ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 05-09-2021

>> ಬಿ ರಿಪೋರ್ಟ್‌ ತಿರಸ್ಕಾರ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಕಿವಿಮಾತು >> ಪ್ರತಿಭಟನಾ ನಿರತ ಆಫ್ಘನ್ನರ ಸ್ಥಳಾಂತರ ಸಂಬಂಧ ಕ್ರಮಕ್ಕೆ ಸೂಚನೆ >> ಕೋವಿಡ್‌ ಹಿನ್ನೆಲೆಯಲ್ಲಿ ಕೈದಿಗಳ ಬಿಡುಗಡೆ ಕುರಿತು ಸ್ಪಷ್ಟನೆ ಬಯಸಿದ ದೆಹಲಿ ಹೈಕೋರ್ಟ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 05-09-2021

ಬಿ ರಿಪೋರ್ಟ್‌ ತಿರಸ್ಕರಿಸುವಾಗ ನ್ಯಾಯಾಧೀಶರು ತಮ್ಮ ಬುದ್ಧಿ ಉಪಯೋಗಿಸಿ ಕಾರಣ ದಾಖಲಿಸಬೇಕು: ಕರ್ನಾಟಕ ಹೈಕೋರ್ಟ್‌

ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್‌ (ಸಾಕ್ಷ್ಯಾಧಾರಗಳು ಸಾಲದೇ ಪ್ರಕರಣವನ್ನು ಮುಚ್ಚಲಾಗುತ್ತಿದೆ ಎಂದು ತಿಳಿಸುವ ಅಂತಿಮ ವರದಿ) ತಿರಸ್ಕರಿಸುವಾಗ ನ್ಯಾಯಾಧೀಶರು ಕಾರಣಗಳನ್ನು ದಾಖಲಿಸಬೇಕು ಮತ್ತು ತಮ್ಮ ಬುದ್ಧಿ ಉಪಯೋಗಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. ನ್ಯಾಯಾಧೀಶರು ಬಿ ರಿಪೋರ್ಟ್‌ ಸ್ವೀಕರಿಸದೆ ದೂರುದಾರರ ವಾದವನ್ನು ಮಾತ್ರ ಒಪ್ಪಿ ಕ್ರಿಮಿನಲ್ ವಿಚಾರಣೆಗೆ ಸಮನ್ಸ್ ನೀಡಿದರೆ, ಅವರು ಆ ನಿರ್ಧಾರಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

Karnataka High Court
Karnataka High Court

ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್‌ ತಿರಸ್ಕರಿಸುವ ನ್ಯಾಯಾಧೀಶರೊಬ್ಬರ ನಿರ್ಧಾರ ಪ್ರಶ್ನಿಸಿ ನಾಗರಾಜ್ ರಾವ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕಾಗಿ ರಾವ್‌ ವಿರುದ್ಧ ಮಂಜುನಾಥ್‌ ಎಂಬುವವರು ಪ್ರಕರಣ ದಾಖಲಿಸಿದ್ದರು. ರಾವ್‌ ವಿರುದ್ಧ ಮಾಡಲಾದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ ಬಿ ರಿಪೋರ್ಟ್‌ ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯ ರಾವ್‌ ವಿರುದ್ಧ ಕ್ರಿಮಿನಲ್‌ ಪ್ರಕರಣಭ ದಾಖಲಿಸಿ ಸಮನ್ಸ್‌ ಜಾರಿಗೊಳಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರಾವ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಯುಎನ್‌ಎಚ್‌ಸಿಆರ್ ಕಚೇರಿ ಹೊರಗೆ ಪ್ರತಿಭಟಿಸುತ್ತಿರುವ ಆಫ್ಘನ್ನರ ಸ್ಥಳಾಂತರ: ಕ್ರಮಕ್ಕೆ ಸೂಚಿಸಿದ ದೆಹಲಿ ಹೈಕೋರ್ಟ್

ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಎಚ್‌ಸಿಆರ್) ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಆಫ್ಘನ್ ನಿರಾಶ್ರಿತರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಆದರೆ ಯಾವುದೇ ಆದೇಶ ನೀಡದ ನ್ಯಾ. ರೇಖಾ ಪಲ್ಲಿ ಅವರಿದ್ದ ಏಕಸದಸ್ಯ ಪೀಠ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲು ವಿಫಲವಾದರೆ ನಿರ್ದಿಷ್ಟ ನಿರ್ದೇಶನ ನೀಡಬೇಕಾಗುತ್ತದೆ ಎಂದಿತು. ನಿರಾಶ್ರಿತರನ್ನು ತೆರವುಗೊಳಿಸುವಂತೆ ವಸಂತವಿಹಾರ ಕಲ್ಯಾಣ ಸಂಸ್ಥೆ ಮನವಿಯನ್ನು ಪೀಠ ಆಲಿಸಿತು.

