ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿರುವ ಕೇರಳ ಹೈಕೋರ್ಟ್ ನ್ಯಾ. ಸಿ ಟಿ ರವಿಕುಮಾರ್ ಅವರು ತಮ್ಮ ಮೂಲ ಹೈಕೋರ್ಟ್‌ಗೆ ಶುಕ್ರವಾರ ಭಾವುಕ ವಿದಾಯ ಹೇಳಿದರು. ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ತಾಯಿ, ತಂಗಿ ಹಾಗೂ ತಂದೆಯನ್ನು ವಿಶೇಷವಾಗಿ ನೆನೆದರು. ತಮ್ಮ ತಂದೆ ಶ್ರೀ ಕೆ ದೇವನ್ ಅವರು ಚಂಗನಸೆರ್ರಿಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಬೆಂಚ್ ಗುಮಾಸ್ತರಾಗಿ ಸೇವೆ ಸಲಿಸಿದ್ದನ್ನು ನೆನೆಯುವ ವೇಳೆ ಭಾವುಕರಾದರು.
ಇಲ್ಲಿನ ವಿದ್ವತ್ಪೂರ್ಣ ವಕೀಲ ವೃಂದ ನನ್ನನ್ನು ಈ ಹಂತಕ್ಕೇರಿಸಿದೆ. ಇಲ್ಲಿನ ಪ್ರತಿಷ್ಠಿತ ವಕೀಲರು ಯಶಸ್ವಿಯಾಗಲು ಕಾರಣವಾಗಿರುವುದು ಶ್ರದ್ಧೆ ಹಾಗೂ ಕಠಿಣ ಪರಿಶ್ರಮ. ಹಾಗಾಗಿ, ಕಿರಿಯ ವಕೀಲ ಸದಸ್ಯರಲ್ಲಿ ನನ್ನ ನಮ್ರ ಮನವಿಯೆಂದರೆ ಈ ವೃತ್ತಿಯಲ್ಲಿ ಯಶಸ್ವಿಯಾಗಲು ಯಾವುದೇ ಅಡ್ಡದಾರಿಗಳಿಲ್ಲ ಎಂದು ಈ ವೇಳೆ ಅವರು ಕಿವಿಮಾತು ಹೇಳಿದರು.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿರುವ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೋಹ್ಲಿ ಅವರು ವರ್ಚುವಲ್ ವಿಚಾರಣೆಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತೆಲಂಗಾಣ ಹೈಕೋರ್ಟ್ ನ್ಯಾಯವಾದಿಗಳ ಸಂಘ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವರ್ಚುವಲ್ ವಿಚಾರಣೆಗಳು ಭೌತಿಕ ವಿಚಾರಣೆಗಳಿಗೆ ಬದಲಿಯಾಗಲಾರವಾದರೂ ಅವುಗಳನ್ನು ಮುಖ್ಯವಾಹಿನಿಗೆ ಸೇರ್ಪಡಿಸುವ ಪ್ರಯತ್ನಗಳಾಗಬೇಕಿವೆ. ವರ್ಚುವಲ್ ನ್ಯಾಯಾಲಯಗಳಿಗೆ ಅವುಗಳದೇ ಆದ ಮಿತಿಗಳು, ಉಪಯೋಗಗಳು ಇವೆ. ಅವುಗಳ ದೊಡ್ಡ ಉಪಯುಕ್ತತೆಯೆಂದರೆ ವಕೀಲರು ಮನೆಯಲ್ಲಿಯೇ ಕುಳಿತು ದೇಶದ ಯಾವುದೇ ಭಾಗದ ನ್ಯಾಯಾಲಯದ ಮುಂದೆ ಕೂಡ ಹಾಜರಾಗಬಹುದು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
“ನಿಮಗೆ ಹುದ್ದೆ ದೊರೆತಾಗ ಅದನ್ನು ಇತರರ ಶ್ರೇಯಸ್ಸಿಗೆ ಮೀಸಲಿಡಿ. ಈ ಅಂಶದ ಬಗ್ಗೆ ಯೋಚಿಸಲು ನಾನು ನನ್ನ ಸಹೋದರಿ ಮತ್ತು ಸಹೋದರ ನ್ಯಾಯಾಧೀಶರಿಗೆ ಹೇಳಲು ಬಯಸುತ್ತೇನೆ. ಇತರರಿಗಿಂತ ನಾವು ಮೇಲಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಲು ನಾವು ಪ್ರಯತ್ನಿಸಬೇಕು. ನಮ್ಮ ವ್ಯವಸ್ಥೆಯಲ್ಲಿ ಕಳಹಂತದ ಸಿಬ್ಬಂದಿಯಿಂದ ಹಿಡಿದು ಮುಖ್ಯ ನ್ಯಾಯಮೂರ್ತಿಯವರೆಗೆ ಎಲ್ಲರೂ ಅವಿಭಾಜ್ಯ ಅಂಗ… ಎಲ್ಲರನ್ನೂ ಘನತೆ ಮತ್ತು ಗೌರವದಿಂದ ನಾವು ಕಾಣಬೇಕು” ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿರುವ ಹಿನ್ನೆಲೆಯಲ್ಲಿ ನ್ಯಾ. ಸುಂದರೇಶ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನೀವು ಸ್ಥಾನ ಹೊಂದಿದಾಗ ಘನತೆ ಪ್ರದರ್ಶಿಸಬೇಕು. ಆಗ ಮಾತ್ರ ಆ ಹುದ್ದೆಗೆ ಅದರ ಗೌರವ ಸಿಗುತ್ತದೆ” ಎಂದು ಹೇಳಿದರು.
ದೆಹಲಿಯ ಜಂತರ್ ಮಂತರ್ ಬಳಿ ಇತ್ತೀಚೆಗೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಿಂಕಿ ಚೌಧರಿಗೆ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ಕೋರಿರುವ ಚೌಧರಿ ಅರ್ಜಿಯ ಸಂಬಂಧ ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಿದೆ.
ವಿಚಾರಣೆಯ ವೇಳೆ ಪಿಂಕಿ ಚೌಧರಿಗೆ ಮದ್ಯಂತರ ರಕ್ಷಣೆಯ ನೀಡಬೇಕೆಂದು ಒತ್ತಾಯಿಸಿದ ಆರೋಪಿ ಪರ ವಕೀಲರಿಗೆ ನ್ಯಾ. ಮುಕ್ತ ಗುಪ್ತ ಅವರು “ನಾನು ನೋಟಿಸ್ ನೀಡಿದ್ದೇನೆ. ವಿಷಯ ಏನೆಂದು ತಿಳಿದುಕೊಳ್ಳುತ್ತೇನೆ. ನೀವು ನನ್ನನ್ನು ಒತ್ತಾಯಿಸುವಂತಿಲ್ಲ. ಎಲ್ಲ ರೀತಿಯ ಘೋಷಣೆಗಳನ್ನು ಅಲ್ಲಿ ಕೂಗಲಾಗಿದೆ, ಭಾಷಣಗಳನ್ನು ನೀಡಲಾಗಿದೆ,” ಎಂದು ಘಟನೆಯ ಗಂಭೀರತೆಯನ್ನು ಹೊರಗೆಡವಿದರು. ಘಟನೆಯ ವೇಳೆ ನೀವೆಲ್ಲಿದ್ದಿರಿ ಎನ್ನುವುದನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ ಎಂದು ನ್ಯಾಯಮೂರ್ತಿಗಳು ಹೇಳಿದರು.