ಸ್ವತಂತ್ರ ಭಾರತದ ಶೈಶವಾವಸ್ಥೆಯನ್ನು ಸರಿದೂಗಿಸಲು ಮೀಸಲಾತಿ ವ್ಯವಸ್ಥೆ ತಾತ್ಕಾಲಿಕ ಕ್ರಮವಾಗಿದ್ದರೂ ಅದನ್ನು ಈಗ ಅಂತ್ಯವಿಲ್ಲದೆ ವಿಸ್ತರಿಸಲಾಗುತ್ತಿದೆ. ಆ ಮೂಲಕ ಜಾತಿ ಭೇದಗಳನ್ನು ತೊಡೆದುಹಾಕುವ ಉದ್ದೇಶಕ್ಕೆ ವಿರುದ್ಧವಾದ ಕ್ರಮ ಅನುಸರಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಹೇಳಿದೆ.
ಭಾರತದ ಸಂವಿಧಾನವನ್ನು ರೂಪಿಸುವಾಗ ಸಂವಿಧಾನ ರಚನಾ ಸಭೆಯು ಕಲ್ಪಿಸಿದ ಇಡೀ ಮೀಸಲಾತಿ ಪರಿಕಲ್ಪನೆಯನ್ನು ಪದೇ ಪದೇ ತಿದ್ದುಪಡಿಗಳ ಮೂಲಕ ತಲೆಕೆಳಕಾಗಿಸಲಾಗಿದ್ದು, ಜಾತಿ ವ್ಯವಸ್ಥೆಯ ವಾಸ್ತವಿಕ ಪುನರುಜ್ಜೀವನವನ್ನು ಅದು ಅಸ್ತಿತ್ವದಲ್ಲಿಲ್ಲದ ಪಂಗಡಗಳಿಗೂ ವಿಸ್ತರಿಸಿದೆ ಎಂದು ನ್ಯಾಯಾಲಯ ಹೇಳಿದೆ. ನಾಗರಿಕರನ್ನು ಸಶಕ್ತಗೊಳಿಸುವುದಕ್ಕೆ ಬದಲಾಗಿ ಇದನ್ನು ಮಾಡಲಾಗುತ್ತಿದ್ದು, ಪ್ರವೇಶ, ನೇಮಕಾತಿ ಮತ್ತು ಬಡ್ತಿಯನ್ನು ಅರ್ಹತೆ ನಿರ್ಧರಿಸುವಂತಾಗಬೇಕು ಎಂದು ನ್ಯಾಯಲಯ ಹೇಳಿದೆ. “ಜಾತಿ ವ್ಯವಸ್ಥೆಯನ್ನು ಅಳಿಸಿಹಾಕುವ ಬದಲು, ಮೀಸಲಾತಿ ವಿಸ್ತರಿಸುವ ಪ್ರವೃತ್ತಿಯು ಶೈಶವಾವಸ್ಥೆ ಮತ್ತು ಪ್ರಾಯಶಃ, ಗಣರಾಜ್ಯದ ಹದಿಹರೆಯವನ್ನು ಒಳಗೊಳ್ಳಲು ಅಲ್ಪಾವಧಿಗೆ ಮಾತ್ರ ಉಳಿಯುವ ಅಳತೆಯನ್ನು ಅನಂತವಾಗಿ ವಿಸ್ತರಿಸುವ ಮೂಲಕ ಅದನ್ನು ಶಾಶ್ವತವಾಗಿಸುತ್ತದೆ. ಒಂದು ದೇಶದ ಬದುಕು ಮಾನವನ ವಯೋಪ್ರಕ್ರಿಯೆಗೆ ಸಂಬಂಧಿಸದಿದ್ದರೂ, 70 ಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಅದು ಬಹುಶಃ ಹೆಚ್ಚು ಪ್ರಬುದ್ಧವಾಗಿರಬೇಕು” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಮತ್ತು ಪ್ರಯಾಣಿಕರಿಗಾಗಿ ಕಾಯುವ ಪ್ರದೇಶಗಳು, ಉತ್ತಮ ಬೆಳಕು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಕೊಂಕಣ ರೈಲ್ವೆಯ ನಿಲ್ದಾಣಗಳನ್ನು ವಿಕಲಚೇತನರ ಸ್ನೇಹಿಯಾಗಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ವರ್ಗದ ಜನರಿಗೆ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಅತ್ಯುತ್ತಮ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಮಾರ್ಗಸೂಚಿ ಹೊರಡಿಸಿದೆ ಎಂದು ಅರ್ಜಿದಾರ ಜಾರ್ಜ್ ಫರ್ನಾಂಡೀಸ್ ಹೇಳಿದ್ದಾರೆ. ಇದನ್ನು ಆಧರಿಸಿ ಭಾರತೀಯ ರೈಲ್ವೆಯು ಬಹುತೇಕ ಕಡೆ ಅತ್ಯುತ್ತಮ ಸೌಲಭ್ಯ ಕಲ್ಪಿಸಿದೆ. ದುರದೃಷ್ಟಕರ ಬೆಳವಣಿಗೆ ಎಂದರೆ ಇಂಥ ಯಾವುದೇ ಸೌಲಭ್ಯವನ್ನು ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಕಲ್ಪಿಸಲಾಗಿಲ್ಲ ಎಂದು ಹೇಳಿದ್ದಾರೆ. ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಲಾಗಿದೆ.
ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ 142 ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಅವರು ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ. ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ಖಾಲಿಯಿರುವ 142 ಎಸ್‌ಎಡಿಎ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ಮತ್ತು ಸಾಮಾನ್ಯ ವರ್ಗದವರಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
2021ರ ಸೆ. 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ನಿರ್ವಹಣೆ ಅಥವಾ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಶೇ.55 ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಶೇ.50 ರಷ್ಟು ಅಂಕ ಗಳಿಸಿರಬೇಕು. ಬೇಸಿಕ್ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೊರ್ಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ರಾಕೇಶ್ ಆಸ್ಥಾನಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದ ಆದೇಶ ರದ್ದುಗೊಳಿಸುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಆಸ್ಥಾನಾ ಅವರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸಮಿತಿಯ ಭಾಗವಾಗಿದ್ದರಿಂದ ಪ್ರಕರಣದ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸಿಜೆಐ ಎನ್ ವಿ ರಮಣ ನಿರಾಕರಿಸಿದರು.
ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಸಿಪಿಐಎಲ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ರಾಕೇಶ್ ಆಸ್ಥಾನಾ ಅವರನ್ನು ತಮ್ಮ ನಿವೃತ್ತಿಯ ನಾಲ್ಕು ದಿನಗಳ ಮೊದಲು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿರುವುದು ಮತ್ತು ಅವರಿಗೆ ಇಂಟರ್ ಕೇಡರ್ ಪದ ನಿಯುಕ್ತಿ ಹಾಗೂ ಸೇವಾ ವಿಸ್ತರಣೆ ಮಾಡಿರುವುನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ಹಲವು ನೆಲೆಗಳಲ್ಲಿ ಅಕ್ರಮದಿಂದ ಕೂಡಿದೆ ಎಂದು ಸಂಸ್ಥೆ ವಾದಿಸಿದೆ.