ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 21-10-2020
ಪತ್ರಕರ್ತ ಪ್ರಶಾಂತ್ ಕನೋಜಿಯಾಗೆ ಜಾಮೀನು ನೀಡಿದ ಅಲಾಹಾಬಾದ್ ಹೈಕೋರ್ಟ್
ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರಿಗೆ ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಜಾಮೀನು ನೀಡಿದ್ದು, ಅವರು ಗುರುವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅಯೋಧ್ಯಾದ ರಾಮ ಮಂದಿರದ ವಿರೂಪಗೊಳಿಸಿದ ಚಿತ್ರವನ್ನು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ದೆಹಲಿಯ ನಿವಾಸದಿಂದ ಕನೋಜಿಯಾ ಅವರನ್ನು ವಶಕ್ಕೆ ಪಡೆದಿದ್ದರು.
ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕನೋಜಿಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಕನೋಜಿಯಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ ಕನೋಜಿಯಾ ಅವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಕಳೆದ ವರ್ಷ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಎರಡೂ ಕಡೆಗಳಲ್ಲಿ ಮುದ್ರಿಸಲಾದ ಎ4 ಕಾಗದ ಬಳಕೆ ಕುರಿತು ನಿರ್ಧರಿಸಲಿರುವ ಬಾಂಬೆ ಹೈಕೋರ್ಟ್
ನ್ಯಾಯಾಲಯದ ದಾಖಲಾತಿಗಳಿಗಾಗಿ ಎರಡೂ ಕಡೆಗಳಲ್ಲಿ ಮುದ್ರಿಸಲಾದ ಎ4 ಗಾತ್ರದ ಕಾಗದಗಳನ್ನು ಬಳಸಬೇಕೆಂದು ಕೋರಿರುವ ಮನವಿಯನ್ನು ತನ್ನ ಆಡಳಿತಾತ್ಮಕತೆಯ ಕಡೆಯಿಂದ ಸ್ವೀಕರಿಸಲಾಗುವುದು ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಈ ಸಂಬಂಧ ಅರ್ಜಿ ಸಲ್ಲಿಸಿರುವುದಕ್ಕೆ ಸಂತೋಷವಾಗಿದೆ ಎಂದು ಮೌಖಿಕವಾಗಿ ಪೀಠ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ಜಿ ಎಸ್ ಕುಲಕರ್ಣಿ ಅವರು ವಕೀಲ ಸುಜಯ್ ಜೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದರು. ನ್ಯಾಯಾಲಯವು ಅರ್ಜಿಗೆ ಸಮ್ಮತಿಸಿದರೆ ಸಾಕಷ್ಟು ಪೇಪರ್ ಮತ್ತು ಸಂಗ್ರಹ ಸ್ಥಳವನ್ನು ಉಳಿಸಬಹುದಾಗಿದೆ ಎಂದು ನ್ಯಾಯಾಲಯದ ಗಮನಸೆಳೆಯಲಾಗಿತ್ತು.
ಜಿಮ್, ಸಾರಿಗೆ, ಕ್ರೀಡಾ ಸೌಲಭ್ಯದ ಶುಲ್ಕವನ್ನು ಶೇ.100 ಕಡಿತ ಪರಿಗಣನೆಗೆ ಕೇರಳ ಹೈಕೋರ್ಟ್ ಸೂಚನೆ
ಕೋವಿಡ್ ಅವಧಿಯಲ್ಲಿ ಬಳಸಿಲ್ಲದ ಜಿಮ್, ಕ್ರೀಡೆ, ವೈದ್ಯಕೀಯ, ಫಿಟ್ನೆಸ್ ನಂತಹ ಶುಲ್ಕಗಳನ್ನು ನೂರು ಪ್ರತಿಶತ ಕಡಿತಗೊಳಿಸುವಂತೆ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್ ಕಾರ್ಯಕಾರಿ ಸಮಿತಿಗೆ ಕೇರಳ ಹೈಕೋರ್ಟ್ ಬುಧವಾರ ಸೂಚಿಸಿದೆ.
ವಿದ್ಯಾರ್ಥಿ ಅರ್ಜಿದಾರರು ಮತ್ತು ವಿಶ್ವವಿದ್ಯಾಲಯದ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ಅಮಿತ್ ರಾವಲ್ ಅವರು ನಿರ್ದೇಶನ ನೀಡಿದರು. ಮೇಲೆ ತಿಳಿಸಲಾದ ಸೌಲಭ್ಯಗಳನ್ನು ಬಳಸದ ಹಿನ್ನೆಲೆಯಲ್ಲಿ ಶುಲ್ಕ ಮನ್ನಾ ಮಾಡುವಂತೆ ಕೋರಿ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.