
ಸುಪ್ರೀಂಕೋರ್ಟ್‌ನ ವಿವಿಧ ನ್ಯಾಯಪೀಠಗಳಿಗೆ ಪ್ರಕರಣಗಳ ಹಂಚಿಕೆಯ ಹೊಸ ರೋಸ್ಟರನ್ನು (ಪಟ್ಟಿ) ಸೋಮವಾರ ಪ್ರಕಟಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾಗಿದ್ದ ರೋಸ್ಟರ್‌ನ ಮುಂದುವರಿಕೆಯಂತೆ ಇದು ಇದ್ದು ಚುನಾವಣೆ, ಹೇಬಿಯಸ್ ಕಾರ್ಪಸ್ ಪ್ರಕರಣಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತು ಸಾಮಾಜಿಕ ನ್ಯಾಯದ ವಿಷಯಗಳನ್ನು ಸಿಜೆಐ, ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ರೋಹಿಂಟನ್ ಫಾಲಿ ನಾರಿಮನ್, ಯು ಯು ಲಲಿತ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠಗಳು ಆಲಿಸಲಿವೆ.
ಎರಡನೇ ಅತಿ ಹಿರಿಯ ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಅವರು ಮಧ್ಯಸ್ಥಿಕೆ, ಸಿವಿಲ್ ಪ್ರಕರಣಗಳಿಂದ ಹಿಡಿದು ಸಾಗರ ಸಂಬಂಧಿ ವ್ಯಾಜ್ಯಗಳ ವಿಚಾರಣೆ ನಡೆಸಲಿದ್ದಾರೆ. ಕಂಪನಿಯ ಕಾನೂನು, ಸೆಬಿ, ಬ್ಯಾಂಕಿಂಗ್, ಟ್ರಾಯ್ (TRAI) ಪ್ರಕರಣಗಳು ಸೇರಿದಂತೆ ಹದಿಮೂರು ಪ್ರಕರಣಗಳ ವಿಭಾಗಗಳನ್ನು ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರಿಗೆ ನೀಡಲಾಗಿದೆ.
ವಕೀಲ ಮೆಹಮೂದ್ ಪ್ರಾಚಾ ಅವರ ಕಚೇರಿಯ ಮೇಲಿನ ದೆಹಲಿ ಪೊಲೀಸರ ದಾಳಿಗೆ ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತು (ಎಸ್‌ಸಿಬಿಎ) ಆಘಾತ ವ್ಯಕ್ತಪಡಿಸಿದೆ. ಪ್ರಾಚಾ ಕಚೇರಿಯ ಮೇಲಿನ ಪೊಲೀಸರ ದಾಳಿಯು ಅನಿಯಂತ್ರಿತ, ಕಾನೂನುಬಾಹಿರ ಮತ್ತು ವಿವೇಚನಾರಹಿತವಾದ ಲಜ್ಜೆಗೆಟ್ಟ ಅಧಿಕಾರದ ದರ್ಪವಾಗಿದ್ದು, ಪ್ರಾಚಾ ಅವರ ವಿರುದ್ಧದ ಕ್ರಮವು ವಕೀಲರ ಸಮುದಾಯದ ಸದಸ್ಯರ ಕಾನೂನಿಗೆ ವಿರುದ್ಧವಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಸ್‌ಸಿಬಿಎ ತಿಳಿಸಿದೆ.
