ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-09-2021

>> ಮುಖ್ಯ ಕಾರ್ಯದರ್ಶಿ ರಾಜಕೀಯ ಪಕ್ಷದ ವಕ್ತಾರರಲ್ಲ >> ಕರ್ನಾಟಕ ವಿವಿ ಕಾನೂನು ವಿದ್ಯಾರ್ಥಿಗಳು ಉತ್ತೀರ್ಣ >> ಮುಕುಲ್‌ ರಾಯ್‌ ಅನರ್ಹತೆ ಅರ್ಜಿ; ಸ್ಪೀಕರ್‌ಗೆ ಸೂಚನೆ >> ಯೆಸ್ ಬ್ಯಾಂಕ್ ಸಂಸ್ಥಾಪಕರ ಕುಟುಂಬಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-09-2021

ಮುಖ್ಯ ಕಾರ್ಯದರ್ಶಿ ರಾಜಕೀಯ ಪಕ್ಷದ ವಕ್ತಾರರಲ್ಲ: ಕಲ್ಕತ್ತಾ ಹೈಕೋರ್ಟ್‌

ಒಂದು ವೇಳೆ ಭವಾನಿಪುರ್ ಉಪಚುನಾವಣೆಯನ್ನು ಆದ್ಯತೆಯ ಮೇರೆಗೆ ನಡೆಸದೆ ಹೋದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯ ನಡೆಯ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ ಕೆಂಡ ಕಾರಿದೆ. ಮುಖ್ಯ ಕಾರ್ಯದರ್ಶಿಯೊಬ್ಬರು ರಾಜಕೀಯ ಪಕ್ಷವೊಂದರ ವಕ್ತಾರರಂತೆ ವರ್ತಿಸಬಾರದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ನ್ಯಾ. ರಾಜರ್ಷಿ ಭಾರದ್ವಜ್‌ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ಅಭಿಪ್ರಾಯಪಟ್ಟಿತು. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರೆಯಲು ಭವಾನಿಪುರ್ ಉಪಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.

Mamata Banerjee and Calcutta High Court
Mamata Banerjee and Calcutta High Court

ಮುಖ್ಯ ಕಾರ್ಯದರ್ಶಿಯು ಸಾರ್ವಜನಿಕ ಸೇವಕರಾಗಿದ್ದು ಕಾನೂನಿನನ್ವಯ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧರಾಗಿರುತ್ತಾರೆ. ನಿರ್ದಿಷ್ಟ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಖಾತರಿಪಡಿಸಿಕೊಳ್ಳುವುದು ಅವರ ಕರ್ತವ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ. ಭವಾನಿಪುರ್ ಉಪಚುನಾವಣೆಯನ್ನು ಆದ್ಯತೆಯ ಮೇಲೆ ನಡೆಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸ್ನಾತಕೋತ್ತರ ಕಾನೂನು, ಎಲ್‌ಎಲ್‌ಬಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ ಆದೇಶಿಸಿದ ಧಾರವಾಡದ ಕರ್ನಾಟಕ ವಿವಿ

ರಾಜ್ಯ ಸರ್ಕಾರದ ಆದೇಶದಂತೆ ಕಳೆದ ವರ್ಷದ ಜುಲೈ 10ರ ಮಾರ್ಗಸೂಚಿಯ ಅನ್ವಯ ಸ್ನಾತಕೋತ್ತರ ಕಾನೂನು ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯ ಎರಡನೇ ಸೆಮಿಸ್ಟರ್‌ನ ನಿಯಮಿತ (ರೆಗ್ಯುಲರ್‌) ವಿದ್ಯಾರ್ಥಿಗಳಿಗೆ ಮುಂದಿನ ವರ್ಷಕ್ಕೆ ಬಡ್ತಿ ನೀಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಸೋಮವಾರ ಆದೇಶ ಮಾಡಿದೆ.

Dharwad University
Dharwad University

ಅಂತೆಯೇ, ಕರ್ನಾಟಕ ಹೈಕೋರ್ಟ್‌ ಫೆಬ್ರವರಿ 8ರ ಆದೇಶ ಮತ್ತು ಆಗಸ್ಟ್‌ 30ರಂದು ವಿಶ್ವವಿದ್ಯಾಲಯದ ವಿಭಾಗ ಮುಖ್ಯಸ್ಥರ ನಿರ್ಣಯದಂತೆ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಹಾಗೂ ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು, ನಾಲ್ಕು, ಆರು ಮತ್ತು ಎಂಟನೇ ಸೆಮಿಸ್ಟರ್‌ನ ನಿಯಮಿತ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಮುಕುಲ್‌ ರಾಯ್‌ ಶಾಸಕತ್ವ ಅನರ್ಹತೆ: ಅರ್ಜಿ ಇತ್ಯರ್ಥಕ್ಕೆ ಪಶ್ಚಿಮ ಬಂಗಾಳ ಸ್ಪೀಕರ್‌ಗೆ ಕಲ್ಕತ್ತಾ ಹೈಕೋರ್ಟ್‌ ಆದೇಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡು ಗೆಲುವು ಸಾಧಿಸಿದ್ದ ಮುಕುಲ್‌ ರಾಯ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ನಿರ್ಧಾರ ತೆಗೆದುಕೊಳ್ಳುವಂತೆ ಪ. ಬಂಗಾಳ ವಿಧಾನಸಭೆಯ ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

Mukul Roy, Calcutta High Court
Mukul Roy, Calcutta High Court


ಪಶ್ಚಿಮ ಬಂಗಾಳ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷರಾಗಿ ಮುಕುಲ್ ರಾಯ್ ಅವರನ್ನು ನೇಮಿಸುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕಿ ಅಂಬಿಕಾ ರಾಯ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ನಡೆಸಿತು. ಪಿಎಸಿ ಅಧ್ಯಕ್ಷರಾಗಿ ನೇಮಕಾತಿಗೆ ಸಂಬಂಧಿಸಿದ ಮನವಿಯನ್ನು ನಿರ್ಧರಿಸುವ ಮೊದಲು ಅನರ್ಹತೆ ಅರ್ಜಿಯನ್ನು ಇತ್ಯರ್ಥಪಡಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.

ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್ ಪತ್ನಿ, ಪುತ್ರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್‌

ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್‌ಗೆ (DHFL) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಮತ್ತು ಪುತ್ರಿಯರಾದ ರೋಶಿನಿ ಹಾಗೂ ರಾಧಾ ಕಪೂರ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

Rana Kapoor and Bombay High Court
Rana Kapoor and Bombay High Court

ಸೆಪ್ಟೆಂಬರ್ 24ರಂದು ಪ್ರಕರಣದ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಭಾರತಿ ಡಂಗ್ರೆ ಇಂದು ತೀರ್ಪು ನೀಡಿದರು. 27 ಪುಟಗಳ ಆದೇಶದಲ್ಲಿ, ಅರ್ಜಿದಾರರು ಸರ್ಕಾರದ ಆರ್ಥಿಕ ಸ್ಥಿತಿಗೆ ಗಂಭೀರ ಹಾನಿಯನ್ನುಂಟು ಮಾಡಿದ್ದು ಸಾರ್ವಜನಿಕರನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸಿರುವ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ಇಂತಹ ಅಪರಾಧಗಳ ಹೆಚ್ಚುತ್ತಿರುವಂತೆ ರಾಷ್ಟ್ರದ ಒಟ್ಟಾರೆ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ರಾಷ್ಟ್ರದ ಆರ್ಥಿಕತೆಗೆ ಭಾರಿ ಪಟ್ಟು ನೀಡುತ್ತದೆ ಎಂದರು.

Related Stories

No stories found.
Kannada Bar & Bench
kannada.barandbench.com