ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-09-2021

>> ಹಿಂದಿನ ಸೆಮಿಸ್ಟರ್‌ ಅಂಕ ಆಧರಿಸಿ ಮೌಲ್ಯಮಾಪನ ಮಾಡಿದ ಕೆಎಸ್‌ಎಲ್‌ಯು ನಿರ್ಧಾರ ವಜಾ, 50-50 ಸೂತ್ರಕ್ಕೆ ಹೈಕೋರ್ಟ್‌ ಅಸ್ತು >> ಕೇಜ್ರಿವಾಲ್‌ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಭರವಸೆ ಈಡೇರಿಸಬೇಕು ಎಂದಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-09-2021

ಹಿಂದಿನ ಸೆಮಿಸ್ಟರ್‌ ಅಂಕ ಆಧರಿಸಿ ಮೌಲ್ಯಮಾಪನ ಮಾಡಿದ ಕೆಎಸ್‌ಎಲ್‌ಯು ನಿರ್ಧಾರ ವಜಾ, 50-50 ಸೂತ್ರಕ್ಕೆ ಹೈಕೋರ್ಟ್‌ ಅಸ್ತು

ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳನ್ನು ಆಧರಿಸಿ ಕಾನೂನು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ನಿರ್ಧಾರವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

KSLU and Karnataka High Court
KSLU and Karnataka High Court

“ಪ್ರಕರಣದ ಕುರಿತು ಸಮಗ್ರವಾದ ದೃಷ್ಟಿ ಬೀರಿದ ಬಳಿಕ ಋತ್ವಿಕ್‌ ಬಾಲನಾಗರಾಜ್‌ ಪ್ರಕರಣದಲ್ಲಿ ನೀಡಲಾದ ನಿರ್ದೇಶನಗಳನ್ನು ನೀಡುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ನ್ಯಾಯಾಲಯವು ನೀಡಿದ ಆದೇಶಗಳಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲದಿರುವುದರಿಂದ, ಪೀಠ ನಿರ್ದೇಶಿಸಿದ ಮತ್ತು ಅಳವಡಿಸಿಕೊಂಡಿರುವ 50-50 ಸೂತ್ರವನ್ನು ಪರಿಗಣನೆಗೆ ತೆಗೆದುಕೊಂಡಿರುವುದರಿಂದ ಹಿಂದಿನ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಬೇಕೆ ಎನ್ನುವ ಅಂಶವು ಮುಖ್ಯವಾಗುವುದಿಲ್ಲ ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇದಕ್ಕೆ ವಿರುದ್ಧವಾಗಿ ಉದ್ದೇಶಪೂರ್ವಕವಾದ ನಿಲುವನ್ನು ಪ್ರತಿವಾದಿ ವಿಶ್ವವಿದ್ಯಾಲಯ ಕೈಗೊಳ್ಳುವಂತಿಲ್ಲ” ಎಂದು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಕೊಟ್ಟ ಭರವಸೆ ಈಡೇರಿಸಿ ಎಂದು ಸಿಎಂ ಕೇಜ್ರಿವಾಲ್‌ಗೆ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ನೀಡಿದ್ದ ಭರವಸೆಯೊಂದನ್ನು ಈಡೇರಿಸಬೇಕು ಎಂದು ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ಸೋಮವಾರ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಆದೇಶವನ್ನು ಮುಂದಿನ ವಿಚಾರಣೆಯವರೆಗೆ ತಡೆ ಹಿಡಿಯಿತು. ಈ ಸಂದರ್ಭದಲ್ಲಿ ನೀಡಿದ ಭರವಸೆಯಲ್ಲಿ ಅಲ್ಪ ಪ್ರಮಾಣದ ಭರವಸೆಯನ್ನಾದರೂ ಈಡೇರಿಸುವ ಇಚ್ಛೆ ಸರ್ಕಾರಕ್ಕೆ ಇದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇತ್ತ ಅರ್ಜಿದಾರರು ಬಡವರು ಎಂದು ವಕೀಲ ಗೌರವ್‌ ಜೈನ್‌ ವಾದಿಸಿದರು. ಆದರೂ ನ್ಯಾಯಾಲಯ ಆದೇಶಕ್ಕೆ ತಡೆ ನೀಡಿತು.

Arvind Kejriwal and Delhi High Court
Arvind Kejriwal and Delhi High Court

ಕೋವಿಡ್‌ ಬಿಕ್ಕಟ್ಟಿನ ವೇಳೆ ಯಾರಾದರೂ ಬಾಡಿಗೆದಾರರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೆ ದೆಹಲಿ ಸರ್ಕಾರ ಬಡವರ ಪರವಾಗಿ ಬಾಡಿಗೆ ಪಾವತಿಸುವುದಾಗಿ ದೆಹಲಿ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಕೆಲ ತಿಂಗಳುಗಳ ಹಿಂದೆ ನ್ಯಾ. ಪ್ರತಿಭಾ ಸಿಂಗ್‌ ನೇತೃತ್ವದ ಪೀಠ ಆದೇಶಿಸಿತ್ತು. ಒಂದು ರಾಜ್ಯದ ಮುಖ್ಯಮಂತ್ರಿ ನೀಡಿದ ಭರವಸೆ, ವಾಗ್ದಾನ ಅಥವಾ ಹೇಳಿಕೆ ಜಾರಿಗೊಳಿಸಬಹುದಾದ ಭರವಸೆಗೆ ಸಮನಾಗಿದ್ದು ಅದನ್ನು ಸರ್ಕಾರ ಈಡೇರಿಸಬೇಕಿದೆ ಎಂದು ಹೇಳಿತ್ತು. ಪ್ರಕರಣದ ಮುಂದಿನ ವಿಚಾರಣೆ ನ. 29ಕ್ಕೆ ನಿಗದಿಯಾಗಿದೆ.

Related Stories

No stories found.