ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆನ್‌ಲೈನ್ ಜೂಜಾಟದ ವಿರುದ್ಧ ತಮಿಳುನಾಡು ಸರ್ಕಾರ ಕಾಯಿದೆಯೊಂದನ್ನು ರೂಪಿಸುವ ಸಾಧ್ಯತೆಯಿದೆ. ಇದು ಈಗಾಗಲೇ ಜಾರಿಯಾಗಿರುವ ಪ್ರಶ್ನಾರ್ಹ ಸುಗ್ರೀವಾಜ್ಞೆಯಂತೆಯೇ ಇರುತ್ತದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ಗೆ ರಾಜ್ಯದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ತಿಳಿಸಿದ್ದಾರೆ.
ಆನ್‌ಲೈನ್ ರಮ್ಮಿ ಆಟ ಸೇರಿದಂತೆ ಆನ್‌ಲೈನ್ ಜೂಜಾಟ ಮತ್ತು ಗೇಮ್‌ಗಳನ್ನು ನಿಷೇಧಿಸುವ ಸಂಬಂಧ ತಮಿಳುನಾಡು ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಸೋಮವಾರ ನಿರಾಕರಿಸಿತು. ನ್ಯಾಯಮೂರ್ತಿಗಳಾದ ಆರ್ ಸುಬ್ಬಯ್ಯ ಮತ್ತು ಸಿ ಶರವಣನ್ ಅವರಿದ್ದ ವಿಭಾಗೀಯ ಪೀಠ ಜನವರಿ 18ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದೆ. ಆದರೆ ಆಕ್ಷೇಪಣಾ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಕೋರಿದೆ.
ಕೋವಿಡ್ ಅವಧಿಯಲ್ಲಿ ಉಂಟಾದ ವಿಚಾರಣೆಯ ವಿಳಂಬವನ್ನು ಸರಿದೂಗಿಸುವ ಉದ್ದೇಶದಿಂದ ಕರ್ನಾಟಕ ಹೈಕೋರ್ಟ್ 2021 ರಲ್ಲಿ ಹನ್ನೊಂದು ಶನಿವಾರಗಳಲ್ಲಿ ಕಾರ್ಯ ನಿರ್ವಹಿಸಲು ನಿರ್ಧರಿಸಿದೆ. ಮುಂದಿನ ವರ್ಷದ ಪ್ರತಿ ತಿಂಗಳ ಒಂದು ದಿನವನ್ನು ಕೆಲಸದ ದಿನವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಹೀಗೆ ಅದು ಕಾರ್ಯನಿರ್ವಹಿಸಲಿರುವ ಶನಿವಾರಗಳ ಪಟ್ಟಿ ಇಲ್ಲಿದೆ:
ಕಳೆದ ಶುಕ್ರವಾರ, ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ʼಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟ ಸರಿದೂಗಿಸಲು 2021ನೇ ಸಾಲಿನಲ್ಲಿ ಶನಿವಾರಗಳಂದೂ ನ್ಯಾಯಾಲಯ ಕೆಲಸ ಮಾಡಲಿದೆʼ ಎಂಬ ಸುಳಿವು ನೀಡಿತ್ತು. ಅಲ್ಲದೆ ಚಳಿಗಾಲದ ರಜೆಯನ್ನು ಕೂಡ ಅದು ಕಡಿತಗೊಳಿಸಿತ್ತು. ರಜೆ ಅವಧಿ ಡಿಸೆಂಬರ್ 24ರಿಂದ ಜನವರಿ 1ರವರೆಗೆ ಇರಲಿದೆ.
ಸಲ್ವಾ ಕಾರ್ಪೊರೇಷನ್‌ನ ವಾಣಿಜ್ಯಲಾಂಛನವಾದ (ಟ್ರೇಡ್‌ಮಾರ್ಕ್) ʼಸೆರೊʼ ಅಥವಾ ಸೆರೊ ಮಾದರಿಯ ಯಾವುದೇ ಚಿಹ್ನೆಗಳನ್ನು ಬಳಸದಂತೆ ವಸ್ತ್ರ ತಯಾರಿಕಾ ಕಂಪೆನಿ ಅರಿಸ್ಟೊ ಅಪೇರಲ್ಸ್‌ಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ ಎಸ್ ಪಟೇಲ್ ಅವರಿದ್ದ ಪೀಠ ತಡೆ ವಿಧಿಸಿದೆ.
ಸೆರೋನ್ ಮಾರ್ಕ್‌ನ ಅಡಿ ಅರಿಸ್ಟೊ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಮತ್ತು ಸೆರೊ ಮಾದರಿಯಲ್ಲಿಯೇ ಸೆರೋನ್ ಲೇಬಲ್ ಮಾರ್ಕ್ ನೋಂದಣಿಗೆ ಅರ್ಜಿ ಸಲ್ಲಿಸಿರುವುದನ್ನು ಪ್ರಶ್ನಿಸಿ ಸೆಲ್ವ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರದ ನಡುವಿನ ಸೆಣಸಾಟಕ್ಕೂ ಕಾರಣವಾಗಿರುವ ಲೈಫ್ ಮಿಷನ್ ಯೋಜನೆಯನ್ನು ಸಿಬಿಐ ತನಿಖೆಗೆ ಒಪ್ಪಿಸದಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸೋಮವಾರ ತನ್ನ ತೀರ್ಪು ಕಾಯ್ದಿರಿಸಿತು. ನ್ಯಾಯಾಲಯ ಡಿ. 17ರಿಂದ 24ರವರೆಗೆ ಸುದೀರ್ಘ ಕಾಲ ವಿವಿಧ ವಕೀಲರ ವಾದ ಆಲಿಸಿತ್ತು.
ನ್ಯಾಯಮೂರ್ತಿ ಪಿ ಸೋಮರಾಜನ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ತನಿಖೆಯ ಮೇಲೆ ವಿಧಿಸಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರೆಸಿದೆ. ಲೈಫ್ ಮಿಷನ್‌ನ ಸಿಇಒ ಅವರನ್ನು ಹಿರಿಯ ನ್ಯಾಯವಾದಿ ಕೆ ವಿ ವಿಶ್ವನಾಥನ್ ಪ್ರತಿನಿಧಿಸಿದ್ದಾರೆ. ಹಿರಿಯ ವಕೀಲ ಕೆ ರಾಮಕುಮಾರ್ ಅವರು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದರು.