ಮುಸ್ಲಿಮರು, ಲ್ಯಾಟಿನ್ ಕೆಥೋಲಿಕ್‌ಗಳು, ಕ್ರೈಸ್ತ ನಾದರ್‌ಗಳು ಹಾಗೂ ಪರಿಶಿಷ್ಟ ಜಾತಿ ಸೇರಿದಂತೆ ಕೆಲ ಸಮುದಾಯಗಳಿಗೆ ಮೀಸಲಾತಿ ಮತ್ತು ಆರ್ಥಿಕ ನೆರವು ನೀಡದಂತೆ ಹಿಂದೂ ಸೇವಾ ಕೇಂದ್ರಂ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದು ಅರ್ಜಿದಾರರಿಗೆ ರೂ 25,000 ದಂಡ ವಿಧಿಸಿದೆ.
ಸಂವಿಧಾನದ 142ನೇ ವಿಧಿ ಅನ್ವಯ ಮರಾಠಾ ಪ್ರಕರಣದ ಕಾನೂನು ಸ್ಥಾನದ ಬಗ್ಗೆ ಯಾವುದೇ ಸಂಶೋಧನೆಯಿಲ್ಲದೆ ತ್ವರಿತ ರಿಟ್ ಅರ್ಜಿ ಸಲ್ಲಿಸಲಾಗಿದೆ. ಕೇರಳದಲ್ಲಿ ಆಧಾರವಿಲ್ಲದೆ ಅಲ್ಪಸಂಖ್ಯಾತ ಮತ್ತಿತರ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಲು ಕೋರಲಾಗಿದ್ದು ಇದು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತ ರಿಟ್ ಅರ್ಜಿ ವಜಾಗೊಳಿಸಲು ಅರ್ಹವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಕೋವಿಡ್ ಪೀಡಿತ ಪಾರ್ಸಿಗಳ ಅಂತ್ಯಕ್ರಿಯೆಯನ್ನು ದೋಖ್‌ಮೆನಾಶಿನಿ ಸಂಪ್ರಾದಯದಂತೆ (ಶವವನ್ನು ಹೂಳದೆ ಸುಡದೆ ಪಕ್ಷಿಗಳಿಗೆ ಆಹಾರವಾಗಿ ನೀಡುವ ಪದ್ದತಿ) ನಡೆಸಲು ಅನುಮತಿ ಕೋರಿದ್ದ ಅರ್ಜಿಯೊಂದನ್ನು ಗುಜರಾತ್ ಹೈಕೋರ್ಟ್ ತಳ್ಳಿಹಾಕಿದೆ. ಕೋವಿಡ್‌ಗೆ ಬಲಿಯಾದವರ ದೇಹಗಳನ್ನು ವಿಲೇವಾರಿ ಮಾಡುವ ಸರ್ಕಾರದ ಮಾರ್ಗಸೂಚಿ, ಪಾರ್ಸಿ ಧರ್ಮದ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೃತ ಶರೀರಗಳ ನಿರ್ವಹಣೆ ಕುರಿತಂತೆ ಹೊರಡಿಸಿದ್ದ ಮಾರ್ಗಸೂಚಿ, ಸಂವಿಧಾನದ ಹಲವು ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಸೂರತ್ ಪಾರ್ಸಿ ಪಂಚಾಯತ್ ಮಂಡಳಿ ಈ ಸಂಬಂಧ ಅರ್ಜಿ ಸಲ್ಲಿಸಿತ್ತು. ಆದರೆ ವಾದ ಆಲಿಸಿದ ನ್ಯಾಯಾಲಯ ಧಾರ್ಮಿಕ ಹಕ್ಕು ಎಂಬುದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ಮಿತಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಅಲ್ಲದೆ ಬೃಹತ್ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.
ಎಚ್ಐವಿ ಪೀಡಿತ ಬಿಎಸ್‌ಎಫ್ ಯೋಧನ ಆರೋಗ್ಯ ಗಮನಿಸಿ ಅವರ ವರ್ಗಾವಣೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ದೆಹಲಿಯಿಂದ ಯೋಧನನ್ನು ಅಸ್ಸಾಂನ ಕಚಾರ್ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಸ್ವಯಂ ನಿವೃತ್ತಿಯ ಕೋರಿಕೆಯನ್ನೂ ಪರಿಗಣಿಸದೆ ರೋಗಪೀಡಿತ ಸೈನಿಕನನ್ನು ವರ್ಗ ಮಾಡಿರುವುದಕ್ಕೆ ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಸುಬ್ರಮಣಿಯಂ ಪ್ರಸಾದ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ದೆಹಲಿಗೆ ನೇಮಕವಾಗಿದ್ದ ಯೋಧ ಅದನ್ನು ಉಳಿಸಿಕೊಳ್ಳಲೂ ಒತ್ತಾಯಿಸಿಲ್ಲ. ಬದಲಿಗೆ ಅವರು ಸ್ವಯಂ ನಿವೃತ್ತ ಪಡೆದು ಅದರಲ್ಲಿ ಜೀವನ ನಡೆಸಲು ಮುಂದಾಗಿದ್ದರು ಎಂಬುದನ್ನು ಗಮನಿಸಿದ ನ್ಯಾಯಾಲಯ ʼಕರುಣೆ ಇಲ್ಲದ ನ್ಯಾಯ ನ್ಯಾಯವೇ ಅಲ್ಲ…ʼ ಎಂದು ತೀಕ್ಷ್ಣವಾಗಿ ಹೇಳಿತು. ಪ್ರಕರಣ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪೀಠ ನೋಟಿಸ್ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿತು.