ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 13-08-2021

>> ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲಾಗದು: ಕರ್ನಾಟಕ ಹೈಕೋರ್ಟ್ >> ನಾಮನಿರ್ದೇಶನ ಶಿಫಾರಸ್ಸುಗಳನ್ನು ರಾಜ್ಯಪಾಲರು ಸಮಂಜಸ ಅವಧಿಯೊಳಗೆ ತೀರ್ಮಾನಿಸಲಿ: ಬಾಂಬೆ ಹೈಕೋರ್ಟ್‌ >> ಶಾಲೆ ಪುನಾರಂಭ ಕೋರಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 13-08-2021
Published on

ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡುವ ಯಾವುದೇ ಆದೇಶ ನೀಡಲಾಗದು ಎಂದ ಕರ್ನಾಟಕ ಹೈಕೋರ್ಟ್

ಸ್ಥಳೀಯ ಸಂಸ್ಥೆ ಚುನಾವಣೆಗಳ ಮುಂದೂಡುವಿಕೆಗೆ ಸಮ್ಮತಿಸುವುದು ಸಾಂವಿಧಾನಿಕ ಅಧಿಕಾರಕ್ಕೆ ವಿರುದ್ಧವಾಗಿದ್ದು ಅಂತಹ ಯಾವುದೇ ಆದೇಶವನ್ನು ತಾನು ನೀಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮುಂದೂಡುವಂತೆ ರಾಜ್ಯದ ಗ್ರಾಮೀಣ ಭಾಗದ ಕೆಲ ನಾಗರಿಕರು ಮಧ್ಯಪ್ರವೇಶಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹಾಗೂ ನ್ಯಾ.ಸಂಜಯ್‌ ಗೌಡ ಅವರ ಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು.

Karnataka HC, COVID-19
Karnataka HC, COVID-19

ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದಾದರೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಲಾಗದೇ ಎಂದು ಪ್ರಶ್ನಿಸಿದ ಪೀಠ “ಚುನಾವಣೆಗಳನ್ನು ಮುಂದೂಡಬಹುದಾದ ಒಂದೇ ಒಂದು ಕಾನೂನನ್ನು ನಮತೆ ತೋರಿಸಿ,” ಎಂದಿತು. ಸ್ಥಳೀಯ ಸಂಸ್ಥೆ ಚುನಾವಣೆಗಳ ಮುಂದೂಡುವಿಕೆಗೆ ಸಮ್ಮತಿಸುವುದು ಸಾಂವಿಧಾನಿಕ ಅಧಿಕಾರಕ್ಕೆ ವಿರುದ್ಧವಾಗಿದ್ದು ಅಂತಹ ಯಾವುದೇ ಆದೇಶವನ್ನು ತಾನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ವಿಧಾನ ಪರಿಷತ್‌ ನಾಮನಿರ್ದೇಶನ ಶಿಫಾರಸ್ಸುಗಳನ್ನು ರಾಜ್ಯಪಾಲರು ಸಮಂಜಸ ಅವಧಿಯೊಳಗೆ ತೀರ್ಮಾನಿಸಬೇಕು: ಬಾಂಬೆ ಹೈಕೋರ್ಟ್‌

ವಿಧಾನಪರಿಷತ್ತಿಗೆ ಸಚಿವ ಸಂಪುಟವು ಮಾಡುವ ನಾಮನಿರ್ದೇಶನ ಶಿಫಾರಸ್ಸುಗಳನ್ನು ಸಮಂಜಸ ಅವಧಿಯೊಳಗೆ ಒಪ್ಪುವುದು ಇಲ್ಲವೇ ಹಿಂತಿರುಗಿಸುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯವಾಗಿದೆ. ಹಾಗೆ ಮಾಡದೆ ಹೋದರೆ ಅದು ಮೂಲ ಶಾಸನಾತ್ಮಕ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

Governor of Maharashtra, Maharashtra Legislative Assembly
Governor of Maharashtra, Maharashtra Legislative Assembly