ಪ್ರತಿಭಟನಾಕಾರರು ಕೋವಿಡ್‌ ನಿಯಮ ಪಾಲಿಸದೇ ಇರುವುದರಿಂದ ಸೋಂಕು ತೀವ್ರವಾಗಿ ಪಸರಿಸುವ ಸಾಧ್ಯತೆಗಳಿವೆ, ನಿಯಮ ಮೀರಿ ಅವರ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ ಇತ್ಯಾದಿ ಅಂಶಗಳನ್ನು ಅರ್ಜಿದಾರರು ಉಲ್ಲೇಖಿಸಿದರು. ವಿಚಾರಣೆ ವೇಳೆ, ಸರ್ಕಾರದ ಧೋರಣೆಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಘಟನೆಯನ್ನು ತಾವು ವಿಶಾಲ ದೃಷ್ಟಿಯಿಂದ ನೋಡುತ್ತಿದ್ದು ನಿರಾಶ್ರಿತರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ದೆಹಲಿ ಸರ್ಕಾರ ವಾದಿಸಿತು. ಕೇಂದ್ರ ಸರ್ಕಾರ ಕೂಡ ಇದೇ ಬಗೆಯ ನಿಲುವು ವ್ಯಕ್ತಪಡಿಸಿತು. ದೆಹಲಿ ಪೊಲೀಸರು ಪ್ರಕರಣವನ್ನು ಪರಿಶೀಲಿಸುತ್ತಾರೆ ಕಾಲಾವಕಾಶ ನೀಡಬೇಕು ಎಂದು ವಕೀಲರು ಕೋರಿದರು. ಮನವಿಗೆ ಸ್ಪಂದಿಸಿದ ನ್ಯಾಯಾಲಯ ಪ್ರಕರಣವನ್ನು ಸೆ. 7ಕ್ಕೆ ಮುಂದೂಡಿತು.

ದರೋಡೆ, ಡಕಾಯಿತಿ, ಅಪಹರಣದ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳು ಕೋವಿಡ್ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆಯಲು ಅರ್ಹರೇ? ದೆಹಲಿ ಹೈಕೋರ್ಟ್ ಪ್ರಶ್ನೆ

ದರೋಡೆ, ಡಕಾಯಿತಿ, ಅಪಹರಣ ಮತ್ತು ಅದೇ ರೀತಿಯ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳು ಕೋವಿಡ್‌ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆಯಲು ಅರ್ಹರೇ ಎಂಬ ಕುರಿತು ದೆಹಲಿ ಹೈಕೋರ್ಟ್‌ ಉನ್ನತಾಧಿಕಾರ ಸಮಿತಿಯಿಂದ (ಎಚ್‌ಪಿಸಿ) ಸ್ಪಷ್ಟನೆ ಬಯಸಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಜೈಲುಗಳಿಂದ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಮಾರ್ಗಸೂಚಿ ರೂಪಿಸಲು ಉನ್ನತಾಧಿಕಾರ ಸಮಿತಿಗಳನ್ನು ರಚಿಸಲಾಗಿತ್ತು.

Delhi High Court
Delhi High Court

ಸಮಿತಿಯ ವಿನಾಯಿತಿ ಷರತ್ತಿನಲ್ಲಿ ದರೋಡೆ, ಡಕಾಯಿತಿ, ಅಪಹರಣ ಮತ್ತು ಅದೇ ರೀತಿಯ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ನ್ಯಾ. ಸುಬ್ರಮಣಿಯಂ ಸ್ವಾಮಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು. ವಿಚಾರಣಾಧೀನ ಕೈದಿಗಳ ಬಿಡುಗಡೆಗಾಗಿ ಮಾಡಲಾದ ಮಾರ್ಗಸೂಚಿಗಳನ್ನು ವಿನಾಯಿತಿ ನಿಯಮಕ್ಕೆ ಒಳಪಡದ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳಿಗೂ ವಿಸ್ತರಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದೆ.

Related Stories

No stories found.
Kannada Bar & Bench
kannada.barandbench.com