ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-07-2021

>> ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಫ್ಲಿಪ್‌ಕಾರ್ಟ್‌ >> ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಛೀಮಾರಿ >> ಅಶ್ಲೀಲ ಚಿತ್ರ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿದ ಶೆರ್ಲಿನ್‌ ಚೋಪ್ರಾ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-07-2021

ಸಿಸಿಐ ತನಿಖೆ: ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಫ್ಲಿಪ್‌ಕಾರ್ಟ್‌

ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆಯನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದ ಜುಲೈ 23ರ ಕರ್ನಾಟಕ ಹೈಕೋರ್ಟ್‌ ತೀರ್ಪುನ್ನು ಪ್ರಶ್ನಿಸಿ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಸಂಸ್ಥೆಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

flipkart
flipkart

ಸ್ಮಾರ್ಟ್‌ಫೋನ್‌ ಮಾರಾಟ ಮಾಡುವಾಗ ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ವಿರುದ್ಧ ಸಿಸಿಐ ತನಿಖೆಗೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇ-ಕಾಮರ್ಸ್‌ ಸಂಸ್ಥೆಗಳು ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಬಳಿಕ ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮಾ ಮತ್ತು ನಟರಾಜ್‌ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು.

ಕೋವಿಡ್‌ ಬಿಕ್ಕಟ್ಟಿನಿಂದ ಕೇವಲ 27 ಮಕ್ಕಳು ಅನಾಥರಾಗಿದ್ದಾರೆ ಎಂದ ಪಶ್ಚಿಮ ಬಂಗಾಳ ಸರ್ಕಾರ: ಸುಪ್ರೀಂಕೋರ್ಟ್‌ ಕೆಂಗಣ್ಣು

ರಾಜ್ಯದಲ್ಲಿ ಕೋವಿಡ್‌ನಿಂದ ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಸಂಖ್ಯೆ 27 ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದ್ದಕ್ಕೆ ಸುಪ್ರೀಂಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಅಮಿಕಸ್‌ ಕ್ಯೂರಿ ಗೌರವ್‌ ಅಗರ್‌ವಾಲ್‌ ಅವರು ದೇಶದೆಲ್ಲೆಡೆ ಒಟ್ಟು 6,855 ಮಕ್ಕಳು ಅನಾಥರಾಗಿದ್ದಾರೆ ಎಂದರು. ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇವಲ 27 ಮಕ್ಕಳು ಅನಾಥರಾಗಿದ್ದಾರೆ ಎಂದಾಗ ನ್ಯಾಯಾಲಯ ಅನುಮಾನ ವ್ಯಕ್ತಪಡಿಸಿತು.

Supreme Court and Justices Nageswara Rao and Aniruddha Bose
Supreme Court and Justices Nageswara Rao and Aniruddha Bose

ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ ಕೋವಿಡ್‌ ಹರಡುವುದನ್ನು ತಪ್ಪಿಸಲು ಮತ್ತು ಮಕ್ಕಳ ಕಲ್ಯಾಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕ್ರಮಗಳ ಬಗ್ಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಅನಿರುದ್ಧ ಬೋಸ್‌ ಅವರಿದ್ದ ಪೀಠ ನಡೆಸುತ್ತಿತ್ತು. ಪಶ್ಚಿಮ ಬಂಗಾಳದ ಅಂಕಿಅಂಶಗಳನ್ನು ಆಲಿಸಿದ ನ್ಯಾಯಪೀಠವು, "ನಿಮ್ಮ ರಾಜ್ಯದಲ್ಲಿ (ಪಶ್ಚಿಮ ಬಂಗಾಳದಲ್ಲಿ) ಕೋವಿಡ್‌ ಇರಲಿಲ್ಲ ಎಂದಲ್ಲ. ಬೇರೆ ಅಂಕಿ ಅಂಶಗಳನ್ನು ಒಮ್ಮೆ ಗಮನಿಸಿ. ಈ ಅಂಕಿ ಅಂಶಗಳನ್ನು ನಾವು ಪರಿಗಣಿಸುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿತು. ಜೊತೆಗೆ ಮುಂದಿನ ವಿಚಾರಣೆ ವೇಳೆಗೆ ಮಕ್ಕಳ ಹಕ್ಕು ರಕ್ಷಣೆ ಮತ್ತು ಮಕ್ಕಳ ಕಳ್ಳಸಾಗಣೆ ತಡೆ ನಿರ್ದೇಶನಾಲಯದ ನಿರ್ದೇಶಕರು ಹಾಜರಿರುವಂತೆ ಸೂಚಿಸಿತು.

