕರಣ >> ವಿಧಾನಪರಿಷತ್ತಿನಲ್ಲಿ ವಿವಿಧ ವಿಧೇಯಕಗಳ ಮಂಡನೆ >>ಮುಖ್ತಾರ್‌ ಅನ್ಸಾರಿ ಕೇಸ್‌ >>ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಕೋರಿದ್ದ ಅರ್ಜಿ ವಜಾ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 8-2-2021

ಧಾರ್ಮಿಕ ಸ್ಥಳಗಳಲ್ಲಿ ಶಬ್ದಮಾಲಿನ್ಯ ತಡೆಯಲು ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

"ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಧಾರ್ಮಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯ ತಡೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕೆಂದು ನಾವು ಬಯಸುತ್ತೇವೆ" ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್‌ ಅವರಿದ್ದ ವಿಭಾಗೀಯ ಪೀಠ “ಸರ್ಕಾರದ ಬಳಿ ಸಾಕಷ್ಟು ಸಂಖ್ಯೆಯ ಡೆಸಿಬಲ್ ಮೀಟರ್ ಇಲ್ಲವೇ?... ಈ ನಿರ್ದೇಶನಗಳನ್ನು ನೀಡುವಲ್ಲಿ ತೊಂದರೆ ಏನು?" ಎಂದು ಪ್ರಶ್ನಿಸಿತು.

Karnataka High Court
Karnataka High Court

2000ರ ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಆಂಪ್ಲಿಫೈಯರ್‌ಗಳು ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವುದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿಂದೆ, ನಿಯಮಗಳನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಆಂಪ್ಲಿಫೈಯರ್ ಮತ್ತು ಧ್ವನಿವರ್ಧಕಗಳನ್ನು ಅಕ್ರಮವಾಗಿ ಬಳಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ವ್ಯವಸ್ಥೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ನಿರ್ದೇಶನ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ವಿಚಾರಣೆ ವೇಳೆ ನ್ಯಾಯಾಲಯದ ಹಿಂದಿನ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ ಎಂಬುದನ್ನು ಗಮನಿಸಿದ ಸಿಜೆ ಓಕಾ ಮುಂದಿನ ಸೋಮವಾರದೊಳಗೆ ಕ್ರಮ ಕೈಗೊಂಡಿರುವ ಕುರಿತು ವರದಿ ನೀಡಲು ಸೂಚಿಸಿದೆ. ಅರ್ಜಿದಾರರ ಪರವಾಗಿ ವಕೀಲ ಬಿ ಎನ್‌ ಜಗದೀಶ್‌ ವಾದ ಮಂಡಿಸಿದರು. ವಿಚಾರಣೆಯನ್ನು ಫೆಬ್ರವರಿ 17 ಕ್ಕೆ ಮುಂದೂಡಲಾಗಿದೆ.

ರೈತರ ಟ್ರ್ಯಾಕ್ಟರ್ ರ‍್ಯಾಲಿ ದಿನದಿಂದಲೂ ಪ್ರತಿಭಟನಾಕಾರ ನಾಪತ್ತೆ: ತಾಜಾ ಮಾಹಿತಿ ಕೋರಿದ ದೆಹಲಿ ಹೈಕೋರ್ಟ್‌

ಜನವರಿ 26 ರ ರೈತರ ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಿದ ನಂತರ ನಾಪತ್ತೆಯಾದ ವ್ಯಕ್ತಿಯೊಬ್ಬರು ಎಲ್ಲಿದ್ದಾರೆ ಎಂದು ದೆಹಲಿ ಪೊಲೀಸರು ವಿವರ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ ಸೂಚಿಸಿದೆ. ನಾಪತ್ತೆಯಾದ ವ್ಯಕ್ತಿಯ ಸೋದರ ಸಂಬಂಧಿ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನುಪ್ ಜೆ ಭಂಭಾನಿ ಅವರ ವಿಭಾಗೀಯ ಪೀಠ ಈ ವಿವರಣೆ ಬಯಸಿದೆ.

