ಚಾರ್‌ಧಾಮ್ ವಾರ್ಷಿಕ ಯಾತ್ರೆ ಪುನರಾರಂಭಿಸುವ ಉದ್ದೇಶ ಇದೆಯೇ ಎಂಬ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಉತ್ತರಾಖಂಡ ಹೈಕೋರ್ಟ್ ಆದೇಶಿಸಿದೆ. ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜೂನ್ 22ರವರೆಗೆ ಯಾತ್ರಾರ್ಥಿಗಳಿಗೆ ಚಾರ್‌ಧಾಮ್‌ಗೆ ಪ್ರವೇಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಚಾರ್‌ಧಾಮ್ ಯಾತ್ರೆಯ ಆರಂಭದ ವಿವಿಧ ಹಂತಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ದಿಲೀಪ್ ಜಾವಲ್ಕರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಯಾತ್ರಾರ್ಥಿಗಳು ಕಟ್ಟುನಿಟ್ಟಾಗಿ ಅನುಸರಿಸುವುದಕ್ಕಾಗಿ ಮಾಡಿಕೊಂಡ ಸಿದ್ಧತೆಯ ಬಗ್ಗೆಯೂ ಮಾಹಿತಿ ನೀಡುವಂತೆ ಪೀಠ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 23ಕ್ಕೆ ನಿಗದಿಯಾಗಿದೆ.
ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ಸಾರ್ವಜನಿಕಗೊಳಿಸಲು ಬಿಹಾರ ಸರ್ಕಾರ ಸುತರಾಂ ಒಪ್ಪುತ್ತಿಲ್ಲ ಎಂದು ಶುಕ್ರವಾರ ಪಟ್ನಾ ಹೈಕೋರ್ಟ್ ಹೇಳಿದೆ. ಡಿಜಿಟಲ್ ಮಾಧ್ಯಮದ ಮೂಲಕ ನಿಖರ ಮತ್ತು ಕಾಲೋಚಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವಂತೆ ವಿಶೇಷ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎಸ್ ಕುಮಾರ್ ಅವರು ಹೇಳಿದ್ದಾರೆ.
“ಮಾಹಿತಿ ಪಡೆಯುವ ಹಕ್ಕು ಮೂಲಭೂತ ಹಕ್ಕಿನ ಭಾಗ ಎಂದು ಸುಪ್ರೀಂಕೋರ್ಟ್ ಹೇಳಿದ್ದು. ಆಕ್ಷೇಪಾರ್ಹವಾದ ಮಾಹಿತಿಯೂ ಆ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ, ಕೋವಿಡ್ ಸಂದರ್ಭದಲ್ಲಿ ಯಾವುದಾದರೂ ಕಾರಣಕ್ಕೆ ಸಂಭವಿಸಿದ ಸಾವಿನ ಮಾಹಿತಿಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಭಾರತದ ಪ್ರಜೆಗಳು ವಿಶೇಷವಾಗಿ ರಾಜ್ಯದ ನಿವಾಸಿಗಳಿಗೆ ನೀಡುವ ಹೊಣೆಗಾರಿಕೆಗೆ ಬಿಹಾರ ಸರ್ಕಾರ ಒಳಪಟ್ಟಿದೆ” ಎಂದು ನ್ಯಾಯಾಲಯ ಹೇಳಿದೆ.