ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಂಧಿತ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಶಾಸನಬದ್ಧವಾಗಿ 90 ದಿನಗಳ ಅವಧಿಯಲ್ಲಿ ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸದಿರುವುದರಿಂದ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 167(2) ಅಡಿ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಎಲ್ಗಾರ್ ಪರಿಷತ್ ಸಮಾವೇಶ ನಡೆಸುತ್ತಿದ್ದಾಗ ಉದ್ಭವಿಸಿದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ವಕೀಲೆಯೂ ಆದ ಭಾರದ್ವಾಜ್ ಆರೋಪಿಯಾಗಿದ್ದಾರೆ. ಭಾರದ್ವಾಜ್ ಮತ್ತು ಅವರ ಸಹ ಆರೋಪಿಯು ಅವರ ಚಟುವಟಿಕೆಗಳನ್ನು ಉಲ್ಲೇಖಿಸಿದ್ದು, ಭಾರದ್ವಾಜ್ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯೆ ಎಂಬುದನ್ನು ತೋರಿಸಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿದೆ. ಭಾರದ್ವಾಜ್ ಸದ್ಯ ಮುಂಬೈನ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿದ್ದಾರೆ.
ದಂಪತಿಯ ಬದುಕು ಮತ್ತು ಸ್ವಾತಂತ್ರ್ಯದ ರಕ್ಷಣೆ ವಿಚಾರ ಬಂದಾಗ ಮಹಿಳೆ ಇಸ್ಲಾಂಗೆ ಮತಾಂತರವಾಗಿದ್ದಾಳೆ ಎನ್ನುವ ಅಂಶ ಪ್ರಸ್ತುತವಾಗುವುದಿಲ್ಲ ಎಂದಿರುವ ಅಲಾಹಾಬಾದ್ ಹೈಕೋರ್ಟ್ ಈಚೆಗೆ ಜೀವ ಬೆದರಿಕೆ ಎದುರಿಸುತ್ತಿದ್ದ ದಂಪತಿಗೆ ಪೊಲೀಸ್ ರಕ್ಷಣೆ ಒದಗಿಸಿದೆ. ಪ್ರಕರಣದಲ್ಲಿ ಮಹಿಳೆಯು ಇಸ್ಲಾಂಗೆ ಮತಾಂತರ ಹೊಂದಿದ್ದರು.
“ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ಅರ್ಜಿದಾರೆ ಮಹಿಳೆಯಿಂದ ಯಾವುದೇ ಆರೋಪವಿಲ್ಲದಿದ್ದ ಮೇಲೆ ಅರ್ಜಿದಾರರ ಸ್ವಾತಂತ್ರ್ಯದಲ್ಲಿ ಯಾವುದೇ ಹಸ್ತಕ್ಷೇಪವಾಗದಂತೆ ರಕ್ಷಣೆ ನೀಡಲು ಅವರು ಇಸ್ಲಾಂಗೆ ಮತಾಂತರವಾಗಿರುವ ವಿಷಯ ಪ್ರಸ್ತುತವಾಗುವುದಿಲ್ಲ” ಎಂದು ನ್ಯಾ. ಸಲೀಲ್ ಕುಮಾರ್ ರೈ ಅವರಿದ್ದ ಏಕಸದಸ್ಯ ಪೀಠ ಆದೇಶ ಮಾಡಿದೆ. ತಮ್ಮ ವೈವಾಹಿಕ ಜೀವನ ಮತ್ತು ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸಿದಂತೆ ದಂಪತಿ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಾಲಯವು ಈ ಆದೇಶ ಮಾಡಿದೆ.
ಕೋವಿಡ್ ಲಸಿಕೆ ಉತ್ಪಾದನೆಯ ಹೊಣೆ ಒತ್ತಿರುವ ಸಿರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಯಾವಾಗ ಹೆಚ್ಚಿನ ಭದ್ರತೆ ಕೋರಿ ಮನವಿ ಸಲ್ಲಿಸುತ್ತಾರೋ ಆಗ ರಾಜ್ಯ ಸರ್ಕಾರ ಹೆಚ್ಚಿನ ರಕ್ಷಣೆ ಒದಗಿಸಲಿದೆ ಎಂದು ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರ ವಿವರಿಸಿದೆ.
ಹೀಗಾಗಿ, ಪೂನಾವಾಲಾಗೆ ಝಡ್ ಪ್ಲಸ್ ಭದ್ರತೆ ಕಲ್ಪಿಸುವಂತೆ ಕೋರಿ ಮುಂಬೈ ಮೂಲದ ವಕೀಲರೊಬ್ಬರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದಾರ್ ಅವರಿದ್ದ ವಿಭಾಗೀಯ ಪೀಠವು ವಿಲೇವಾರಿ ಮಾಡಿತು. ಪೂನಾವಾಲಾ ಲಂಡನ್‌ನಿಂದ ವಾಪಸಾಗಿ ಭದ್ರತೆ ಕೋರಿದರೆ ಅಗತ್ಯ ಅಥವಾ ಹೆಚ್ಚಿನ ರಕ್ಷಣೆಯನ್ನು ತಕ್ಷಣ ಒದಗಿಸಲಾಗುವುದು ಎಂದು ಮುಖ್ಯ ಸರ್ಕಾರಿ ಅಭಿಯೋಜಕ ದೀಪಕ್ ಥಾಕರೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು.