ಮೊಟ್ಟೆ ಖರೀದಿ ಟೆಂಡರ್‌ಗೆ ಸಂಬಂಧಿಸಿದಂತೆ ರೂ ಒಂದು ಕೋಟಿಗೂ ಹೆಚ್ಚು ಹಣದ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಬೆಳಗಾವಿ ಲೋಕಾಯುಕ್ತ ಕಚೇರಿಗೆ ಸೋಮವಾರ ದೂರು ಸಲ್ಲಿಸಲಾಗಿದೆ. ಈ ಸಂಬಂಧ ವಕೀಲ ಸುರೇಂದ್ರ ಉಗಾರೆ ಅವರು ದೂರು ನೀಡಿದ್ದು ಸಚಿವೆ ಮಾತ್ರವಲ್ಲದೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಸಹೋದರ ಚಿಕ್ಕೋಡಿಯ ಸಂಜಯ ಅರಗೆ, ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ವಿರುದ್ಧವೂ ಆರೋಪ ಮಾಡಲಾಗಿದೆ.
ಕನ್ನಡ ಸುದ್ದಿ ವಾಹಿನಿ ʼನ್ಯೂಸ್ ಫಸ್ಟ್ʼನಲ್ಲಿ ಪ್ರಸಾರವಾದ ವರದಿಯನ್ನು ದೂರು ಆಧರಿಸಿದೆ. “ಸಚಿವೆ ಜೊಲ್ಲೆ ಅವರ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ಅವರು ಸಚಿವೆ ಅವರನ್ನು ಭೆಟ್ಟಿ ಮಾಡಿಸಿದ್ದು ಗಂಗಾವತಿ ಶಾಸಕ ಪರಣ್ಣ ಅವರು ಜೊಲ್ಲೆ ಅವರಿಗೆ ಒಂದು ಕೋಟಿ ರೂ ನೀಡಬೇಕು ಹಾಗೂ ತಮಗೆ ರೂ 30 ಲಕ್ಷ ತಿಂಗಳಿಗೆ ಕೊಡಬೆಕು ಎಂದು ಮಾತನಾಡಿದ್ದು ಸಚಿವರ ಹೇಳಿಕೆಯ ಮೇರೆಗೆ ಸಹೋದರ ಅರಗೆ ಅವರು ರೂ ಒಂದು ಕೋಟಿಯಲ್ಲಿ ಮುಂಗಡವಾಗಿ ರೂ 30 ಲಕ್ಷ ತೆಗೆದುಕೊಂಡಿದ್ದಾರೆ. ಅದರಂತೆ ಗಂಗಾವತಿ ಶಾಸಕರು ಮುಂಗಡವಾಗಿ ಒಂದು ಉಂಗರವನ್ನು ಪಡೆದುಕೊಂಡಿದ್ದು ಪ್ರಸಾರವಾಗಿದೆ. ನಾಲ್ವರೂ ಭ್ರಷ್ಟಾಚಾರ ಎಸಗಿದ್ದು ಸುದ್ದಿ ಮಾಧ್ಯಮದ ವರದಿ ಮೂಲಕ ತಿಳಿದುಬಂದಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಜೊತೆಗೆ ವರದಿಯ ದೃಶ್ಯಾವಳಿಗಳನ್ನೂ ಸಲ್ಲಿಸಲಾಗಿದೆ. ದೂರಿನ ವಿವರ ಇಲ್ಲಿದೆ:
ಆನ್‌ಲೈನ್ ರಮ್ಮಿ, ಆನ್‌ಲೈನ್ ಪೋಕರ್ ಕುರಿತಂತೆ ತಮಿಳುನಾಡು ಸರ್ಕಾರ ಹೇರಿದ್ದ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತನ್ನ ತೀರ್ಪು ಕಾಯ್ದಿರಿಸಿದೆ. ಅಡ್ವೊಕೇಟ್ ಜನರಲ್ ಆರ್ ಷಣ್ಮುಗಸುಂದರಂ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು. ಅರ್ಜಿದಾರರು ಸಂಕ್ಷಿಪ್ತ ಪ್ರತ್ಯುತ್ತರ ಅರ್ಜಿಗಳನ್ನು ಸಲ್ಲಿಸಿದರು.
