ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-07-2021

>> ಲೈವ್‌ ಸ್ಟ್ರೀಮಿಂಗ್‌ ಅನ್ನು ಔಪಚಾರಿಕವಾಗಿ ಆರಂಭಿಸಲಿರುವ ಗುಜರಾತ್‌ ಹೈಕೋರ್ಟ್‌ >> ಸುಪ್ರೀಂ ಕದತಟ್ಟಿದ ಸುವೇಂದು ಅಧಿಕಾರಿ >> ನ್ಯಾಯಮೂರ್ತಿಗಳನ್ನು ಸಂಬೋಧಿಸಲು ʼಸರ್‌ʼ ಎಂದು ಬಳಸಿ, ಯುವರ್‌ ಲಾರ್ಡ್‌ಶಿಪ್‌ ಕಡ್ಡಾಯವಲ್ಲ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-07-2021

ಗುಜರಾತ್‌ ಹೈಕೋರ್ಟ್‌ನಿಂದ ಔಪಚಾರಿಕವಾಗಿ ಕಲಾಪಗಳ ಲೈವ್‌ ಸ್ಟ್ರೀಮಿಂಗ್‌ ಆರಂಭ; ಜುಲೈ 17ರಂದು ಸಿಜೆಐ ರಮಣರಿಂದ ಚಾಲನೆ

ಗುಜರಾತ್‌ ಹೈಕೋರ್ಟ್‌ ಜುಲೈ 17ರಿಂದ ಔಪಚಾರಿಕವಾಗಿ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡಲಿದೆ. ಈ ಮೂಲಕ ತನ್ನ ಕಲಾಪಗಳನ್ನು ಸಾರ್ವಜನಿಕರಿಗೆ ಲೈವ್‌ ಸ್ಟ್ರೀಮಿಂಗ್‌ ಆರಂಭಿಸಿದ ದೇಶದ ಮೊದಲ ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಕಲಾಪ ಲೈವ್‌ ಸ್ಟ್ರೀಮಿಂಗ್‌ಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮತ್ತು ಇ-ಸಮಿತಿ ಅಧ್ಯಕ್ಷ ಡಿ ವೈ ಚಂದ್ರಚೂಡ್‌ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನ್ಯಾಯಮಮೂರ್ತಿ ಎಂ ಆರ್‌ ಶಾ ಭಾಗವಹಿಸಲಿದ್ದಾರೆ.

Gujarat High Court, live-streaming
Gujarat High Court, live-streaming

ಎಲ್ಲಾ ಇಚ್ಛೆಯುಳ್ಳ ಪೀಠಗಳ ಕಲಾಪವನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುವುದು ಎಂಧು ಹೈಕೋರ್ಟ್‌ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ನಿಯಮಗಳನ್ನು ರೂಪಿಸಿ ಅದಕ್ಕೆ ಜೂನ್‌ 20ರಂದು ಹೈಕೋರ್ಟ್‌ನ ಪೂರ್ಣಪೀಠವು ಒಪ್ಪಿಗೆ ನೀಡಿದೆ. ಕಳೆದ ವರ್ಷದ ಅಕ್ಟೋಬರ್‌ 26ರಿಂದ ಪ್ರಾಯೋಗಿಕವಾಗಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲಾಗುತ್ತಿದೆ.

ಮಮತಾ ಚುನಾವಣಾ ಮನವಿಯನ್ನು ಪಶ್ಚಿಮ ಬಂಗಾಳದಿಂದ ಹೊರಗೆ ವರ್ಗಾಯಿಸಲು ಕೋರಿ ಸುಪ್ರೀಂ ಕದತಟ್ಟಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಅವರ ಗೆಲುವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಮನವಿಯನ್ನು ಪಶ್ಚಿಮ ಬಂಗಾಳದಿಂದ ಹೊರಕ್ಕೆ ವರ್ಗಾಯಿಸುವಂತೆ ಕೋರಿ ಸುವೇಂದು ಅಧಿಕಾರಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

Suvendu Adhikari, Mamata Banerjee and Supreme Court
Suvendu Adhikari, Mamata Banerjee and Supreme Court

ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಶಂಪಾ ಸರ್ಕಾರ್‌ ನೇತೃತ್ವದ ಏಕಸದಸ್ಯ ಪೀಠವು ಇಂದು ಮನವಿಯ ವಿಚಾರಣೆ ನಡೆಸಿ, ಸುವೇಂದು ಅಧಿಕಾರಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ಮೊದಲಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಕೌಶಿಕ್‌ ಚಂದಾ ಅವರು ಜುಲೈ 7ರ ತಮ್ಮ ಆದೇಶದಲ್ಲಿ ರಾಜ್ಯದಲ್ಲಿ ನ್ಯಾಯಾಂಗದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದಿರುವುದನ್ನು ಸುವೇಂದು ಅಧಿಕಾರಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದು, ಇದರ ಆಧಾರದಲ್ಲಿ ಪ್ರಕರಣದ ವರ್ಗಾವಣೆ ಕೋರಿದ್ದಾರೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದ ಸುವೇಂದು ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ 1,956 ಮತಗಳಿಂದ ಮಮತಾ ಬ್ಯಾನರ್ಜಿ ವಿರುದ್ಧ ಜಯಗಳಿಸಿದ್ದರು.

ನ್ಯಾಯಮೂರ್ತಿಗಳನ್ನು ಸಂಬೋಧಿಸಲು ʼಸರ್‌ʼ ಎಂದು ಬಳಸಿ, ಯುವರ್‌ ಲಾರ್ಡ್‌ಶಿಪ್‌ ಕಡ್ಡಾಯವಲ್ಲ ಎಂದ ಮದ್ರಾಸ್‌ ಹೈಕೋರ್ಟ್‌

ಸರ್ಫೇಸಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್‌ ಹೈಕೋರ್ಟ್‌ ಬುಧವಾರ ವಕೀಲರು ನ್ಯಾಯಮೂರ್ತಿಗಳನ್ನು ʼಮೈ ಲಾರ್ಡ್‌ʼ ಅಥವಾ ʼಯುವರ್‌ ಲಾರ್ಡ್‌ಶಿಪ್‌ʼ ಬದಲಿಗೆ ʼಸರ್‌ʼ ಎಂದು ಸಂಬೋಧಿಸಬಹುದು ಎಂದು ಮೌಖಿಕವಾಗಿ ಹೇಳಿತು. ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್‌ ಅವರ ನೇತೃತ್ವದ ಪೀಠವನ್ನು ಯುವರ್‌ ಲಾರ್ಡ್‌ಶಿಪ್‌ ಬದಲಿಗೆ ಮೈ ಲಾರ್ಡ್‌ ಎಂದು ವಕೀಲರು ತಪ್ಪಾಗಿ ಹೇಳಿದಾಗ ಪೀಠ ಮೇಲಿನಂತೆ ಹೇಳಿತು.

Lawyers and Madras HC
Lawyers and Madras HC

ಮೈ ಲಾರ್ಡ್‌ಶಿಪ್‌ ಎಂದು ಬಳಸುವುದು ಸರಿಯಲ್ಲ ಎಂದು ವಕೀಲರ ತಪ್ಪನ್ನು ಸರಿಪಡಿಸಿದ ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಅವರು “ನೀವು ಸರ್‌ ಎಂದು ಸಂಬೋಧಿಸಬಹುದು. 'ಮೈ ಲಾರ್ಡ್' ಅಥವಾ 'ಯುವರ್‌ ಲಾರ್ಡ್‌ಶಿಪ್‌' ಯಾವುದಾದರೂ ಸರಿ” ಎಂದರು. ಕ್ಷಮೆಯಾಚಿಸಿದ ವಕೀಲರು ಮತ್ತದೇ ತಪ್ಪು ಮಾಡಿ ಮೈ ಲಾರ್ಡ್‌ಶಿಪ್‌ ಎಂದರು. ಆಗ ಪೀಠವು 'ಸರ್‌' ಎಂದು ಸಂಬೋಧಿಸುವುದರ ಬಗ್ಗೆ ನ್ಯಾಯಾಲಯವು ಯಾವುದೇ ಸಮಸ್ಯೆ ಹೊಂದಿಲ್ಲ ಎಂದಿತು. ಸರ್‌ ಎಂದು ಬಳಸಿ. ನಮಗೆ ಅದರ ಬಗ್ಗೆ ತೃಪ್ತಿ ಇದೆ. ಎಂದು ಸಿಜೆ ಬ್ಯಾನರ್ಜಿ ಪುನರುಚ್ಚರಿಸಿದರು. ವಸಹಾತುಶಾಹಿ ಕಾಲದಲ್ಲಿ ನ್ಯಾಯಮೂರ್ತಿಗಳನ್ನು ಸಂಬೋಧಿಸಲು ಬಳಸುತ್ತಿದ್ದ ಪದಗಳಿಗೆ ಹೈಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ಇತಿಶ್ರೀ ಹಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com