ಶಬರಿಮಲೆಗೆ ಯಾತ್ರಿಕರ ಸಂಖ್ಯೆಯನ್ನು ದಿನಕ್ಕೆ 2,000 ರಿಂದ 5,000ಕ್ಕೆ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆರೋಗ್ಯ ಸಲಹೆಗಳಿಗೆ ಹೈಕೋರ್ಟ್ ಆದೇಶವು ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರವು ತನ್ನ ಮನವಿಯಲ್ಲಿ ವಿವರಿಸಿದೆ. ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಿಂದ ಜನವರಿ 14ರ ವರೆಗೆ ದಿನಕ್ಕೆ ಎಷ್ಟು ಜನ ಯಾತ್ರಾರ್ಥಿಗಳನ್ನು ಶಬರಿಮಲೆಗೆ ಭೇಟಿ ನೀಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳ ಪರಿಶೀಲನೆ ಹಾಗೂ ಯಾತ್ರಾರ್ಥಿಗಳ ಭೇಟಿಯ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಬಂಧ ರಾಜ್ಯ ಸರ್ಕಾರವು ಉನ್ನತಮಟ್ಟದ ಸಮಿತಿಯನ್ನು ರಚಿಸಿತ್ತು.
ಮುಂಬೈನ ಖಾರ್ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಅಕ್ರಮ ನಿರ್ಮಾಣ ಕೈಗೊಂಡಿರುವ ಆರೋಪದಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ತಮಗೆ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿ ಬಾಲಿವುಡ್ ನಟಿ ಕಂಗನಾ ರನೌತ್ ಸಲ್ಲಿಸಿದ್ದ ಮನವಿಯನ್ನು ಮಂಗಳವಾರ ದಿಂಡೋಷಿಯಲ್ಲಿರುವ ಬಾಂಬೆ ನಗರ ನ್ಯಾಯಾಲಯವು ವಜಾಗೊಳಿಸಿದೆ. ಈ ಮಧ್ಯೆ, ರನೌತ್ ಅವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣಾದೇಶದ ಅವಧಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಲ್ ಎಸ್ ಚವಾಣ್ ಅವರಿದ್ದ ಪೀಠ ವಿಸ್ತರಿಸಿದ್ದು, ವಜಾ ಆದೇಶವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡಲಾಗಿದೆ.
ರನೌತ್ ಸಲ್ಲಿಸಿರುವ ಮನವಿಯ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ಅವರಿಗೆ ಜಾರಿಗೊಳಿಸಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಬಿಎಂಸಿ ಅಧಿಕಾರಿಗಳಿಗೆ ಸೆಷನ್ಸ್ ನ್ಯಾಯಾಧೀಶರು ನಿರ್ದೇಶಿಸಿದ್ದರು. ಹೈಕೋರ್ಟ್ ಮೆಟ್ಟಿಲೇರುವ ಸಂಬಂಧ ರನೌತ್‌ಗೆ ನೀಡಲಾಗಿರುವ ಮಧ್ಯಂತರ ರಕ್ಷಣಾದೇಶವನ್ನು ಆರು ವಾರಗಳಿಗೆ ವಿಸ್ತರಿಸಲಾಗಿದೆ.
ಐವರು ಮುಸ್ಲಿಂ ವ್ಯಕ್ತಿಗಳನ್ನು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿ ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ ಎಂದು ತೋರಿಸುವ ವೀಡಿಯೊ ಹಿನ್ನೆಲೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ನ್ಯಾಯಾಲಯ ಅಲ್ಲಿನ ಪೊಲೀಸರಿಂದ ವಿವರಣೆ ಬಯಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಕನಿಷ್ಠ ಆರು ಮಂದಿ ಪೊಲೀಸರು ಐವರು ಮುಸ್ಲಿಂ ಯುವಕರಿಗೆ ದೈಹಿಕವಾಗಿ ಹಲ್ಲೆ ಮಾಡಿ ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.