ಪ್ರಕರಣದಲ್ಲಿ ವಿವಿಧ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಅಭಿಷೇಕ್ ಮನುಸಿಂಘ್ವಿ, ಆರ್ಯಮ ಸುಂದರಂ, ಎಕೆ ಗಂಗೂಲಿ ಪಿ ಎಸ್ ರಾಮನ್ ವಾದಿಸಿದ್ದರು. ತಮಿಳುನಾಡಿನಲ್ಲಿ ಸರ್ಕಾರ, ಅಡ್ವೊಕೇಟ್ ಜನರಲ್ ಬದಲಾದ ಪರಿಣಾಮ ಜುಲೈ 5ರಂದು ಹೊಸದಾಗಿ ವಾದ ಆಲಿಸಲಾಗಿತ್ತು. ಸೋಮವಾರ ಅಂತಿಮ ವಾದ ಮಂಡಿಸಲಾಗಿದ್ದು ನ್ಯಾಯಾಲಯ ಆಗಸ್ಟ್ 3ರಂದು ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ.
ಎರಡು ವರ್ಷಗಳ ಕಾಲ ಡೆಬಿಟ್ ಮ್ಯೂಚುಯಲ್ ಫಂಡ್ ಯೋಜನೆ ಪ್ರಕಟಿಸದಂತೆ ಭಾರತದ ಅತಿದೊಡ್ಡ ಹೂಡಿಕೆ ಸಂಸ್ಥೆ ಫ್ರಾಂಕ್ಲಿನ್ ಟೆಂಪಲ್ಟನ್ ಅಸೆಟ್ ಮ್ಯಾನೇಜ್‌ಮೆಂಟ್‌ಗೆ ತಡೆ ನೀಡಿರುವ ಭಾರತೀಯ ಷೇರು ವಿನಿಮಯ ಮಂಡಳಿಯ (ಸೆಬಿ) ಆದೇಶಕ್ಕೆ ಸಂಬಂಧಿಸಿದಂತೆ ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ಮುಂಬೈನ ಎಸ್‌ಎಟಿ ಮುಂದೆ ಸಲ್ಲಿಸಿರುವ ಮೇಲ್ಮನವಿ ಬಾಕಿ ಇರುವುದರಿಂದ ತಾನು ಯಾವುದೇ ಹೊಸ ಸಾಲ ಯೋಜನೆ ಪ್ರಕಟಿಸುವುದಿಲ್ಲ ಎಂದು ಫ್ರಾಂಕ್ಲಿನ್ ಟೆಂಪಲ್ಟನ್ ಸಲ್ಲಿಸಿದ ಹೇಳಿಕೆಯನ್ನು ನ್ಯಾ. ಅಬ್ದುಲ್ ನಜೀರ್ ಮತ್ತು ನ್ಯಾ. ಕೃಷ್ಣ ಮುರಾರಿ ಅವರಿದ್ದ ಪೀಠ ಅಧಿಕೃತವಾಗಿ ಪರಿಗಣಿಸಿತು. ಕಳೆದ ವರ್ಷ ಸ್ಥಗಿತಗೊಂಡ ಆರು ಸಾಲ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆ ನಿರ್ವಹಣೆ ಮತ್ತು ಸಲಹಾ ಶುಲ್ಕಕ್ಕೆ ಬಡ್ಡಿ ಸೇರಿಸಿ ರೂ 512 ಕೋಟಿ ಮರುಪಾವತಿಸುವಂತೆ ಸೆಬಿ, ಫ್ರಾಂಕ್ಲಿನ್ ಟೆಂಪಲ್ಟನ್‌ಗೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಎಸ್‌ಎಟಿ ತಡೆ ಹಿಡಿದಿತ್ತು. ಇದೇ ವೇಳೆ ಜನರಿಗೆ ಮೋಸ ಮಾಡದಂತೆ ನೋಡಿಕೊಳ್ಳಬೇಕು ಎಂದ ನ್ಯಾಯಾಲಯ ಸಾಧ್ಯವಾದಷ್ಟು ಬೇಗ ಪ್ರಕರಣವನ್ನು ವಿಲೇವಾರಿ ಮಾಡುವಂತೆ ಸೂಚಿಸಿತು.