ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-08-2021

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-08-2021

>> ಅಖಿಲ ಭಾರತ ಬಾರ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ >> ಗರ್ಭಾವಸ್ಥೆಯಲ್ಲಿ ಮಗುವನ್ನು ಮುಂದುವರೆಸುವ ಕುರಿತಾದ ಆಯ್ಕೆ ಮಹಿಳೆಯರದ್ದು >> ನ್ಯಾಯಾಧೀಶರ ಸುರಕ್ಷತೆ: ಮಾಹಿತಿ ಸಲ್ಲಿಸದ ರಾಜ್ಯಗಳಿಗೆ ರೂ.1ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ಅಖಿಲ ಭಾರತ ಬಾರ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಅಖಿಲ ಭಾರತ ಬಾರ್‌ ಪರೀಕ್ಷೆಗಳನ್ನು ಅಕ್ಟೋಬರ್‌ 24, 2021ರಂದು ನಡೆಸಲಾಗುವುದು ಎಂದು ಭಾರತೀಯ ವಕೀಲರ ಪರಿಷತ್‌ ತಿಳಿಸಿದೆ. ಕೋವಿಡ್‌ ಹಿನ್ನೆಲೆಯ ಕಾರಣದಿಂದಾಗಿ ಅಂತಿಮ ವರ್ಷದ ಕಾನೂನು ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟ ಪರಿಣಾಮ ಹಾಗೂ ವಿವಿಧ ವಕೀಲರ ಪರಿಷತ್ತುಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಅಂತಿಮ ದಿನಾಂಕವನ್ನು ಸೆ. 15, 2021ರ ವರೆಗೆ ವಿಸ್ತರಿಸಲಾಗಿದೆ. ಈ ಮೊದಲಿನ ವೇಳಾಪಟ್ಟಿಯಂತೆ ಪರೀಕ್ಷೆಗಳು ಏಪ್ರಿಲ್‌ 25ರಂದು ನಡೆಯಬೇಕಿತ್ತು.

ಬದಲಾದ ವೇಳಾಪಟ್ಟಿ ಹೀಗಿದೆ:

ಗರ್ಭಾವಸ್ಥೆಯಲ್ಲಿ ಮಗುವನ್ನು ಮುಂದುವರೆಸುವ ಸಂಬಂಧ ನಿರ್ಧರಿಸುವ ಆಯ್ಕೆ ಮಹಿಳೆಯರದ್ದು: ಕೇರಳ ಹೈಕೋರ್ಟ್‌

ಗರ್ಭಾವಸ್ಥೆಯಲ್ಲಿ ಮಗುವನ್ನು ಮುಂದುವರೆಸುವ ಸಂಬಂಧ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಆಯ್ಕೆ ಮಹಿಳೆಯರಿಗೆ ಇರಬೇಕಾದುದರ ಮಹತ್ವವನ್ನು ಇತ್ತೀಚೆಗೆ ಕೇರಳ ಹೈಕೋರ್ಟ್‌ ಪ್ರಕರಣವೊಂದರ ಸಂಬಂಧ ತಿಳಿಸಿದೆ. ತುಸು ಮಟ್ಟಿಗಿನ ಮಾನಸಿಕ ಮತ್ತು ದೈಹಿಕ ನ್ಯೂನತೆಯನ್ನು ಉಳ್ಳ ಮಹಿಳೆಯೊಬ್ಬರು ಗರ್ಭಪಾತ ಮಾಡಿಸಿಕೊಳ್ಳಲು ನ್ಯಾಯಾಲಯವು ಅನುಮತಿಸಿದೆ.

pregnant woman and kerala high court
pregnant woman and kerala high court

ಮಹಿಳೆಯ ಗರ್ಭದಲ್ಲಿದ್ದ 22 ವಾರದ ಭ್ರೂಣವು ಸಹ ನ್ಯೂನತೆಯಿಂದ ಕೂಡಿತ್ತು. ಮಗುವಿನ ತಾಯಿಯೂ ಸಹ ಸ್ವಲ್ಪ ಪ್ರಮಾಣದ ಮಾನಸಿಕ ನ್ಯೂನತೆ ಹಾಗೂ ಹೊಂದಾಣಿಕೆಯ ಕೌಶಲ್ಯಗಳ ನ್ಯೂನತೆಯನ್ನು ಹೊಂದಿದ್ದರು. ಇದರಿಂದಾಗಿ ಆಕೆಗೆ ವೈಕಲ್ಯತೆ ಇರುವ ಮಗುವಿನ ಲಾಲನೆ ಪಾಲನೆಯನ್ನು ಮಾಡುವ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದವು. ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಪಿ ಬಿ ಸುರೇಶ್‌ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು, “ವೈಕಲ್ಯತೆಯುಳ್ಳ ಮಗುವಿನ ಪೋಷಣೆಗೆ ಬೇಡುವ ಸಾಮರ್ಥ್ಯವನ್ನು ಹೊಂದುವುದು ಆಕೆಗೆ (ತಾಯಿಗೆ) ಕಷ್ಟವಾಗಬಹುದು,” ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ, “ಗರ್ಭವನ್ನು ಮುಂದುವರೆಸುವ ಸಂಬಂಧ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಗರ್ಭಿಣಿ ಮಹಿಳೆಗೆ ಇರಬೇಕು” ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿತು.

ನ್ಯಾಯಾಧೀಶಕರ ಸುರಕ್ಷತೆ ಪ್ರಕರಣ: ಮಾಹಿತಿ ಸಲ್ಲಿಸದ ರಾಜ್ಯಗಳಿಗೆ ರೂ.1ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ನ್ಯಾಯಾಧೀಶರ ಸುರಕ್ಷತೆಯ ಕುರಿತಾಗಿ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಮಾಹಿತಿಯನ್ನು ಪ್ರತಿ ಅಫಿಡವಿಟ್‌ ಮೂಲಕ ಸಲ್ಲಿಸದ ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯವು ರೂ.1 ಲಕ್ಷ ದಂಡ ವಿಧಿಸಿದೆ. ಧನ್‌ಬಾದ್‌ ನ್ಯಾಯಾಧೀಶರ ಶಂಕಾಸ್ಪದ ಅಪಘಾತದ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ನ್ಯಾಯಾಧೀಶರ ರಕ್ಷಣೆಗೆ ವಿವಿಧ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

Safety of Judges
Safety of Judges

ಇಂದು ಪ್ರಕರಣದ ವಿಚಾರಣೆಯನ್ನು ಮುಂದುವರೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ‌ ರಮಣ ಅವರ ನೇತೃತ್ವದ ಪೀಠವು ಮಾಹಿತಿ ಸಲ್ಲಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳಿಗೆ ರೂ.1 ಲಕ್ಷ ದಂಡವನ್ನು ಸುಪ್ರೀಂ ಕೋರ್ಟ್‌ ವಕೀಲರ ಒಕ್ಕೂಟದ ಕಲ್ಯಾಣ ನಿಧಿಗೆ ಸಲ್ಲಿಸಲು ಸೂಚಿಸಿ ಹತ್ತು ದಿನಗಳೊಳಗೆ ಪ್ರತಿ ಅಫಿಡವಿಟ್‌ ಮುಖೇನ ತಾನು ಕೇಳಿರುವ ಮಾಹಿತಿ ಸಲ್ಲಿಸುವಂತೆ ಆದೇಶಿಸಿತು. ಇದೇ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು 2007ರಲ್ಲಿಯೇ ನ್ಯಾಯಾಧೀಶರ ರಕ್ಷಣೆಯ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದರು.

Related Stories

No stories found.
Kannada Bar & Bench
kannada.barandbench.com