ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರ 84 ದಿನಗಳಿಗೆ ಹೆಚ್ಚಿಸಲು ಕಾರಣ ಲಸಿಕೆ ಪರಿಣಾಮಕಾರಿಯಾಗುತ್ತದೆ ಎಂಬುದೋ ಅಥವಾ ಲಸಿಕೆ ಪೂರೈಕೆಯ ಕೊರತೆಯ ಕಾರಣಕ್ಕೋ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಲಸಿಕೆ ಪರಿಣಾಮಕಾರಿಯಾಗುವುದರಿಂದ ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲಾಗಿದೆ ಎಂದು ಸಂಶೋಧನೆ ಖಾತರಿಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದರೂ ವೈಜ್ಞಾನಿಕ ದತ್ತಾಂಶ ಮತ್ತು ಸಂಶೋಧನೆಯ ಫಲಿತಾಂಶವನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.
ಲಸಿಕೆ ಲಭ್ಯತೆ ವಿಷಯವಾಗಿದ್ದರೆ ಕೋವಿಶೀಲ್ಡ್ ಅನ್ನು ನೇರವಾಗಿ ಖರೀದಿಸಲು ಸಾಧ್ಯವಾಗುವ ವ್ಯಕ್ತಿಗಳು ಕಡಿಮೆ ಸಮಯದಲ್ಲಿ ಎರಡು ಡೋಸ್‌ಗಳನ್ನು ಪಡೆಯುವುದನ್ನು ತಡೆಯುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ತನ್ನ ವಿತರಕರೊಂದಿಗೆ ಸ್ಪರ್ಧಾತ್ಮಕ ವಿರೋಧಿ ಒಪ್ಪಂದಗಳನ್ನು ಮಾಡಿಕೊಂಡಿದ್ದಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ₹ 200 ಕೋಟಿ ದಂಡ ವಿಧಿಸಿದೆ.
ಮಾರುತಿ ಸುಜುಕಿ ಸಂಸ್ಥೆಯು ದೇಶಾದ್ಯಂತ ತನ್ನ ವಿತರಕರ ಜೊತೆ ಮರು ಮಾರಾಟ ಬೆಲೆ ನಿರ್ವಹಣೆಗೆ (ಆರ್‌ಪಿಎಂ) ರಿಯಾಯಿತಿ ನಿಯಂತ್ರಣ ನೀತಿಯನ್ನು ಹೇರಿದೆ. ಮಾತ್ರವಲ್ಲದೇ ಮಿಸ್ಟರಿ ಶಾಪಿಂಗ್ ಏಜೆನ್ಸಿಗಳನ್ನು ನೇಮಿಸುವ ಮೂಲಕ ಈ ಬಗ್ಗೆ ನಿಗಾ ಇಡಲು ಮತ್ತು ದಂಡ ವಿಧಿಸುವ ಮೂಲಕ ಅದಕ್ಕೆ ಕಡಿವಾಣ ಹಾಕಲು ಮುಂದಾಗಿದೆ ಎಂಬುದನ್ನು ಸಿಸಿಐ ಪತ್ತೆ ಹಚ್ಚಿದೆ. ಎಂಎಸ್‌ಐಎಲ್‌ನಿಂದ ಆರ್‌ಪಿಎಂನಂಥ ಅಭ್ಯಾಸವು ಭಾರತದೊಳಗಿನ ಸ್ಪರ್ಧೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ. ಇದು ಸ್ಪರ್ಧಾ ಕಾಯಿದೆಯ ಸೆಕ್ಷನ್ 3 (1) ಹಾಗೂ 3(4)(ಇ) ಉಲ್ಲಂಘನೆಯಾಗಿದೆ ಎಂದು ಸಿಸಿಐ ತನ್ನ ತೀರ್ಪಿನಲ್ಲಿ ಹೇಳಿದೆ.