ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |27-6-2021

>> ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಮಾರ್ದನಿಸಿದ ʼನಿರ್ಭಯಾʼ >> 2-ಡಿಜಿ ಔಷಧ ಕುರಿತು ಮಾಹಿತಿ ಕೇಳಿದ ಮದ್ರಾಸ್‌ ಹೈಕೋರ್ಟ್‌ >> ಬಿಗಿ ನಿಯಮಾವಳಿ ರೂಪಿಸಿದ ಬಿಸಿಐ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |27-6-2021

ನಿರ್ಭಯಾ ಪ್ರಕರಣದಿಂದ ಪಾಠ ಕಲಿಯದ ಶಾಸಕಾಂಗ: ಮಧ್ಯಪ್ರದೇಶ ಹೈಕೋರ್ಟ್‌ ಅಸಮಾಧಾನ

ಅತ್ಯಾಚಾರ ಎಸಗುವ ಬಾಲಾಪರಾಧಿಗಳಿಗೆ ದಂಡ ವಿಧಿಸಲು ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ತಿಳಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ ಈಗಿರುವ ಕಾನೂನುಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸದಿನ ವ್ಯಕ್ತಿಗಳು ಎಸಗುವ ಕೃತ್ಯಗಳಿಗೆ ಕಡಿವಾಣ ಹಾಕಲು ಅಸಮರ್ಪಕವಾಗಿವೆ ಎಂದು ಅಭಿಪ್ರಾಯಪಟ್ಟಿದೆ.

Madhya Pradesh High Court
Madhya Pradesh High Court

ನಿರ್ಭಯಾ ಘಟನೆಯಿಂದ ಶಾಸಕಾಂಗ ಇನ್ನೂ ಪಾಠ ಕಲಿತಿಲ್ಲ. ಈ ದೇಶದಲ್ಲಿ ಶಾಸನ ರೂಪಿಸುವವರಿಗೆ ಬುದ್ಧಿ ಬರಲು ಇನ್ನೂ ಎಷ್ಟು ನಿರ್ಭಯಾಗಳು ತ್ಯಾಗ ಮಾಡಬೇಕಾಗುತ್ತದೆ ಎಂದು ಈ ನ್ಯಾಯಾಲಯ ನಿಜಕ್ಕೂ ಅಚ್ಚರಿಪಡುತ್ತಿದೆ ಎಂಬುದಾಗಿ ನ್ಯಾಯಮೂರ್ತಿ ಸುಭೋದ್‌ ಅಭ್ಯಂಕರ್‌ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ಮೂಲಕ ಅತ್ಯಚಾರ ಪ್ರಕರಣದಲ್ಲಿ ಜಾಮೀನು ಕೋರಿದ್ದ 15 ವರ್ಷದ ಬಾಲಕನ ಅರ್ಜಿಯನ್ನು ತಿರಸ್ಕರಿಸಿತು. 10 ವರ್ಷದ ಬಾಲಕಿ ಮೇಲೆ ಹುಡುಗ ಅತ್ಯಾಚಾರ ಎಸಗಿದ್ದ ಎಂದು ಸಂತ್ರಸ್ತೆಯ ಪರವಾಗಿ ದೂರು ಸಲ್ಲಿಕೆಯಾಗಿತ್ತು.

ಕೋವಿಡ್‌ ತಡೆ ಲಸಿಕೆ 2-ಡಿಜಿಗೆ ವೈದ್ಯಕೀಯ ಅನುಮೋದನೆ ದೊರೆಯುವುದು ಯಾವಾಗ ಎಂದು ಕೇಂದ್ರವನ್ನು ಪ್ರಶ್ನಿಸಿದ ಮದ್ರಾಸ್‌ ಹೈಕೋರ್ಟ್‌

ದೊಡ್ಡ ಪ್ರಮಾಣದಲ್ಲಿ ತಯಾರು ಮಾಡಬಹುದಾದ ಕೋವಿಡ್‌ ತಡೆ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ತಯಾರಿಸಲು ಆಸಕ್ತಿ ವ್ಯಕ್ತಪಡಿಸಿದ ಕಂಪನಿಗಳ ಅರ್ಜಿಗಳನ್ನು ಪರಿಷ್ಕರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಬಹಿರಂಗಪಡಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಕೇಳಿದೆ. ಜೂನ್ 17 ರ ವೇಳೆಗೆ 40 ಕಂಪನಿಗಳು 2-ಡಿಜಿ ಔಷಧಿ ತಯಾರಿಸಲು ಆಸಕ್ತಿ ವ್ಯಕ್ತಪಡಿಸಿದ್ದು ಅರ್ಜಿಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಶಂಕರನಾರಾಯಣನ್ ಅವರು ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಟಿ ವಿ ತಮಿಳ್‌ಸೆಲ್ವಿ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ (ಡಿಆರ್‌ಎಲ್‌) ಜೊತೆಗೂಡಿ ಡಿಆರ್‌ಡಿಒದ ಪರಮಾಣು ಔಷಧ ಮತ್ತು ಪೂರಕ ವಿಜ್ಞಾನಗಳ ಸಂಸ್ಥೆ (ಐಎನ್‌ಎಂಎಎಸ್‌) ಅಭಿವೃದ್ಧಿಪಡಿಸಿರುವ ಔಷಧ ಇದಾಗಿದೆ.

Launch of 2-DG drug on May 17, 2021
Launch of 2-DG drug on May 17, 2021

ಇದಲ್ಲದೆ ಆಂಧ್ರಪ್ರದೇಶದ ನೆಲ್ಲೂರು ಮೂಲದ ಡಾ. ಆನಂದಯ್ಯ ಅವರು ಅಭಿವೃದ್ಧಿಪಡಿಸಿರುವ ಔಷಧದ ಬಗ್ಗೆಯೂ ಗಮನ ಸೆಳೆಯಲಾಯಿತು. ಪರಿಣಾಮಕಾರಿಯಾಗಿರುವ ಔಷಧವನ್ನು ಐಸಿಎಂಆರ್‌ ಪರಿಶೀಲಿಸುತ್ತಿದೆ ಎಂಬುದನ್ನು ಅರಿತ ನ್ಯಾಯಾಲಯ ವಿಶ್ಲೇಷಣಾ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದನ್ನು ತಿಳಿಯುವಂತೆ ಎಎಸ್‌ಜಿ ಅವರಿಗೆ ಸೂಚಿಸಿತು. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ ನ್ಯಾಯಾಲಯ ಡಾ. ಆನಂದಯ್ಯ ಅವರ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿತು.

ತನ್ನ ನಿರ್ಧಾರ ಟೀಕಿಸಿದರೆ, ನ್ಯಾಯಾಧೀಶರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದರೆ ಸದಸ್ಯತ್ವ ರದ್ದು: ಬಿಸಿಐ ಹೊಸ ನಿಯಮಾವಳಿ

ಯಾವುದೇ ನ್ಯಾಯಾಲಯ, ನ್ಯಾಯಾಧೀಶರು, ರಾಜ್ಯ ವಕೀಲರ ಪರಿಷತ್ತು ಅಥವಾ ಬಿಸಿಐ ವಿರುದ್ಧ ಅಶ್ಲೀಲ, ಅವಹೇಳನಕಾರಿ, ಮಾನಹಾನಿಕಾರಕ, ಪ್ರಚೋದನೀಯ, ದುರುದ್ದೇಶಪೂರ್ವಕ ಅಥವಾ ಕೀಟಲೆಯ ಹೇಳಿಕೆ ನೀಡುವ ವಕೀಲರ ಪರವಾನಗಿ ಪತ್ರ ರದ್ದುಪಡಿಸಲು ಭಾರತೀಯ ವಕೀಲರ ಪರಿಷತ್ತು ಮುಂದಾಗಿದೆ. ಇದಕ್ಕಾಗಿ ತನ್ನ ನಿಯಾಮವಳಿಗಳಿಗೆ ಅದು ತಿದ್ದುಪಡಿ ತಂದಿದೆ. ಹೀಗೆ ಮಾಡುವುದು ದುಷ್ಕೃತ್ಯಕ್ಕೆ ಸಮನಾಗಿದ್ದು ಅಮಾನತುಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

Bar Council Of India,
Bar Council Of India,

ಜೂನ್‌ 25ರಂದು ಪ್ರಕಟವಾದ ಗೆಜೆಟ್‌ಲ್ಲಿ ಹೊಸ ತಿದ್ದುಪಡಿಯನ್ನು ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಬಿಸಿಐ ನಿಯಮಗಳಲ್ಲಿ ಎರಡು ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ. ವಕೀಲರು ತಮ್ಮ ನಿತ್ಯ ಜೀವನದಲ್ಲಿ ಸಂಭಾವಿತರಾಗಿ ವರ್ತಿಸಬೇಕು. ಕಾನೂನುಬಾಹಿರ ಕೃತ್ಯ ಎಸಗಬಾರದು, ಮುದ್ರಣ/ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ನ್ಯಾಯಾಲಯ, ನ್ಯಾಯಾಧೀಶರು ಅಥವಾ ನ್ಯಾಯಾಂಗದ ಸದಸ್ಯರು ಇಲ್ಲವೇ ರಾಜ್ಯ ಬಾರ್‌ ಕೌನ್ಸಿಲ್‌ ಅಥವಾ ಬಿಸಿಐಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com