Farmerಸ Protest, Delhi High Court
Farmerಸ Protest, Delhi High Court

ತಮ್ಮ ಸಂಬಂಧಿ ನಾಪತ್ತೆಯಾಗಿರುವ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿಲ್ಲ. ನಾಪತ್ತೆಯಾಗಿರುವ ವ್ಯಕ್ತಿ 27 ವರ್ಷ ವಯಸ್ಸಿನವನಾಗಿದ್ದು ಅಪರಾಧ ಹಿನ್ನೆಲೆ ಹೊಂದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ವಕೀಲ ಶೋಯಿಬ್ ಖುರೇಷಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ನಾಗಿಂದರ್ ಬೆನಿಪಾಲ್ ಹಾಜರಿದ್ದರು. ವಿಚಾರಣೆಯನ್ನು ನಾಳೆಗೆ (ಫೆಬ್ರವರಿ 09 ರಂದು) ಮುಂದೂಡಲಾಗಿದೆ.

ವಿಧಾನ ಪರಿಷತ್‌ನಲ್ಲಿ ಹಲವು ವಿಧೇಯಕಗಳಿಗೆ ಸೋಮವಾರ ಅಂಗೀಕಾರ

ವಿಧಾನಸಭೆಯಿಂದ ಅಂಗೀಕಾರಗೊಂಡಿರುವ 2021ರ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ ಸೋಮವಾರ ಅಂಗೀಕಾರ ನೀಡಿದೆ. ಇದರ ಜೊತೆಗೆ 2021ರ ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ವಿಧೇಯಕ ಹಾಗೂ 2021ರ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕಕ್ಕೂ ಅನುಮೋದನೆ ನೀಡಲಾಗಿದೆ.

VidhanaSoudha, Bengaluru
VidhanaSoudha, Bengaluru

ಮೊದಲ ಎರಡು ವಿಧೇಯಕಗಳನ್ನು ಪೌರಾಡಳಿತ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಎನ್ ನಾಗರಾಜು ಸದನಕ್ಕೆ ಸಲ್ಲಿಸಿದರು. ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಮಂಡಿಸಿದರು.

ಮುಖ್ತಾರ್‌ ಅನ್ಸಾರಿ ವರ್ಗಾವಣೆ ಕೋರಿಕೆ: ರೌಡಿಯನ್ನು ಪಂಜಾಬ್‌ ಬೆಂಬಲಿಸುತ್ತಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ದೂರಿದ ಉತ್ತರ ಪ್ರದೇಶ ಸರ್ಕಾರ

ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಎಸ್‌ಪಿ ಶಾಸಕ ಮುಖ್ತಾರ್‌ ಅನ್ಸಾರಿಯನ್ನು ಪಂಜಾಬ್‌ ಸರ್ಕಾರ ಬೆಂಬಲಿಸುತ್ತಿದೆ ಎಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ. ಉತ್ತರಪ್ರದೇಶದ ಶಾಸಕರಾದ ಅನ್ಸಾರಿ ಅವರನ್ನು ಪಂಜಾಬ್‌ ಸರ್ಕಾರ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದು ಪಂಜಾಬ್‌ನ ರೋಪರ್‌ ಜೈಲಿನಿಂದ ಅವರನ್ನು ಉತ್ತರಪ್ರದೇಶದ ಗಾಜಿಪುರ ಜೈಲಿಗೆ ವರ್ಗಾಯಿಸುವುದರಿಂದ ಹಿಂದೆ ಸರಿದಿದೆ ಎಂದು ಅದು ಹೇಳಿದೆ.

