ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 5-1-2021

>> ಮಿಶ್ರ‌ ಮಾದರಿ ವಿಚಾರಣೆ ಜಾರಿಗೊಳಿಸಿದ ಪಟ್ನಾ ಹೈಕೋರ್ಟ್ >> ಟ್ವಿಟರ್‌ ನಿಯಂತ್ರಣ ಕೋರಿ ಅರ್ಜಿ ಸಲ್ಲಿಕೆ >> ನಾಪತ್ತೆಯಾದವರ ಹೆಸರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಹುದು >> ಲೈಂಗಿಕ ಕಿರುಕುಳದೆಡೆಗೆ ಶೂನ್ಯ ಸಹಿಷ್ಣುತೆ ಹೊಂದಬೇಕು
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 5-1-2021
Published on

ಮಿಶ್ರ ಮಾದರಿ ಜಾರಿಗೆ ಮುಂದಾದ ಪಟ್ನಾ ಹೈಕೋರ್ಟ್‌: ಪ್ರಾಯೋಗಿಕ ಯೋಜನೆ ಅಂಗವಾಗಿ ದಿನನಿತ್ಯ ಭೌತಿಕ ಮತ್ತು ವರ್ಚುವಲ್‌ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿಗಳು

ಭೌತಿಕ ಮತ್ತು ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸಬಹುದಾದ ಪ್ರಾಯೋಗಿಕ ಮಿಶ್ರ ಮಾದರಿ ಯೋಜನೆಯನ್ನು ಪಟ್ನಾ ಹೈಕೋರ್ಟ್‌ ಜಾರಿಗೊಳಿಸಿದೆ. ಆರಂಭದಲ್ಲಿ ಎರಡು ವಾರಗಳಿಗೆ ಸೀಮಿತವಾಗಿ ಯೋಜನೆ ಜಾರಿಗೊಳಿಸಲಾಗಿದ್ದು, ಪ್ರತಿಯೊಬ್ಬ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠದ ಮುಂದೆ ತಲಾ 25 ಪ್ರಕರಣಗಳನ್ನು ಭೌತಿಕ ವಿಚಾರಣೆಗೆ ನಿಗದಿಗೊಳಿಸಲಾಗಿದೆ.

Patna High Court
Patna High Court

ಇದರ ಜೊತೆಗೆ ಮುಂದಿನ ಎರಡು ವಾರಗಳಿಗೆ 200 ಪ್ರಕರಣಗಳ ಬೃಹತ್‌ ಕೋಶ ಸಿದ್ಧಪಡಿಸಲಾಗಿದ್ದು, ಭೌತಿಕ ವಿಧಾನದ ಮೂಲಕ ವಿಚಾರಣೆ ಪೂರ್ಣಗೊಂಡ ಬಳಿಕ ಇದರಿಂದ ಆಯ್ದ ಪ್ರಕರಣಗಳ ವರ್ಚುವಲ್‌ ವಿಚಾರಣೆ ನಡೆಸಬೇಕಾಗುತ್ತದೆ. ಭೌತಿಕವಾಗಿ 25 ಪ್ರಕರಣಗಳನ್ನು ನಡೆಸುವುದರ ಜೊತೆಗೆ ವರ್ಚುವಲ್‌ ವಿಧಾನದ ಮೂಲಕ 5 ಪ್ರಕರಣಗಳ ವಿಚಾರಣೆಗೆ ನಿಗದಿಗೊಳಿಸಲಾಗಿದೆ. ಇದರಲ್ಲಿ ಜಾಮೀನು ಪ್ರಕರಣಗಳು, ಹೊಸ ವಿಚಾರಗಳು, ತುರ್ತಾಗಿ ಆಲಿಸಬೇಕಿರುವ ರಿಟ್‌ ಮನವಿ ಇತ್ಯಾದಿ ಸೇರಿವೆ. ಜನವರಿ 4ರಂದು ಹೊರಡಿಸಿರುವ ಸೂಚನೆಯು ನ್ಯಾಯಮೂರ್ತಿಗಳ ಅನುಕೂಲಕ್ಕೆ ಒಳಪಟ್ಟಿದ್ದು, ಈ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ (25 ಭೌತಿಕ + 5 ವರ್ಚುವಲ್‌ ವಿಚಾರಣೆ), ಸಂಬಂಧಪಟ್ಟ ನ್ಯಾಯಾಧೀಶರು 200-215 ಪ್ರಕರಣಗಳ ಕೋಶದಿಂದ ವಿವಿಧ ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಳ್ಳಬಹುದು. ಒಂದೊಮ್ಮೆ ಈ ಪ್ರಕರಣಗಳ ಕೋಶವು ಎರಡು ವಾರಗಳಲ್ಲಿ ಪೂರ್ಣಗೊಂಡರೆ ಹೊಸ ಪ್ರಕರಣಗಳ ಕೋಶವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಲಾಗಿದೆ.

