ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-5-2021

>> ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆ ರದ್ದತಿಗೆ ಕೋರಿಕೆ >> ಸ್ಟ್ಯಾನ್‌ ಸ್ವಾಮಿರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲು ಅನುಮತಿ >> ಐಟಿ ನಿಯಮಗಳ ಅನುಸರಣೆ ಕೋರಿ ಮನವಿ >> ವರದಕ್ಷಿಣೆ ಸಾವು: ವಿಚಾರಣಾಧೀನ ನ್ಯಾಯಾಲಯಗಳ ನಡೆ ಬಗ್ಗೆ ಸುಪ್ರೀಂ ಕಳವಳ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-5-2021
Published on

[ಬೋರ್ಡ್ ಪರೀಕ್ಷೆ] ದಯವಿಟ್ಟು ಆಶಾವಾದದಿಂದಿರಿ ಎಂದ ಸುಪ್ರೀಂ; ಸೋಮವಾರ ವಿಚಾರಣೆ

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ 12ನೇ ತರಗತಿಯ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಸರ್ಟಿಫಿಕೇಟ್‌ (ಐಸಿಎಸ್‌ಇ) ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿರುವ ಮನವಿಯ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

Justices AM Khanwilkar and Dinesh Maheshwari
Justices AM Khanwilkar and Dinesh Maheshwari

“ದಯವಿಟ್ಟು ಆಶಾವಾದದಿಂದಿರಿ. ಸೋಮವಾರದ ವೇಳೆಗೆ ಕೆಲವು ನಿರ್ಣಯಗಳನ್ನು (ಕೇಂದ್ರ ಸರ್ಕಾರ) ಕೈಗೊಳ್ಳಬಹುದು” ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌ ಮತ್ತು ದಿನೇಶ್‌ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಹೇಳಿತು. ವಿಚಾರಣೆಯ ವೇಳೆ, ಜೂನ್‌ 1ರಂದು ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂಬುದನ್ನು ಪೀಠ ಗಮನಕ್ಕೆ ತೆಗೆದುಕೊಂಡು ಮೇಲಿನಂತೆ ನುಡಿಯಿತು.

ಸ್ಟ್ಯಾನ್‌ ಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೈಕೋರ್ಟ್‌ ನಿರ್ದೇಶನ

ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಬಂಧಿತ ಸ್ಟಾನ್‌ ಸ್ವಾಮಿ ಅವರ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅವರನ್ನು 15 ದಿನಗಳ ಕಾಲ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಶುಕ್ರವಾರ ನಡೆಸಿದ ವಿಶೇಷ ವಿಚಾರಣೆಯ ಸಂದರ್ಭದಲ್ಲಿ ಆದೇಶಿಸಿದೆ. ಜೆ ಜೆ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಿದ್ದರೂ ಕೋವಿಡ್‌ ಸಾಂಕ್ರಾಮಿಕತೆಯಿಂದಾಗಿ ಅಲ್ಲಿನ ವೈದ್ಯರು ಸ್ವಾಮಿ ಅವರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಕಡಿಮೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಆರ್‌ ಬೋರ್ಕರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Stan Swamy, Bombay High Court
Stan Swamy, Bombay High Court

ಹೀಗಾಗಿ, ಇಂದೇ ಸ್ವಾಮಿ ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆ ದಾಖಲಿಸಿ ಹದಿನೈದು ದಿನಗಳ ಕಾಲ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡುವಂತೆ ಪೀಠವು ನಿರ್ದೇಶಿಸಿದೆ. ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಸ್ವಾಮಿ ಅವರೇ ಭರಿಸಲಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ ಎಂದು ಪೀಠ ಹೇಳಿದೆ.

ಟ್ವಿಟರ್‌ನಿಂದ ಐಟಿ ನಿಯಮಗಳ ಅನುಸರಣೆಗೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಮಾರ್ಗದರ್ಶಿಗಳು ಮತ್ತು ಡಿಜಿಟಲ್‌ ನೀತಿ ಸಂಹಿತೆ) ಕಾಯಿದೆ ನಿಯಮ 4ರ ಅನ್ವಯ ಟ್ವಿಟರ್‌ ಇಂಕ್‌ಗೆ ತಡ ಮಾಡದೆ ಸ್ಥಾನಿಕ ಕುಂದುಕೊರತೆ ಅಧಿಕಾರಿ ನೇಮಿಸುವ ಸಂಬಂಧ ಭಾರತ ಸರ್ಕಾರಕ್ಕೆ ನಿರ್ದೇಶಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

Delhi HC, Twitter
Delhi HC, Twitter

ಐಟಿ ನಿಯಮಗಳ ಅನ್ವಯ ಟ್ವಿಟರ್‌ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿ ನೇಮಿಸಲು ವಿಫಲವಾಗಿರುವುದು ಮಾತ್ರವಲ್ಲದೇ ನಿಯಮ 4ರ ಅನ್ವಯ ನೋಡಲ್‌ ಅಧಿಕಾರಿ ಮತ್ತು ಮುಖ್ಯ ಅನುಸರಣಾ ಅಧಿಕಾರಿ ನೇಮಿಸುವಲ್ಲಿಯೂ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಟ್ವಿಟರ್‌ನಲ್ಲಿ ಪರಿಶೀಲಿಸಲಾದ ಬಳಕೆದಾರರ ಪಟ್ಟಿಯಲ್ಲಿರುವ ತೃಣಮೂಲ ಕಾಂಗ್ರೆಸ್‌ ಸಂಸದೆ ಮೊಹುವಾ ಮೊಯಿತ್ರಾ ಮತ್ತು ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಆಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಮಾಡಿದ್ದಾರೆ ಎಂದು ಟ್ವಿಟರ್‌ ಬಳಕೆದಾರರಾದ ಅರ್ಜಿದಾರರು ವಾದಿಸಿದ್ದಾರೆ. ಇವುಗಳಿಗೆ ಆಕ್ಷೇಪಿಸಿ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಗೆ ದೂರು ನೀಡುವ ಉದ್ದೇಶದಿಂದ ಟ್ವಿಟರ್‌ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳ ವಿಚಾರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್

ವರದಕ್ಷಿಣೆ ಕಿರುಕುಳದ ಹತ್ಯೆ ಪ್ರಕರಣಗಳಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 313ರ ಅಡಿಯಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲಿಸುವಾಗ ವಿಚಾರಣಾ ನ್ಯಾಯಾಲಯಗಳು ಆರೋಪಿಯ ಹೇಳಿಕೆಯನ್ನು ಗಮನಕೊಡದೇ ಮತ್ತು ಆತುರದಿಂದ ದಾಖಲಿಸುವುದು ಆತಂಕಕಾರಿ ಬೆಳವಣಿಗೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಆರೋಪಿಯ ರಕ್ಷಣೆಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಪ್ರಶ್ನಿಸದೇ ಹಲವು ಸಂದರ್ಭದಲ್ಲಿ ಆತನ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಅವರಿದ್ದ ಪೀಠ ಹೇಳಿದೆ.

ಸಿಆರ್‌ಪಿಸಿಯ ಸೆಕ್ಷನ್‌ 313ರ ಅಡಿ ಆರೋಪಿಯ ವಿಚಾರಣೆಯು ಕೇವಲ ಔಪಚಾರಿಕ ಕಾರ್ಯವಿಧಾನ ಎಂದು ಪರಿಗಣಿಸಲಾಗದು. ಅದು ನ್ಯಾಯಸಮ್ಮತವಾದ ಮೂಲಭೂತ ತತ್ವಗಳ ಮೇಲೆ ನಿಂತಿದೆ ಎಂದಿರುವ ಪೀಠವು ಐಪಿಸಿಯ ಸೆಕ್ಷನ್‌ 304ಬಿ ಅಡಿ ವರದಕ್ಷಿಣೆ ಕಿರುಕುಳ ಸಾವು ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದು, ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿಗಳ ಕುರಿತ ವಿಸ್ತೃತ ಮಾಹಿತಿಗೆ ಪ್ರಕರಣದ ಆದೇಶ ಪ್ರತಿಯ ಲಿಂಕ್‌ ಕ್ಲಿಕ್ಕಿಸಿ:

Attachment
PDF
Satbir_Singh_vs_State_of_Haryana.pdf
Preview
Kannada Bar & Bench
kannada.barandbench.com