Mukhtar Ansari, Supreme Court
Mukhtar Ansari, Supreme Court

ಉತ್ತರಪ್ರದೇಶ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅವರು “ಕ್ಷುಲ್ಲಕ ಪ್ರಕರಣವೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಪಂಜಾಬ್‌ ಜೈಲಿನಲ್ಲಿರುವ ಅನ್ಸಾರಿ ವಿರುದ್ಧ ಗಂಭೀರ ಆರೋಪಗಳಿವೆ. ಪಂಜಾಬ್‌ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅನ್ಸಾರಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ದಾಖಲಿಸಲಾಗಿದೆ. ಆತ ಪಂಜಾಬ್‌ ಜೈಲಿನಲ್ಲಿ ಮಜಾ ಮಾಡುತ್ತಿದ್ದಾನೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್‌ ರೆಡ್ಡಿ ಹಾಗೂ ಎಂ ಆರ್‌ ಷಾ ನೇತೃತ್ವದ ಪೀಠಕ್ಕೆ ತಿಳಿಸಿದರು. ಅನ್ಸಾರಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ಅವರು “ವೀಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಯ ವಿಚಾರಣೆ ನಡೆಯುತ್ತಿದ್ದು ಉತ್ತರಪ್ರದೇಶಕ್ಕೆ ವರ್ಗಾವಣೆ ಮಾಡಿದರೂ ಇದೇ ನಡೆಯುತ್ತದೆ ಎಂದರು. ಆದರೆ ಇದನ್ನು ಒಪ್ಪದ ಮೆಹ್ತಾ “ನೀವು ವೇದಿಕೆಯನ್ನು ಆಯ್ದುಕೊಳ್ಳಲಾಗದು. ನೀವು ಪಂಚತಾರಾ ಹೋಟೆಲಿನಲ್ಲಿದ್ದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಪ್ರಕರಣ ತುರ್ತಿನದಲ್ಲ ಎಂಬ ಪಂಜಾಬ್‌ ಧೋರಣೆಯನ್ನು ನ್ಯಾಯಾಲಯ ಗಮನಿಸಬೇಕು” ಎಂದರು. ಪಂಜಾಬ್‌ ಸರ್ಕಾರದ ಪರ ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ ಹಾಜರಿದ್ದರು. ಬಿಜೆಪಿ ಶಾಸಕರೊಬ್ಬರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಅನ್ಸಾರಿಯನ್ನು ಉತ್ತರ ಪ್ರದೇಶ ಜೈಲಿಗೆ ರವಾನೆ ಮಾಡಬೇಕೆಂಬುದು ಉತ್ತರಪ್ರದೇಶದ ಬೇಡಿಕೆ.

ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌: ಅರ್ಜಿದಾರರಿಗೆ ದಂಡ ವಿಧಿಸುವ ಎಚ್ಚರಿಕೆ

ಸಂವಿಧಾನದ 356 ನೇ ವಿಧಿ ಅನ್ವಯ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮುರಿದುಹೋಗಿದೆ, , ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಎಸಗಲಾಗುತ್ತಿದ್ದು ದಲಿತರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವುದು ರಾಷ್ಟ್ರಪತಿ ಆಡಳಿತ ಹೇರಲು ಇರುವ ಕಾರಣಗಳು ಎಂದು ವಕೀಲ ಸಿ.ಆರ್.ಜಯ ಸುಕಿನ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿತ್ತು.

Uttar Pradesh
Uttar Pradesh

ಆದರೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ “ನೀವು ಎಷ್ಟು ರಾಜ್ಯಗಳ ಅಪರಾಧ ದಾಖಲೆಗಳ ಅಧ್ಯಯನ ಮಾಡಿದ್ದೀರಿ. ಯಾವ ಆಧಾರದ ಮೇಲೆ (ನಿಮ್ಮ ಆರೋಪ) ಎಂಬುದನ್ನು ತೋರಿಸಿ. ನೀವು ಹೇಳುತ್ತಿರುವ ಬಗ್ಗೆ ಯಾವುದೇ ಅಧ್ಯಯನ ಇಲ್ಲ. ನಿಮ್ಮ ಮೂಲಭೂತ ಹಕ್ಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹೇಳಿ” ಎಂದರು. ಅಲ್ಲದೆ ಭಾರಿ ದಂಡ ವಿಧಿಸುವುದಾಗಿ ಕೂಡ ಅವರು ಅರ್ಜಿದಾರರಿಗೆ ಎಚ್ಚರಿಕೆ ನೀಡಿದರು.

Related Stories

No stories found.
Kannada Bar & Bench
kannada.barandbench.com