ಮಹಾರಾಷ್ಟ್ರ ಸಚಿವ ಸಂಪುಟವು ಮೇಲ್ಮನೆಗೆ ಶಿಫಾರಸ್ಸು ಮಾಡಿದ್ದ ಹನ್ನೆರಡು ನಾಮನಿರ್ದೇಶನಗಳನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್‌ ಸಿಂಗ್ ಕೋಶಿಯಾರಿ ಅವರು ಯಾವುದೇ ಕ್ರಮಕೈಗೊಳ್ಳದೆ ಹಾಗೆಯೇ ಇರಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಬಾಂಬೆ ಹೈಕೋರ್ಟ್‌ನಲ್ಲಿ ದಾಖಲಿಸಲಾಗಿತ್ತು. ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾ. ಜಿ ಎಸ್‌ ಕುಲಕರ್ಣಿ ಅವರಿದ್ದ ಪೀಠವು ಅರ್ಜಿಯು ನಿರ್ವಹಣೆಗೆ ಅರ್ಹ ಎಂದು ಹೇಳಿತು. ಒಂದು ವೇಳೆ ಶಿಫಾರಸ್ಸು ಮಾಡಿರುವ ಹೆಸರುಗಳಲ್ಲಿ ರಾಜ್ಯಪಾಲರಿಗೆ ಭಿನ್ನ ಅಭಿಪ್ರಾಯವೇನಾದರೂ ಇದ್ದರೆ ಅದನ್ನು ಮುಖ್ಯಮಂತ್ರಿಗಳಿಗೆ ಸಮಂಜಸ ಕಾಲಾವಧಿಯೊಳಗೆ ತಿಳಿಸುವುದು ಅವರ ಕರ್ತವ್ಯವಾಗಿದೆ. ಇಲ್ಲವಾದರೆ, ಮೂಲ ಶಾಸನಾತ್ಮಕ ಉದ್ದೇಶವೇ ವಿಫಲವಾಗಲಿದೆ ಎಂದಿತು.

ಶಾಲೆ ಪುನಾರಂಭಿಸಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಹನ್ನೆರಡನೇ ತರಗತಿ ವಿದ್ಯಾರ್ಥಿ

ದೇಶಾದ್ಯಂತ ಪರೀಕ್ಷೆಗಳನ್ನು ಮುಂದೂಡುವಂತೆ, ಶಾಲಾಕಾಲೇಜುಗಳ ಪುನಾರಂಭವನ್ನು ಮುಂದೂಡುವಂತೆ ಆಗ್ರಹಗಳು ಕೇಳಿ ಬರುತ್ತಿರುವ ವೇಳೆ ಹನ್ನೆರಡನೇ ತರಗತಿಯ ವಿದ್ಯಾರ್ಥಿಯೊಬ್ಬರು ಕೋವಿಡ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಚ್ಚಲಾಗಿರುವ ಶಾಲೆಗಳನ್ನು ಪುನಾರಂಭಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರ ವಿದ್ಯಾರ್ಥಿ ಅಮರ್‌ ಪ್ರೇಮ್‌ ಪ್ರಕಾಶ್ ಅವರು ತಾವು ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು ಅದರಲ್ಲಿಯೂ ವಿಶೇಷವಾಗಿ ದುರ್ಬಲ ವರ್ಗಗಳ ಮಕ್ಕಳನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿದ್ದಾರೆ.

Classroom
Classroom

ಕೋವಿಡ್‌ನಿಂದ ಶಾಲೆಗಳು ಮುಚ್ಚಿರುವುದು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಅಡ್ಡಪರಿಣಾಮಗಳಿಗೆ ಕಾರಣವಾಗಿದೆ. ಭೌತಿಕವಾಗಿ ತರಗತಿಗಳು ನಡೆಯದ ಕಾರಣಕ್ಕೆ ಹಾಗೂ ಆನ್‌ಲೈನ್‌ ತರಗತಿಗಳಿಗೆ ಒಡ್ಡಿಕೊಳ್ಳಲು ಸವಲತ್ತುಗಳು ಇಲ್ಲದ ಕಾರಣದಿಂದ ಈ ವಿದ್ಯಾರ್ಥಿಗಳನ್ನು ದೈಹಿಕ ದುಡಿಮೆಗೆ ಹಚ್ಚುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅರ್ಜಿದಾರರ ಪರ ವಕೀಲ ರವಿ ಪ್ರಕಾಶ್‌ ಮೆಹ್ರೋತ್ರಾ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com