ರಾಜಕೀಯ ರ‍್ಯಾಲಿಗಳಲ್ಲಿ ಮುಖಗವಸು ತೊಡದೆ ಭಾಗವಹಿಸಿದ್ದ ಸಂಸದ ಹಾಗೂ ವಕೀಲ ತೇಜಸ್ವಿ ಸೂರ್ಯ ಅವರಿಗೆ ದಂಡ ವಿಧಿಸದ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ʼನೀವು ಯಾವ ಬಗೆಯ ಸಂದೇಶ ರವಾನಿಸುತ್ತೀದ್ದೀರಿ?ʼ ಎಂದು ಕೂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಪ್ರಶ್ನಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ ಎಂದು ಟೀಕಿಸಿರುವ ನ್ಯಾಯಾಲಯ ಕೋವಿಡ್ ಸಂದರ್ಭದಲ್ಲಿ ಎಷ್ಟು ರ‍್ಯಾಲಿಗಳಿಗೆ ಅವಕಾಶ ನೀಡಲಾಗಿದೆ ಎಂದು ಕೂಡ ಪ್ರಶ್ನಿಸಿದೆ. ಅರ್ಜಿದಾರರಾದ ವಕೀಲ ರಮೇಶ್ ಪುತಿಗೆ ಅವರು ಇದುವರೆಗೆ ಯಾವೊಬ್ಬ ಖ್ಯಾತನಾಮರಿಗೂ ಸರ್ಕಾರ ದಂಡ ವಿಧಿಸಿಲ್ಲ ಎಂದು ಮಾಹಿತಿ ನೀಡಿದರು.
ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಹುಡುಗನನ್ನು ಮದುವೆಯಾಗಿದ್ದಳು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸೆ. 23ರಂದು ನೀಡಿದ್ದ ಆದೇಶದಲ್ಲಿ ವಿವಾಹಿತ ದಂಪತಿಗೆ ಪೊಲೀಸ್ ರಕ್ಷಣೆ ನೀಡಲು ಕೂಡ ನಿರಾಕರಿಸಿತ್ತು. ವಕೀಲ ಅಲ್ದಾನಿಶ್ ರೀನ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಒಬ್ಬ ವ್ಯಕ್ತಿ ಒಂದು ಧರ್ಮಕ್ಕೆ ಮತಾಂತರಗೊಂಡ ನಂತರ ಅಂತರ್‌ಧರ್ಮೀಯ ವಿವಾಹ ಊರ್ಜಿತವಾಗುವುದಿಲ್ಲ ಎಂಬ ತಪ್ಪು ನಿರ್ಣಯವನ್ನು ಹೈಕೋರ್ಟ್ ತೆಗೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಧರ್ಮದ ಹಕ್ಕು ಮತಾಂತರದ ಹಕ್ಕನ್ನು ಕೂಡ ಒಳಗೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂಸತ್ ಭವನ, ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ಸೇರಿದಂತೆ ಚಾರಿತ್ರಿಕ ಮಹತ್ವದ ಕಟ್ಟಡಗಳು ಸ್ಮಾರಕಗಳಿರುವ ನವದೆಹಲಿಯ ಸೆಂಟ್ರಲ್ ವಿಸ್ತಾ ಪ್ರದೇಶದ ಮರು ಅಭಿವೃದ್ಧಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸಂಬಂಧಪಟ್ಟವರಿಗೆ ಲಿಖಿತ ವಾದ ಸಲ್ಲಿಸಲು ನವೆಂಬರ್ 16ರವರೆಗೆ ಕಾಲಾವಕಾಶ ನೀಡಿತು. ಅಲ್ಲದೆ ಈ ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣ ಕಾರ್ಯ ನಡೆಯುವದಿಲ್ಲ ಎಂಬ ವಾದವನ್ನು ತಿರಸ್ಕರಿಸುತ್ತಿರುವುದಾಗಿ ನ್ಯಾಯಾಲಯ ಹೇಳಿದೆ. ನೂತನ ಸಂಸತ್ ಭವನ, ಪ್ರಧಾನಮಂತ್ರಿ, ಉಪ ರಾಷ್ಟ್ರಾಧ್ಯಕ್ಷರಿಗೆ ತಂಗಲು ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಮೂಲಕ ಈ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಅಮರವಾತಿ ಭೂ ಹಗರಣದ ತನಿಖೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ವಿರುದ್ಧ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಈ ಸಂಬಂಧ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ವರ್ಲ ರಾಮಯ್ಯ ಅವರಿಗೆ ನೋಟಿಸ್ ನೀಡಲಾಗಿದೆ. ಅಮರಾವತಿಯ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಜಗನ್ ಸರ್ಕಾರ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಭೂ ಹಗರಣದ ಲಾಭ ಪಡೆದಿದ್ದಾರೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳೊಬ್ಬರ ಹೆಣ್ಣುಮಕ್ಕಳು ಸೇರಿದಂತೆ ಅನೇಕ ಪ್ರಭಾವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ ಸರ್ಕಾರದ ಕ್ರಮದಿಂದ ಯಾವುದೇ ತೊಂದರೆಗೆ ಒಳಗಾಗದ ವರ್ಲ ರಾಮಯ್ಯ ಮತ್ತಿತರ ಟಿಡಿಪಿ ನಾಯಕರು ರಿಟ್ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆಂಧ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ದುಶ್ಯಂತ್ ದವೆ ವಾದಿಸಿದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ, ಎಂ ಆರ್ ಶಾ ಅವರಿದ್ದ ಪೀಠ ಟಿಡಿಪಿ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ.