ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂಥ ಒಟಿಟಿ (ಓವರ್ ದಿ ಟಾಪ್) ತಾಣಗಳನ್ನು ನಿಯಂತ್ರಿಸುವ ಸಲುವಾಗಿ ಸ್ವಾಯತ್ತ ಸಂಸ್ಥೆ ಸೃಷ್ಟಿಸುವ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಅರ್ಜಿದಾರರ ಆತಂಕಗಳನ್ನು ಬಗೆಹರಿಸಲು ಏನು ಮಾಡಲಾಗಿದೆ ಎಂದು ತಿಳಿಸುವಂತೆ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿದೆ.
ವಕೀಲ ಶಶಾಂಕ್ ಶೇಖರ್ ಝಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕಳೆದ ಅಕ್ಟೋಬರ್‌ನಲ್ಲಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ಭಾರತೀಯ ಇಂಟರ್‌ನೆಟ್ ಮತ್ತು ಮೊಬೈಲ್ ಸಂಸ್ಥೆಗೆ (ಐಎಂಎಐ) ಪ್ರತಿಕ್ರಿಯಿಸುವಂತೆ ಸೂಚಿಸಿತ್ತು. ಪೀಠವು ಇಂದು ಅರ್ಜಿ ಹಿಂಪಡೆದು ಸರ್ಕಾರದ ಮುಂದೆ ಕೋರಿಕೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಆ ವೇಳೆ ಅರ್ಜಿದಾರರು ಬಾಕಿ ಉಳಿದಿರುವ ಮನವಿಗಳ ಜೊತೆ ಸೇರಿಸುವಂತೆ ಕೋರಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್‌ಗೆ ನ್ಯಾಯಾಲಯ ಸೂಚಿಸಿತು.
ಕಳೆದ ತಿಂಗಳು ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ನಟ ದೀಪ್ ಸಿಧು ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೊಮ್ಮೆ ಏಳು ದಿನಗಳ ಕಾಲ ದೆಹಲಿ ನ್ಯಾಯಾಲಯವು ವಿಸ್ತರಿಸಿದೆ.
ಏಳು ದಿನಗಳ ಸಿಧು ಪೊಲೀಸ್ ವಶದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ದೀಪ್ ಸಿಧು ಪ್ರಮುಖ ಪ್ರಚೋದನಕಾರ ಎಂಬುದು ದೆಹಲಿ ಪೊಲೀಸರ ವಾದವಾಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಶಸ್ತ್ರಾಸ್ತ್ರ ಕಾಯಿದೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ಅಡಿ ಸಿಧು ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಫೆಬ್ರುವರಿ 9ರಂದು ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಕಿರಿಯ ನ್ಯಾಯಿಕ ಅಧಿಕಾರಿಗೆ ಹಿರಿಯ ನ್ಯಾಯಿಕ ಅಧಿಕಾರಿಯು ಪ್ರಣಯಚೇಷ್ಟೆಯ ಸಂದೇಶ ರವಾನಿಸುವುದನ್ನುಒಪ್ಪಿಕೊಳ್ಳಲಾಗದು ಮತ್ತು ಅದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟವಾಗಿ ಹೇಳಿದೆ.
ಹಿರಿಯ ಜಿಲ್ಲಾ ನ್ಯಾಯಾಧೀಶ ಶಂಭೂ ಸಿಂಗ್ ರಘುವಂಶಿ ಅವರು ತಮಗೆ ಕಳುಹಿಸಿದ್ದ ಸಂದೇಶಗಳನ್ನು ಆಧರಿಸಿ ಕಿರಿಯ ನ್ಯಾಯಿಕ ಅಧಿಕಾರಿ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಆರಂಭಿಸಿದ್ದ ಶಿಸ್ತುಪಾಲನಾ ಪ್ರಕ್ರಿಯೆಯನ್ನು ವಜಾಗೊಳಿಸಲು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ನಿರಾಕರಿಸಿದೆ. ಕರ್ತವ್ಯದ ಸ್ಥಳದಲ್ಲಿ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ, ಪರಿಹಾರ) ಕಾಯಿದೆ 2013ರ ಅಡಿ ದಾಖಲಿಸಿದ್ದ ದೂರನ್ನು ಕಿರಿಯ ನ್ಯಾಯಿಕ ಅಧಿಕಾರಿ ಹಿಂಪಡೆದ ನಡುವೆಯೂ ಸರ್ವೋಚ್ಚ ನ್ಯಾಯಾಲಯವು ತನ್ನ ನಿಲುವು ಬದಲಿಸಲಿಲ್ಲ ಎಂದಿದೆ.
ಸದ್ಯ ಚಾಲ್ತಿಯಲ್ಲಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ಕಿಟ್ ಕುರಿತಾಗಿ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿಕಿತಾ ಜೇಕಬ್ ಅವರಿಗೆ ಸಂಬಂಧಿಸಿದ ಟ್ರಾನ್ಸಿಟ್ ಜಾಮೀನಿನ ಕುರಿತು ಬಾಂಬೆ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಲಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಪಿ ಡಿ ನಾಯಕ್ ನಡೆಸಿದರು.
ಟೂಲ್‌ಕಿಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಂತನು ಮುಲುಕ್ ಅವರ ಕುರಿತು ಔರಂಗಾಬಾದ್ ಪೀಠ ಹೊರಡಿಸಿದ ಆದೇಶವನ್ನು ಅಧ್ಯಯನ ಮಾಡಿದ ಬಳಿಕ ಜೇಕಬ್ ಅವರ ಜಾಮೀನು ಮನವಿಯ ಕುರಿತು ಆದೇಶ ಹೊರಡಿಸುವುದಾಗಿ ನ್ಯಾಯಾಲಯ ಹೇಳಿದೆ. ಅಲ್ಲಿಯವರೆಗೆ ಬಂಧನಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೇಕಬ್ ಅವರಿಗೆ ನ್ಯಾಯಾಲಯ ಭರವಸೆ ನೀಡಿದೆ.
ಮೇಘಾಲಯದಲ್ಲಿ ಬಡಕಟ್ಟೇತರ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಶಿಲ್ಲಾಂಗ್ ಟೈಮ್ಸ್ ಸಂಪಾದಕಿ ಪೆಟ್ರಿಶಿಯಾ ಮುಖಿಮ್ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾಗೊಳಿಸಲು ನಿರಾಕರಿಸಿದ್ದ ಮೇಘಾಲಯದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ತೀರ್ಪು ಕಾಯ್ದಿರಿಸಿದೆ.
ಮೇಘಾಲಯದಲ್ಲಿ ಕೆಲವು ಬುಡಕಟ್ಟೇತರ ಸಮುದಾಯಗಳ ಯುವಕರ ಮೇಲಿನ ದಾಳಿ ನಿಯಂತ್ರಿಸುವ ಸಂಬಂಧ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಮುಖಿಮ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಹಿರಿಯ ವಕೀಲೆ ವೃಂದಾ ಗ್ರೋವರ್ ಅವರು ಮುಖಿಮ್ ಅವರನ್ನು ಪ್ರತಿನಿಧಿಸಿದ್ದರು.