ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |03-07-2021

> ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸಿದ ಕರ್ನಾಟಕ ಹೈಕೋರ್ಟ್ > ಆರೋಪಿಗಳ ಪತ್ರವ್ಯವಹಾರದಲ್ಲಿ ಜೈಲು ಮೇಲ್ವಿಚಾರಕರು ಹಸ್ತಕ್ಷೇಪ ಮಾಡಬಹುದೇ? > ವಿದ್ಯುತ್‌ ಕಾಯಿದೆಯ ಸೆಕ್ಷನ್‌ಗಳ ವ್ಯಾಖ್ಯಾನಕ್ಕೆ ಎಜಿ ನೆರವು ಕೋರಿದ ಸುಪ್ರೀಂ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |03-07-2021

[ಕೋವಿಡ್‌ ಹಿನ್ನೆಲೆ] ಮಧ್ಯಂತರ ಆದೇಶಗಳ ಅವಧಿಯನ್ನು ಆಗಸ್ಟ್ 2ರವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್

ತಾನು ಹೊರಡಿಸಿರುವ ಮಧ್ಯಂತರ ಆದೇಶಗಳು ಸೇರಿದಂತೆ, ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ಮಧ್ಯಂತರ ಆದೇಶಗಳ ಅವಧಿಯನ್ನು ಆಗಸ್ಟ್‌ 2, 2021ರವರೆಗೆ ವಿಸ್ತರಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ.

Karnataka High Court
Karnataka High Court

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ಅವರಿದ್ದ ವಿಭಾಗೀಯ ಪೀಠವು ಮೊದಲ ಬಾರಿಗೆ ಮಧ್ಯಂತರ ಆದೇಶಗಳ ಅವಧಿಯನ್ನು ಏಪ್ರಿಲ್‌ 16, 2020ರಲ್ಲಿ ಆದೇಶದ ಮೂಲಕ ವಿಸ್ತರಿಸಿತ್ತು. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯಗಳನ್ನು ಮೊರೆಹೋಗಲು ಸಾಧ್ಯವಾಗದೆ ತೊಂದರೆಗೆ ಸಿಲುಕಬಾರದೆಂದು ನ್ಯಾಯಾಲವು ಈ ಆದೇಶ ಹೊರಡಿಸಿತ್ತು.

ಆರೋಪಿಗಳ ಪತ್ರವ್ಯವಹಾರದ ಮೇಲೆ ಜೈಲು ಮೇಲ್ವಿಚಾರಕರು ಹಸ್ತಕ್ಷೇಪ ಮಾಡಬಹುದೇ? ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಡಾ. ಆನಂದ್‌ ತೇಲ್ತುಂಬ್ಡೆ ಮತ್ತು ವರ್ನನ್‌ ಗೋನ್ಸಾಲ್ವೆನ್ಸ್‌ ಅವರಿಗೆ ಕಳುಹಿಸಲಾದ ಪತ್ರಗಳನ್ನು ಹಾಗೂ ಅವರು ಜೈಲಿನಿಂದ ಬರೆಯುವ ಪತ್ರಗಳನ್ನು ತಳೋಜಾ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕರು ತಡೆಹಿಡಿಯುತ್ತಿದ್ದಾರೆ ಎಂದು ಆರೋಪಿಸಿ ಆರೋಪಿಗಳ ಪತ್ನಿಯರಾದ ರಮಾ ಆನಂದ್ ತೇಲ್ತುಂಬ್ಡೆ ಹಾಗೂ ಸೂಸಾನ್‌ ಅಬ್ರಹಾಂ ಗೋನ್ಸಾಲ್ವೆನ್ಸ್ ಅವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Anand Teltumbde, Vernon Gonsalves
Anand Teltumbde, Vernon Gonsalves

