ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |29-3-2021

>> ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಿದ ಕರ್ನಾಟಕ ಹೈಕೋರ್ಟ್ >>ಪಡಿತರ ಅಕ್ಕಿ ವಿತರಣೆ: ಆಯೋಗದ ನಿರ್ಧಾರಕ್ಕೆಕೇರಳ ಹೈಕೋರ್ಟ್ ತಡೆ‌ >>ಸರ್ಕಾರದ ಹಣವನ್ನು ಪ್ರಚಾರಕ್ಕೆ ಬಳಸದಂತೆ ಆಯೋಗ ಮಾರ್ಗಸೂಚಿ ನೀಡಬಹುದು: ಮದ್ರಾಸ್‌ ಹೈಕೋರ್ಟ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |29-3-2021

ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಬೆಳೆನಷ್ಟ ಪರಿಹಾರದ ವಿಮಾ ಯೋಜನೆಯಾದ ‘ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ’ಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ (ಅಖಂಡ ಕರ್ನಾಟಕ ರೈತ ಸಂಘ ವರ್ಸಸ್‌ ಭಾರತ ಸರ್ಕಾರ). ಯಾವುದೇ ರೈತ ಈ ಯೋಜನೆಯಿಂದ ಹೊರಗುಳಿದಿದ್ದರೆ ಆತ ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ದೂರು ಪರಿಹಾರ ಸಮಿತಿಯ ಮುಂದೆ ಹಾಜರಾಗಬಹುದು ಎಂದು ಪ್ರಕರಣದ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿದ್ದ ವಿಭಾಗೀಯ ಪೀಠವು ತಿಳಿಸಿದೆ.

Farmland
Farmland

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಸಂಬಂಧ ಅಖಂಡ ಕರ್ನಾಟಕ ರೈತ ಸಂಘ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ಪೀಠವು ನಡೆಸಿತು. 2016 ಹಾಗೂ ಆನಂತರದ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಬೆಳೆ ನಷ್ಟದ ಸಂಬಂಧ ತುರ್ತು ಬೆಳೆ ವಿಮೆ ಪರಿಹಾರವನ್ನು ಸಂತ್ರಸ್ತ ರೈತರಿಗೆ ವಿತರಿಸಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಬೆಳೆ ವಿಮೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ, ಪ್ರಚುರಪಡಿಸುವ ಬಗ್ಗೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ವಿಚಾರಣೆ ವೇಳೆ ಸೂಚಿಸಿತು. ಏಪ್ರಿಲ್‌ 21ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ಪಡಿತರ ಅಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿದ್ದ ಚುನಾವಣಾ ಆಯೋಗದ ನಿರ್ಧಾರಕ್ಕೆ ಕೇರಳ ಹೈಕೋರ್ಟ್‌ ತಡೆ

ಹೆಚ್ಚುವರಿ ಪಡಿತರ ಅಕ್ಕಿ ವಿತರಣೆ ಸ್ಥಗಿತಕ್ಕೆ ನಿರ್ದೇಶನ ನೀಡಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಕೇರಳ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ಆದ್ಯತಾರಹಿತ ಬಿಳಿ ಮತ್ತು ನೀಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ 10 ಕೆಜಿ ಅಕ್ಕಿಯನ್ನು ರೂ.15ಕ್ಕೆ ವಿತರಿಸಲು ಕೇರಳ ಸರ್ಕಾರವು ಇದೇ ವರ್ಷದ ಫೆಬ್ರವರಿಯಲ್ಲಿ ಸರ್ಕಾರಿ ಆದೇಶ ಹೊರಡಿಸಿತ್ತು. ಆದರೆ, ಚುನಾವಣಾ ಆಯೋಗವು ಈ ಕಾರ್ಯಕ್ರಮ ಜಾರಿಯನ್ನು ತಡೆ ಹಿಡಿದಿತ್ತು. ಈ ಸಂಬಂಧ ಕೇರಳ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಚುನಾವಣಾ ಆಯೋಗದ ನಿರ್ದೇಶನಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು ಕೇರಳ ಸರ್ಕಾರವು ಪಡಿತರ ವಿತರಣೆಯನ್ನು ಮುಂದುವರೆಸಲು ಅವಕಾಶ ನೀಡಿದೆ. ನ್ಯಾ. ಪಿ ವಿ ಆಶಾ ಅವರಿದ್ದ ಪೀಠವು ಈ ಆದೇಶವನ್ನು ನೀಡಿತು.

