ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 06-09-2021

>> ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣಾ ತಕರಾರು ಅರ್ಜಿ ಹಿಂತೆಗೆತ >> ಮೆಗ್ಗಾನ್ ಸರ್ಕಾರಿ ಆಸ್ಪತ್ರೆ ಜಾಗ ಒತ್ತುವರಿಯಾಗದಂತೆ ನೋಡಿಕೊಳ್ಳಲು ನಿರ್ದೇಶನ >> ದೇಶ್‌ಮುಖ್‌ ಪ್ರಕರಣ: ವಕೀಲ ದಾಗಾ ಹಾಗೂ ಎಸ್‌ಐ ತಿವಾರಿ ನ್ಯಾಯಾಂಗ ಬಂಧನಕ್ಕೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 06-09-2021
Published on

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಚುನಾವಣಾ ತಕರಾರು ಅರ್ಜಿ ಹಿಂತೆಗೆತ

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ್ದ ‘‘ಮೀಸಲು ಆವರ್ತನ ನಿಯಮ-2021’’ ಅನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗಳನ್ನು ಹಿಂಪಡೆಯಲಾಗಿದೆ. ಮೀಸಲು ಆವರ್ತನ ನಿಯಮ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಕ್ಷೇತ್ರ ಮರುವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ್ದ ಕರಡು ಅಧಿಸೂಚನೆ ಪ್ರಶ್ನಿಸಿ ಡಿ ಎಂ ಮಲ್ಲಿಕಾರ್ಜುನ್ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗಿತ್ತು.

Karnataka State Election Commission
Karnataka State Election Commission

ಅರ್ಜಿದಾರ ಪರ ವಕೀಲರು ಮೆಮೋ ಸಲ್ಲಿಸಿ, ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಆದ್ದರಿಂದ, ಈ ಚುನಾವಣಾ ತಕರಾರು ಅರ್ಜಿಗಳನ್ನು ಹಿಂಪಡೆಯಲಾಗುವುದು. ಸರ್ಕಾರ ತಿದ್ದುಪಡಿ ತಂದ ನಂತರ ಅದನ್ನು ಪರಿಶೀಲಿಸಿ, ಒಂದೊಮ್ಮೆ ಮೀಸಲಾತಿ ವಿಚಾರದಲ್ಲಿ ಯಾವುದೇ ಕುಂದು-ಕೊರತೆ ಇದ್ದರೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರಲ್ಲದೆ, ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಅದನ್ನು ಪರಿಗಣಿಸಿದ ಪೀಠ ಅರ್ಜಿಗಳನ್ನು ಹಿಂಪಡೆಯಲು ಅನುಮತಿ ನೀಡಿತು.

ಮೆಗ್ಗಾನ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿದ ಜಾಗ ಒತ್ತುವರಿಯಾಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿದ ಜಾಗ ಒತ್ತುವರಿಯಾಗದಂತೆ ನೋಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ. ಆಸ್ಪತ್ರೆಯ ಜಾಗ ಒತ್ತುವರಿಯಾಗಿದೆ ಎಂದು ಶಿವಮೊಗ್ಗದ ಜಯನಗರ ನಿವಾಸಿ ಜಿ.ರಾಮು ಮತ್ತು ವಿನೋಬಾ ನಗರ ನಿವಾಸಿ ಮೋಹನ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Meggan Hospital
Meggan Hospital

ಅರ್ಜಿದಾರ ಪರ ವಕೀಲ ಪ್ರಿನ್ಸ್ ಐಸಾಕ್ ಅವರು “ಮೆಗ್ಗಾನ್ ಶಿವಮೊಗ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಾಗಿದ್ದು, ಮೈಸೂರು ಮಹಾರಾಜರು ಈ ಆಸ್ಪತ್ರೆಗೆ ಜಾಗ ನೀಡಿದ್ದರು. ಇದು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಸದ್ಯ ಅದಕ್ಕೆ ಸೇರಿದ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು. ಇದನ್ನು ಪರಿಗಣಿಸಿದ ಪೀಠವು ಅರ್ಜಿಗೆ ಉತ್ತರಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. ಮೆಗ್ಗಾನ್ ಆಸ್ಪತ್ರೆಗೆ ಸುತ್ತಮುತ್ತ 172 ಎಕರೆ ಜಾಗವಿದೆ. ಅದರಲ್ಲಿ 72 ಎಕರೆ ಜಮೀನನ್ನು ಮೈಸೂರು ಮಹಾರಾಜರು ಬಳುವಳಿಯಾಗಿ ನೀಡಿದ್ದರು. ಸದ್ಯ 136 ಎಕರೆ ಜಾಗ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ ಹಾಗೂ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅನಿಲ್‌ ದೇಶ್‌ಮುಖ್‌ ಪ್ರಕರಣ: ವಕೀಲ ಆನಂದ್‌ ದಾಗಾ ಹಾಗೂ ಎಸ್‌ಐ ಅಭಿಷೇಕ್‌ ತಿವಾರಿ ನ್ಯಾಯಾಂಗ ಬಂಧನಕ್ಕೆ

ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ದಾಖಲೆ ಸೋರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧಿತರಾಗಿದ್ದ ಮುಂಬೈ ಮೂಲದ ವಕೀಲ ಆನಂದ್‌ ದಾಗಾ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಅಭಿಷೇಕ್‌ ತಿವಾರಿ ಅವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ದೆಹಲಿ ನ್ಯಾಯಾಲಯವೊಂದು ನೀಡಿದೆ.

Anil Deshmukh, CBI
Anil Deshmukh, CBI

ಸಿಬಿಐ ವರದಿಯನ್ನು ಸೋರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಈ ಇಬ್ಬರ ಹೆಚ್ಚಿನ ತನಿಖೆ ಅಗತ್ಯವಿದ್ದು ಐದು ದಿನಗಳ ಕಾಲ ಬಂಧನದ ಅವಧಿ ವಿಸ್ತರಿಸಲು ಸಿಬಿಐ ಕೋರಿತ್ತು. ಆದರೆ, ಇದನ್ನು ಮನ್ನಿಸದ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿತು. ಇದಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಬೇಕಾದ ದಾಖಲೆಗಳನ್ನು ವಶಪಡಿಸಿಕೊಂಡಿರುವುದನ್ನು ಸಿಬಿಐನಿಂದ ಖಾತರಿಪಡಿಸಿಕೊಂಡ ನ್ಯಾಯಾಲಯವು ಆರೋಪಿಗಳು ಸಿಬಿಐ ವಶದಲ್ಲಿರುವ ಅಗತ್ಯತೆ ಇಲ್ಲವೆನ್ನುವುದನ್ನು ಮನಗಂಡು ನ್ಯಾಯಾಂಗ ಬಂಧನಕ್ಕೆ ನೀಡಿತು.

Kannada Bar & Bench
kannada.barandbench.com