ತಮಗೆ ಬರೆಯಲಾಗಿರುವ ಪತ್ರಗಳನ್ನು ಒಂದೋ ತಡೆಹಿಡಿಯಲಾಗಿದೆ ಇಲ್ಲವೇ ತಡವಾಗಿ ಕಳುಹಿಸಲಾಗಿದೆ. ಅಲ್ಲದೆ, ತಾವು ಬರೆದಿರುವ ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿಲ್ಲ ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ. ಜೈಲು ಅಧೀಕ್ಷಕರ ಕ್ರಮವು ಉದ್ದೇಶಪೂರ್ವಕವಾಗಿದ್ದು, ದ್ವೇಷದಿಂದ ಕೂಡಿದೆ. ಇದು ಮಹಾರಾಷ್ಟ್ರ ಜೈಲು ನಿಯಮಾವಳಿಗಳ ಪ್ರಕಾರ ದೊರೆತಿರುವ ಶಾಸನಾತ್ಮಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ವಿದ್ಯುತ್‌ ಕಾಯಿದೆಯ ಸೆಕ್ಷನ್‌ಗಳ ವ್ಯಾಖ್ಯಾನಕ್ಕೆ ಅಟಾರ್ನಿ ಜನರಲ್‌ ನೆರವು ಕೋರಿದ ಸುಪ್ರೀಂ ಕೋರ್ಟ್‌

ವಿದ್ಯುತ್‌ ಕಾಯಿದೆ 2003ರ ಸೆಕ್ಷನ್‌ 135 ಮತ್ತು ಸೆಕ್ಷನ್ 145ರ ವಿವರಣೆಯನ್ನು ಕೋರಿ ನೆರವು ನೀಡುವಂತೆ ಸುಪ್ರೀಂ ಕೋರ್ಟ್‌ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಪ್ರಕರಣವೊಂದರ ಸಂಬಂಧ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗಳು ಅರ್ಜಿಯೊಂದನ್ನು ವಜಾಗೊಳಿಸಿದ ನಂತರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಅಧೀನ ನ್ಯಾಯಾಲಯಗಳಲ್ಲಿಯೂ ಸಹ ಪ್ರಕರಣವನ್ನು ವಜಾಗೊಳಿಸಲಾಗಿತ್ತು.

Electricity transmission tower
Electricity transmission tower

ವಿದ್ಯುತ್‌ ಕಳ್ಳತನದ ಆರೋಪದಡಿ ಅರ್ಜಿದಾರರಿಗೆ ವಿದ್ಯುತ್‌ ಕಾಯಿದೆಯ ಸೆಕ್ಷನ್‌ 126 ರ ಅಡಿ ಎರಡು ಮೆಮೊಗಳನ್ನು ನೀಡಲಾಗಿತ್ತು. ತಂದೆ ಮತ್ತು ಮಕ್ಕಳಿಬ್ಬರಿಗೂ ಪ್ರತ್ಯೇಕ ಮೊಮೆಗಳನ್ನು ನೀಡಲಾಗಿತ್ತು. ಇದರ ವಿರುದ್ಧ ಅವರಿಬ್ಬರೂ ಸಿವಿಲ್‌ ಮೊಕದ್ದಮೆಗಳನ್ನು ಹೂಡಲು ಮುಂದಾದರು. ಆದರೆ, ಅಧೀನ ನ್ಯಾಯಾಲಯಗಳಲ್ಲಿ ಹಾಗೂ ಹೈಕೋರ್ಟ್‌ನಲ್ಲಿ ಅರ್ಜಿ ತಿರಸ್ಕೃತವಾಯಿತು. ವಿದ್ಯುತ್‌ ಕಾಯಿದೆಯ ಸೆಕ್ಷನ್‌ 145ರ ಅನ್ವಯ ಸಿವಿಲ್‌ ಕೋರ್ಟ್‌ಗಳು ಈ ರೀತಿಯ ಮೊಕದ್ದಮೆಯನ್ನು ನಿರ್ವಹಿಸಲು ಆಗದು ಎನ್ನುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಅರ್ಜಿ ತಿರಸ್ಕರಿಸಿದ್ದವು. ಈ ಸಂಬಂಧದ ಜಿಜ್ಞಾಸೆಯನ್ನು ಪರಿಹರಿಸಿಕೊಳ್ಳಲು ಇದೀಗ ಸುಪ್ರೀಂ ಕೋರ್ಟ್‌ ಅಟಾರ್ನಿ ಜನರಲ್‌ ಅವರ ನೆರವು ಕೇಳಿದೆ.

Related Stories

No stories found.
Kannada Bar & Bench
kannada.barandbench.com