Kerala High Court
Kerala High Court

ಆದೇಶದ ವೇಳೆ, ಈ ಕಲ್ಯಾಣ ಯೋಜನೆಯನ್ನು ಆಡಳಿತಾರೂಢ ಪಕ್ಷದ ಪರವಾಗಿ ಮತದಾರರನ್ನು ಪ್ರಭಾವಿಸುವ ಯಾವುದೇ ಕ್ರಮಗಳಿಗೆ ಬಳಸಿಕೊಳ್ಳದಂತೆಯೂ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಚುನಾವಣಾ ಘೋಷಣೆಗೂ ಮುನ್ನವೇ ಜನವರಿಯಲ್ಲಿ ಆಯವ್ಯಯವನ್ನು ಮಂಡಿಸಲಾದ ವೇಳೆ ಈ ಯೋಜನೆ ಬಗ್ಗೆ ವಿತ್ತ ಸಚಿವರು ತಿಳಿಸಿದ್ದರು. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿತ್ತು ಎಂದು ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರಂಜಿತ್‌ ತಂಪನ್‌ ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ಹಣವನ್ನು ಚುನಾವಣಾ ಪ್ರಚಾರಕ್ಕೆ ಬೇಕಾಬಿಟ್ಟಿ ಬಳಸದಿರಲು ಚುನಾವಣಾ ಆಯೋಗ ಮಾರ್ಗಸೂಚಿ ನೀಡಬಹುದು: ಮದ್ರಾಸ್‌ ಹೈಕೋರ್ಟ್‌

ಸರ್ಕಾರದ ನಿಧಿಯನ್ನು ಚುನಾವಣಾ ಪ್ರಚಾರಕ್ಕಾಗಿ ಬೇಕಾಬಿಟ್ಟಿ ಬಳಸದಂತೆ ತಡೆಯಲು ಕೆಲವೊಂದು ಮಾರ್ಗಸೂಚಿಗಳನ್ನು ನೀಡಲು ಕಟ್ಟುನಿಟ್ಟಿನ ಚುನಾವಣಾ ಆಯೋಗಕ್ಕೆ ಸಾಧ್ಯವಿದೆ ಎಂದು ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಪ್ರಕರಣದ ವಿಚಾರಣೆಯೊಂದರ ವೇಳೆ ಅಭಿಪ್ರಾಯಪಟ್ಟಿದೆ.

Election
Election

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸರ್ಕಾರದ ಸಂಬಳವನ್ನು ಪಡೆಯುತ್ತಿರುವ ಸಚಿವರು, ವಿಪಕ್ಷ ನಾಯಕರು ಮುಂತಾದವರು ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನಿರ್ದೇಶಿಸಬೇಕು ಎಂದು ಕೋರಿ ಅಹಿಂಸಾ ಸೋಶಿಯಲಿಸ್ಟ್‌ ಪಾರ್ಟಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ಸೆಂಥಿಲ್‌ ರಾಮಮೂರ್ತಿ ಅವರಿದ್ದ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು. ಆದರೆ, ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲದಿರುವ ಬಗ್ಗೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತು. ಆದರ್ಶಯುತ ಜಗತ್ತಿನಲ್ಲಿ ಸರ್ಕಾರಿ ಹುದ್ದೆಗಳಲ್ಲಿರುವವರು ಚುನಾವಣಾ ಪ್ರಚಾರದ ವೇಳೆ ತಮಗಿರುವ ಸರ್ಕಾರಿ ಸವಲತ್ತು, ಸೌಲಭ್ಯಗಳನ್ನು ಬಳಸದಿರುವ ಮೂಲಕ ಎಲ್ಲರಿಗೂ ಸಮನಾದ ಏಕರೂಪ ನಿಯಮವನ್ನು ಅನುಸರಿಸಲು ಸಾಧ್ಯ ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

Related Stories

No stories found.
Kannada Bar & Bench
kannada.barandbench.com