ಅಶ್ಲೀಲ ಚಿತ್ರ ಪ್ರಕರಣ: ಬಂಧನದ ಭೀತಿಯಲ್ಲಿ ಶೆರ್ಲಿನ್‌ ಚೋಪ್ರಾ; ನಿರೀಕ್ಷಣಾ ಜಾಮೀನು ಕೋರಿದ ತಾರೆ

ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಆರೋಪಿ ರಾಜ್‌ ಕುಂದ್ರಾ ಅವರ ಬಂಧನದ ಬೆನ್ನಿಗೇ ಬಾಲಿವುಡ್‌ ತಾರೆ ಶೆರ್ಲಿನ್‌ ಚೋಪ್ರ ನಿರೀಕ್ಷಣಾ ಜಾಮೀನು ಕೋರಿ ಮುಂಬೈ ಸೆಷನ್‌ ಕೋರ್ಟ್‌ ಮೊರೆ ಹೋಗಿದ್ದಾರೆ (ಶೆರ್ಲಿನ್‌ ಚೋಪ್ರ ವರ್ಸಸ್‌ ಮಹಾರಾಷ್ಟ್ರ ಸರ್ಕಾರ). ಶೆರ್ಲಿನ್‌ಗೆ‌ ಬಂಧನದ ಭೀತಿಗೆ ಕಾರಣವಾಗಿರುವ ಎಫ್‌ಐಆರ್‌ ಇದೇ ವರ್ಷದ 2021ರಲ್ಲಿ ದಾಖಲಾಗಿದ್ದು, ಅಶ್ಲೀಲ ವಿಷಯ ಸಾಮಗ್ರಿಯ ಮಾರಾಟ ಮತ್ತು ಪ್ರಸರಣ ಮಾಡಿದ ಆರೋಪದ ಎಫ್‌ಐಆರ್‌ ಇದಾಗಿದೆ.

Sherlyn Chopra, Mumbai Sessions Court
Sherlyn Chopra, Mumbai Sessions Court

ಶೆರ್ಲಿನ್ ಪರ ವಕೀಲ ಸಿದ್ದೇಶ್‌ ಬೋರ್ಕರ್‌ ಅವರು ತಮ್ಮ ಕಕ್ಷಿದಾರರಿಗೆ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸಮನ್ಸ್‌ ನೀಡಿದ್ದಾರೆ. ಈ ಹಿಂದೆ ಇದೇ ರೀತಿ ಸಮನ್ಸ್‌ ನೀಡಿರುವವರನ್ನು ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡದೆಯೇ ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್‌ನಲ್ಲಿ ಏನಿದೆ ಎನ್ನುವ ಮಾಹಿತಿ ಶೆರ್ಲಿನ್‌ ಅವರಿಗಿಲ್ಲ. ಅವರಿಗೆ ಎಫ್‌ಐಆರ್‌ನ ಪ್ರತಿಯನ್ನೂ ನೀಡಲಾಗಿಲ್ಲ. ಅವರ ವಿರುದ್ಧ ಇರುವ ಆರೋಪಗಳನ್ನು ವಿವರಿಸಲಾಗಿಲ್ಲ. ಪ್ರಕರಣದ ಸಂಬಂಧ ಜಾಮೀನು ರಹಿತ ಕೆಲವೊಂದು ಆರೋಪಗಳನ್ನು ತಮ್ಮ ಮೇಲೆ ಹೊರಿಸಬಹುದು ಎನ್ನುವ ಭೀತಿಯಲ್ಲಿ ಶೆರ್ಲಿನ್‌ ಸಿಲುಕಿದ್ದಾರೆ ಎಂದು ನ್ಯಾಯಾಲಯದ ಮುಂದೆ ವಾದಿಸಿದರು. ಈ ಹಿನ್ನೆಲೆಯಲ್ಲಿ ಶೆರ್ಲಿನ್‌ ಚೋಪ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

Related Stories

No stories found.
Kannada Bar & Bench
kannada.barandbench.com