ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |28-06-2021

> ಮಣಿಪುರ ಮೂಲದ ಸಾಮಾಜಿಕ ಕಾರ್ಯಕರ್ತನ ಪರವಾಗಿ ಸುಪ್ರೀಂ ಮೆಟ್ಟಿಲೇರಿದ ತಂದೆ > ನೀಟ್‌-ಎಂಡಿಎಸ್‌ 2021ರ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಣೆಯಲ್ಲಿನ ವಿಳಂಬ; ಸುಪ್ರೀಂಗೆ ದೂರು > ಕೆಂಪು ಕೋಟೆ ಗಲಭೆ: ಲಾಖಾ ಸಿಧಾನಗೆ ಮಧ್ಯಂತರ ರಕ್ಷಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |28-06-2021

ಮಣಿಪುರ ಮೂಲದ ಸಾಮಾಜಿಕ ಕಾರ್ಯಕರ್ತನ ಪರವಾಗಿ ಸುಪ್ರೀಂ ಮೆಟ್ಟಿಲೇರಿದ ತಂದೆ

ಮಣಿಪುರ ಮೂಲದ ಸಾಮಾಜಿಕ ಕಾರ್ಯಕರ್ತ ಎರೆಂಡ್ರೋ ಲೈಚೊಂಬಾಮ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ತಂದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಲೈಚೊಂಬಾಮ್ ಅವರು ರಾಜ್ಯ ಬಿಜೆಪಿ ಮುಖ್ಯಸ್ಥರ ನಿಧನದ ಬಗ್ಗೆ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ ಸಂಬಂಧ ವಶಕ್ಕೆ ಪಡೆಯಲಾಗಿತ್ತು.

Erendro Leichombam and Supreme Court
Erendro Leichombam and Supreme Court

ಹಾವರ್ಡ್ ಸ್ನಾತಕೋತ್ತರ‌ ಪದವೀಧರನಾಗಿರುವ ಲೈಚೊಂಬಾಮ್‌ ಅವರು ಸಾಮಾಜಿಕ ಹೋರಾಟಗಾರ್ತಿ ಇರೋಮ್ ಶರ್ಮೀಳಾ ಅವರ ಒಡನಾಡಿಯಾಗಿದ್ದವರು. ಪ್ರಭುತ್ವದ ದಮನಕಾರಿ ನಡವಳಿಕೆ ಹಾಗೂ ಮಿಲಿಟರೀಕರಣದ ವಿರುದ್ಧ ಅವರು ದನಿ ಎತ್ತಿದ್ದರು. ವಕೀಲ ಶದನ್‌ ಫರಾಸತ್‌ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ತಮ್ಮ ಮಗ ಬಿಜೆಪಿ ನಾಯಕರು ಹಸುವಿನ ಸೆಗಣಿ ಹಾಗೂ ಗಂಜಲದಿಂದ ಕೋವಿಡ್‌ ನಿವಾರಣೆ ಸಾಧ್ಯ ಎಂದು ಪ್ರಚಾರ ಮಾಡುತ್ತಿದ್ದನ್ನು ವಿಮರ್ಶಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.

ನೀಟ್‌-ಎಂಡಿಎಸ್‌ 2021ರ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಣೆಯಲ್ಲಿನ ವಿಳಂಬದ ವಿರುದ್ಧ ಸುಪ್ರೀಂನಲ್ಲಿ ಅರ್ಜಿ

ನೀಟ್‌-ಎಂಡಿಎಸ್‌, 2021 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (ಎಂಸಿಸಿ) ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸುವಲ್ಲಿ ತೋರಿರುವ “ಅನ್ಯಾಯಯುತ ಮತ್ತು ಅನಿಯಮಿತ ವಿಳಂಬದ” ಬಗ್ಗೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ನೀಟ್‌-ಎಂಡಿಎಸ್‌ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ.

Supreme Court and NEET
Supreme Court and NEET

ನೀಟ್‌-ಎಂಡಿಎಸ್‌ ಪ್ರವೇಶ ಪರೀಕ್ಷೆಗಳನ್ನು ಡಿಸೆಂಬರ್‌ 16, 2020 ರಂದು ನಡೆಸಲಾಗಿತ್ತು. ತದನಂತರ ಡಿಸೆಂಬರ್ 31, 2020 ರಂದು ಫಲಿತಾಂಶಗಳನ್ನೂ ಘೋಷಿಸಲಾಗಿತ್ತು. ಅದರೆ, ಈವರೆಗೆ ಕೌನ್ಸೆಲಿಂಗ್ ಕುರಿತಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀಟ್‌-ಪಿಜಿ ಮತ್ತು ನೀಟ್‌-ಎಂಡಿಎಸ್‌ ಕೌನ್ಸೆಲಿಂಗ್‌ಗಳನ್ನು ಒಟ್ಟಾಗಿ ನಡೆಸಲು ಮುಂದಾಗುವುದಾದರೆ ಅದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಲಿದೆ ಎನ್ನುವ ಆತಂಕವನ್ನೂ ಸಹ ಅರ್ಜಿಯಲ್ಲಿ ವ್ಯಕ್ತಪಡಿಸಲಾಗಿದೆ.

ಕೆಂಪು ಕೋಟೆ ಗಲಭೆ ಪ್ರಕರಣ: ಲಾಖಾ ಸಿಧಾನಗೆ ಮಧ್ಯಂತರ ರಕ್ಷಣೆ ನೀಡಿದ ದೆಹಲಿ ಹೈಕೋರ್ಟ್‌

ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿಯ ಸೆಷನ್ಸ್‌ ನ್ಯಾಯಾಲಯವು ಲಾಖಾ ಸಿಧಾನಾಗೆ ಮಧ್ಯಂತರ ರಕ್ಷಣೆ ಒದಗಿಸಿದೆ. ನೀರೀಕ್ಷಣಾ ಜಾಮೀನು ಕೋರಿ ಲಾಖಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಂದಿನ ಆದೇಶದವರೆಗೆ ಅವರ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

Lakha Sidhana, Red Fort
Lakha Sidhana, Red Fort

ಲಾಖಾ ವಿರುದ್ಧ ಇರುವ ಏಕೈಕ ಆರೋಪವೆಂದರೆ ಜ.4ರಂದು ಅವರು ರೈತರನ್ನು ಉದ್ದೇಶಿಸುತ್ತಿದ್ದ ಸಂದರ್ಭದಲ್ಲಿ ಕೆಂಪುಕೋಟೆ ಪ್ರವೇಶಿಸುವ ಬಗ್ಗೆ ಪ್ರಚೋದನೆ ನೀಡಿದ್ದರು ಎನ್ನುವುದಾಗಿದೆ. ಆದರೆ, ಪೊಲೀಸರೇ ಜ.26ರಂದು ಲಾಖಾ ಕೆಂಪುಕೋಟೆಯನ್ನು ಪ್ರವೇಶಿಸಿರಲಿಲ್ಲ ಎಂದಿದ್ದಾರೆ ಎಂಬುದಾಗಿ ಲಾಖಾ ಪರ ವಕೀಲರು ವಿಚಾರಣೆ ವೇಳೆ ವಾದಿಸಿದರು.

Kannada Bar & Bench
kannada.barandbench.com