ಇದೇ ವೇಳೆ, ಉತ್ತರ ಪ್ರದೇಶದ ಇತಹ್ ಜಿಲ್ಲೆಯಲ್ಲಿ ವಕೀಲರೊಬ್ಬರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಸ್ಥಳೀಯ ಪೊಲೀಸರು ನಡೆಸಿರುವ ಹಲ್ಲೆಯನ್ನು ಕೂಡ ಎಸ್‌ಸಿಬಿಎ ಖಂಡಿಸಿದೆ. ವಕೀಲರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಅವರಿಗೆ ಥಳಿಸಿದ್ದು, ವಕೀಲರು ಮತ್ತು ಅವರ ಕುಟುಂಬ ಸದಸ್ಯರನ್ನು ಜೈಲಿಗೆ ಅಟ್ಟಲಾಗಿದೆ. ಸಂವಿಧಾನದ 21ನೇ ವಿಧಿಯಲ್ಲಿ ಖಾತರಿಪಡಿಸಲಾಗಿರುವ ನ್ಯಾಯಯುತ ವಿಚಾರಣೆಯು ಪೊಲೀಸರ ಕ್ರಮದಿಂದ ಉಲ್ಲಂಘನೆಯಾಗಿದೆ ಎಂದು ಎಸ್‌ಸಿಬಿಎ ಹೇಳಿದೆ.
ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಮೀಸಲಿರಿಸಿದ್ದ ತುರ್ತು ನಿಗಾ ಘಟಕ (ಐಸಿಯು) ಹಾಸಿಗೆಗಳ ಸಂಖ್ಯೆಯನ್ನು ಶೇ. 60ಕ್ಕೆ ಕಡಿತಗೊಳಿಸಿರುವ ತನ್ನ ಮರುಪರಿಶೀಲನಾ ನಿರ್ಧಾರದ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಸೋಮವಾರ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
33 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಕಡ್ಡಾಯವಾಗಿ ಶೇ. 80ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವ ಸೆಪ್ಟೆಂಬರ್ 12ರ ದೆಹಲಿ ಸರ್ಕಾರದ ಆದೇಶ ಪ್ರಶ್ನಿಸಿ ಆರೋಗ್ಯ ಸೌಲಭ್ಯ ಕಲ್ಪಿಸುವವರ ಒಕ್ಕೂಟ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ರಜಾಕಾಲೀನ ಏಕಸದಸ್ಯ ಪೀಠವು ಆದೇಶ ಹೊರಡಿಸಿತು.
ವೃತ್ತಿಯಲ್ಲಿರುವಾಗಲೇ ಮರಣ ಹೊಂದಿರುವ ಸರ್ಕಾರಿ ನೌಕರರ ಅವಲಂಬಿತರು ಮತ್ತು ಅವರ ಉತ್ತರಾಧಿಕಾರಿಗಳಿಗೆ ದಕ್ಕಬೇಕಾದ ಹಣವನ್ನು ನೀಡಲು ವೃಥಾ ಅಲೆದಾಡಿಸುವ ಸರ್ಕಾರಿ ನೌಕರರ ಪ್ರವೃತ್ತಿಯ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಅನಿಲ್ ಕ್ಷೇತ್ರಾರ್ಪಾಲ್ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಸೂಕ್ತ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಅದು ಇದೇ ಸಂದರ್ಭದಲ್ಲಿ ಆದೇಶಿಸಿದೆ.
ಬಲ್ಬೀರ್ ಕೌರ್ ಮತ್ತು ಪಂಜಾಬ್ ರಾಜ್ಯ ಸರ್ಕಾರದ ನಡುವಣ ಪ್ರಕರಣದಲ್ಲಿ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಹಣ ಬಿಡುಗಡೆ ಮಾಡುವಲ್ಲಿ ತೋರಿದ ನಿರಾಸಕ್ತಿಗಾಗಿ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ವಿಚಾರಣೆಯ ದಿನಾಂಕದಿಂದ ಒಂದು ತಿಂಗಳೊಳಗೆ ಅವಲಂಬಿತ ಮಹಿಳೆಗೆ ನೀಡಬೇಕಾದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಪಾವತಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಅರ್ಜಿಯನ್ನು ವಿಲೇವಾರಿ ಮಾಡಲಾಯಿತು. ಹಣದಲ್ಲಿ ಕೊರತೆ ಉಂಟಾದರೆ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯ ಮಹಿಳೆಗೆ ಇದೆ ಎಂದು ಪೀಠ ಇದೇ ಸಂದರ್ಭದಲ್ಲಿ ತಿಳಿಸಿತು.