ಟ್ವಿಟರ್‌ ಸೈದ್ಧಾಂತಿಕವಾಗಿ ಪಕ್ಷಪಾತಿಯಾಗಿದ್ದು, ಅನೈತಿಕವಾಗಿ ಕಾರ್ಯನಿರ್ವಹಿಸುತ್ತಿದೆ: ಸಾಮಾಜಿಕ ಮಾಧ್ಯಮ ನಿಯಂತ್ರಣ ಕೋರಿ ಸುಪ್ರೀಂನಲ್ಲಿ ಮನವಿ ಸಲ್ಲಿಕೆ

ಸಂಸತ್ತು ನಿರ್ದಿಷ್ಟ ಶಾಸನ ರೂಪಿಸುವವರೆಗೆ ಟ್ವಿಟರ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಎಸಗುವ ಪ್ರಮಾದಕ್ಕೆ ಅನುಗುಣವಾಗಿ ಕ್ರಿಮಿನಲ್‌ ಮತ್ತು ಸಿವಿಲ್‌ ಕಾನೂನಿನ ಅಡಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಅವುಗಳನ್ನು ನಿಯಂತ್ರಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೇಶದ ಸರ್ವೋಚ್ಚ ನ್ಯಾಯಾಂಗ ವ್ಯವಸ್ಥೆಯ ಶಕ್ತಿಯನ್ನು ಕುಂದಿಸುವ ಪರ್ಯಾಯ ಶಕ್ತಿ ಕೆಲಸ ಮಾಡಬಾರದು ಮತ್ತು ಜನರ ನಡುವೆ ಅಶಾಂತಿ, ಅಸಮಾಧಾನ ಸೃಷ್ಟಿಸುವಂತಿರಬಾರದು ಎಂದು ನ್ಯಾಯವಾದಿ ಮಹೆಕ್ ಮಹೇಶ್ವರಿ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರದ ನಿಯಂತ್ರಣ ಮತ್ತು ಮಧ್ಯಪ್ರವೇಶದ ಕೊರತೆಯ ಹಿನ್ನೆಲೆಯಲ್ಲಿ ತನ್ನ ಸಿದ್ಧಾಂತಕ್ಕೆ ಹೊಂದುವ ರೀತಿಯಲ್ಲಿ ಟ್ವಿಟರ್‌ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಮಹೇಶ್ವರಿ ವಾದಿಸಿದ್ದಾರೆ.

twitter
twitter

ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸರ್ಕಾರ ನಿಯಂತ್ರಣ ಮತ್ತು ಹಸ್ತಕ್ಷೇಪದ ಮಾಡದೇ ಇರುವುದರಿಂದ ತಮ್ಮ ಮಾರ್ಗ, ಸಿದ್ಧಾಂತ ಮತ್ತು ಆಸೆಗಳಿಗೆ ಸರಿಹೊಂದುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಟ್ವಿಟರ್ ಸರ್ಕಾರದ ನಿಯಂತ್ರಣವನ್ನು ಹೊಂದಿಲ್ಲ ಆದ್ದರಿಂದ ಅದು ಅನೈತಿಕವಾಗಿ ವರ್ತಿಸುತ್ತದೆ ಮತ್ತು ಅದರ ಸೈದ್ಧಾಂತಿಕ ಒಲವಿಗೆ ಸರಿಹೊಂದುವುದಿಲ್ಲವಾದ ಅನೇಕ ಖಾತೆಗಳನ್ನು ಗೊತ್ತಾಗದಂತೆ ನಿಷೇಧಿಸುವ (ಶ್ಯಾಡೊ ಬ್ಯಾನ್‌) ಕೆಲಸ ಮಾಡುತ್ತಿದೆ "ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನಾಪತ್ತೆಯಾದ ಆರೋಪಿಗಳ ಹೆಸರುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಹುದು: ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌

ನಾಪತ್ತೆಯಾದ ಆರೋಪಿಗಳು ಎಂದು ಘೋಷಿಸಲ್ಪಟ್ಟ ವ್ಯಕ್ತಿಗಳ ಹೆಸರುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಹುದು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಡಿಸೆಂಬರ್‌ನಲ್ಲಿ ಹೊರಡಿಸಿದ ಆದೇಶದಲ್ಲಿ ಹೇಳಿದೆ. ಪಂಜಾಬ್‌ ಪೊಲೀಸ್‌ ನಿಯಮಗಳು- 1934 ಅಡಿ ನ್ಯಾಯಮೂರ್ತಿ ಅಮೋಲ್‌ ರತ್ತನ್‌ ಸಿಂಗ್‌ ಅವರಿದ್ದ ಏಕಸದಸ್ಯ ಪೀಠವು ಈ ಘೋಷಣೆ ಹೊರಡಿಸಿದೆ.