ಘಟನೆಯಲ್ಲಿ ನಿಧನರಾದ ವ್ಯಕ್ತಿಯೊಬ್ಬರ ತಾಯಿ ಅರ್ಜಿ ಸಲ್ಲಿಸಿದ್ದು ಆದ್ಯತೆ ಮೇರೆಗೆ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಅವರಿದ್ದ ಏಕ ಸದಸ್ಯ ಪೀಠವು ಪೊಲೀಸರಿಗೆ ಸ್ಥಿತಿಗತಿ ವರದಿ ಸಲ್ಲಿಸಲು ಸೂಚಿಸಿದೆ. ಪೊಲೀಸರಿಂದ ಸಂವಿಧಾನದತ್ತವಾಗಿ ದೊರೆತಿರುವ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ಮುಂದಿನ ವಿಚಾರಣೆ ಫೆ. 1ಕ್ಕೆ ನಿಗದಿಯಾಗಿದೆ.
ದೇಶದ ಟ್ರಕ್ ಚಾಲಕರ ದುಃಸ್ಥಿತಿ ಕುರಿತಂತೆ ಪಾಟ್ನಾ ಹೈಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದು ಅವರು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದರೂ ಸಮಾಜದ ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ನಿತ್ಯದ ಅವಶ್ಯಕತೆಗಳಿಗೆ ಬೇಕಾದ ಎಲ್ಲಾ ಸರಕುಗಳನ್ನು ಪೂರೈಸುವ ಅನನ್ಯ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಆದರೆ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳ ಪ್ರತಿಕೂಲ ಮನೋಭಾವದಿಂದಾಗಿ ಅವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ನ್ಯಾ ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿದೆ.
ಸುಮಿತ್ ಕುಮಾರ್ ಎಂಬ ಟ್ರಕ್ ಚಾಲಕನನ್ನು 35 ದಿನಗಳ ಕಾಲ ಪೊಲೀಸರು ಅಕ್ರಮವಾಗಿ ಬಂಧಿಸಿದ್ದ ಹಿನ್ನೆಲೆಯಲ್ಲಿ ಟ್ರಕ್ ಚಾಲಕನಿಗೆ ಪರಿಹಾರಧನವಾಗಿ ರೂ 5 ಲಕ್ಷ ನೀಡುವಂತೆ ಆದೇಶಿಸುತ್ತಾ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಟ್ರಕ್ ಚಾಲಕರ ಸ್ಥಿತಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಅದು ಬಿಹಾರ ಸರ್ಕಾರಕ್ಕೆ ಸೂಚಿಸಿದೆ. ಟ್ರಕ್ ಚಾಲಕರ ಅಹವಾಲು ಆಲಿಸಲು ಮತ್ತು ಕುಂದು ಕೊರತೆ ಪರಿಶೀಲಿಸಲು ಸಂಸ್ಥೆಯೊಂದನ್ನು ರಚಿಸಬೇಕು, ಅವರ ಆರೋಗ್ಯ, ವೇತನ, ಸಾಕ್ಷರತೆ, ತಂತ್ರಜ್ಞಾನದ ಲಭ್ಯತೆ ಬಗ್ಗೆ ಗಮನ ಹರಿಸಬೇಕು. ಟ್ರಕ್ ಚಾಲಕರ ಮೇಲೆ ದಬ್ಬಾಳಿಕೆ ನಡೆಸುವ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಇತ್ಯಾದಿ ಕ್ರಮಗಳನ್ನು ನ್ಯಾಯಾಲಯ ಸೂಚಿಸಿದೆ. ಅರ್ಜಿದಾರರ ಪರ ವಕೀಲ ಸಂಚಯ್ ಶ್ರೀವಾಸ್ತವ ಹಾಜರಿದ್ದರು. ವಕೀಲ ಪವನ್ ಕುಮಾರ್ ರಾಜ್ಯಸರ್ಕಾರದ ಪರ ವಾದ ಮಂಡಿಸಿದರು.