Social Media
Social Media

ವಿಶೇಷವಾಗಿ, ಕೈಗೆ ಸಿಗದ ಅಥವಾ ನಾಪತ್ತೆಯಾಗಿರುವ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲದ ಕುರಿತು ನ್ಯಾಯಾಲಯವೇ ಘೋಷಿಸಿರುವಂತೆ ಕ್ರಮಕ್ಕೆ ಸಂಬಂಧಿಸಿದ ನಡಾವಳಿಗಳನ್ನು ಆಧರಿಸಿ, ಪದೇಪದೇ ವಾರೆಂಟ್‌ ಹೊರಡಿಸಿದರೂ ಸಿಗದವರ ಹೆಸರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಹುದು ಎಂದು ಪೀಠ ಹೇಳಿದೆ. “ಇಂಟರ್‌ನೆಟ್‌ ಸಹಾಯದಿಂದ ಬಳಸಬಹುದಾದ ಸಾಮಾಜಿಕ ಮಾಧ್ಯಮಗಳಲ್ಲಿ ಅಂಥ ವ್ಯಕ್ತಿಗಳ ಹೆಸರುಗಳನ್ನು ಪ್ರಕಟಿಸುವುದರಿಂದ ಯಾವುದೇ ಸಮಸ್ಯೆಯಾಗುತ್ತದೆ ಎಂದು ಈ ನ್ಯಾಯಾಲಯ ನಂಬುವುದಿಲ್ಲ (ಮೇಲ್ಕಾಣಿಸಿದ ನಿಯಮದ ಅನ್ವಯ ಶಾಸನಬದ್ಧವಾಗಿ ಆರೋಪಿ ಹೆಸರು ಪ್ರಕಟಿಸಬಹುದಾಗಿದೆ)” ಎಂದು ಪೀಠ ಹೇಳಿದೆ.

ಸಮಾಜ ಮಹಿಳೆಯನ್ನೇ ದೂಷಿಸುವುದರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಆಕೆ ಹೇಳಿಕೊಳ್ಳುವುದು ಕಷ್ಟ: ಮದ್ರಾಸ್ ಹೈಕೋರ್ಟ್

ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳದೆಡೆಗೆ 'ಶೂನ್ಯ ಸಹಿಷ್ಣುತೆ' ಹೊಂದಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮಂಗಳವಾರ ಪ್ರಬಲ ಅಭಿಪ್ರಾಯ ವ್ಯಕ್ತಪಡಿಸಿದರು. ದೀರ್ಘಕಾಲದಿಂದ ಮಹಿಳೆಯರು ಇಂತಹ ವಿಚಾರಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ಕಿರುಕುಳದ ಪ್ರಕರಣಗಳೆಡೆಗೆ "ನಾವು ಸಂಪೂರ್ಣವಾಗಿ ಶೂನ್ಯ ಸಹಿಷ್ಣುತೆ ಹೊಂದಬೇಕು" ಎಂದು ಸಿಜೆ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿದ್ದ ಪೀಠ ಹೇಳಿತು.

Chief Justice Sanjib Banerjee, Madras High Court
Chief Justice Sanjib Banerjee, Madras High Court

ಪುರುಷನ ದುರ್ನಡತೆಯನ್ನು ಮಹಿಳೆ ಕ್ಷಮಿಸಬಹುದು, ಕರ್ತವ್ಯದ ಸ್ಥಳದಲ್ಲಿ ಆರೋಪಿಯ ನಡತೆ ಮುಖ್ಯವಾಗಿದೆ ಎಂದು ಪೀಠ ಹೇಳಿದೆ. ಲೈಂಗಿಕ ಕಿರುಕುಳದ ಕುರಿತು ಮಹಿಳೆಯರು ದೂರು ಹೇಳಿದರೆ ಮಹಿಳೆಯರು ರೂಪವಂತೆಯಾಗಿದ್ದಾರೆ ಅಥವಾ ಆಕರ್ಷಕವಾಗಿ ಉಡುಪು ಧರಿಸುತ್ತಾರೆ. ಆ ಕಾರಣಕ್ಕೇ ಕಿರುಕುಳ ಉಂಟಾಗಿದೆ ಎಂದು ಆಕೆಯನ್ನೇ ನಿಂದಿಸಲಾಗುತ್ತದೆ. “ಯಾವುದೇ ಮಹಿಳೆಗೆ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿಕೊಳ್ಳುವುದು ಕಷ್ಟದ ಕೆಲಸ, ಏಕೆಂದರೆ ಸಮಾಜವು ಆಕೆಯತ್ತಲೇ ಬೆರಳು ತೋರುತ್ತದೆ!” ಎಂದು ಬೇಸರ ವ್ಯಕ್ತಪಡಿಸಿದರು.

Kannada Bar & Bench
kannada.barandbench.com