ಸೆಬಿ ಷೇರು ಆಂತರಿಕ ವ್ಯಾಪಾರ ನಿಷೇಧ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಮತ್ತು ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ರೂ 3 ಲಕ್ಷ ದಂಡ ವಿಧಿಸಿದೆ.
ಸೆಬಿಯ ನ್ಯಾಯನಿರ್ಣಯ ಅಧಿಕಾರಿ ಈ ಪ್ರಕರಣದ ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ ರೂ 3 ಲಕ್ಷ ದಂಡ ವಿಧಿಸುತ್ತಿರುವುದಾಗಿ ತಿಳಿಸಿದ್ದು ಜಂಟಿಯಾಗಿ ಮತ್ತು ವಿವಿಧ ಹಂತಗಳಲ್ಲಿ 45 ದಿನಗಳ ಒಳಗೆ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
ಪೊಲೀಸರು ವಕೀಲರ ಮನೆ ಅಥವಾ ಕಚೇರಿಯ ಆವರಣ ಶೋಧಿಸುವ ಮತ್ತು ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರದ ಪ್ರತಿಕ್ರಿಯೆ ಕೇಳಿದೆ.
ವಕೀಲ ನಿಖಿಲ್ ಬೋರ್ವಂಕರ್ ಅವರು ಅರ್ಜಿ ಸಲ್ಲಿಸಿದ್ದರು. ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅರ್ಜಿದಾರರ ಪರವಾಗಿ ವಾದ ಮಂಡಿಸಿದರು. ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರ ಕೋರಿಕೆಯನ್ನು ಮನ್ನಿಸದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಯಾವುದೇ ಅಧಿಕೃತ ನೋಟಿಸ್ ನೀಡಲು ನಿರಾಕರಿಸಿತು. “ನಾವು ಪ್ರಕರಣವನ್ನು ಮುಂದೂಡುತ್ತಿದ್ದು ಕೇಂದ್ರದ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದರಿಂದ ಯಾವುದೇ ನೋಟಿಸ್ ನೀಡುವುದಿಲ್ಲ” ಎಂದಿತು. ಪ್ರಕರಣವನ್ನು ಸೆ. 3ಕ್ಕೆ ಮುಂದೂಡಲಾಯಿತು.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ತಮ್ಮ ಶಾಸನಬದ್ಧ ಕರ್ತವ್ಯ ನಿರ್ವಹಿಸಲು ವಿಫಲವಾದ ದೆಹಲಿ ಪೊಲೀಸರಿಗೆ ವಿಚಾರಣಾಧೀನ ನ್ಯಾಯಾಲಯವು ರೂ. 25 ಸಾವಿರ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ದೂರುದಾರರಿಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ. ಸೆಪ್ಟೆಂಬರ್ 13ರಂದು ವಿಚಾರಣೆ ನಿಗದಿಯಾಗಿದ್ದು ಅಲ್ಲಿಯವರೆಗೆ ಪೊಲೀಸರಿಗೆ ವಿಧಿಸಲಾಗಿರುವ ದಂಡವನ್ನು ಪಾವತಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ದೂರುದಾರರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್ ಪ್ರಾಚಾ ಮತ್ತು ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರ ವಾದವನ್ನು ಪೀಠ ಆಲಿಸಿತು. ಕಳೆದ ವರ್ಷದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಗಲಭೆ ವೇಳೆ ಕಣ್ಣಿಗೆ ಗಾಯವಾಗಿದ್ದ ವ್ಯಕ್ತಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು. ಇದನ್ನು ಪ್ರಶ್ನಿಸಿದ್ದ ಪೊಲೀಸರ ಮನವಿಯನ್ನು ವಜಾ ಮಾಡಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ದೆಹಲಿ ಪೊಲೀಸರಿಗೆ ರೂ. 25 ಸಾವಿರ ದಂಡ ವಿಧಿಸಿತ್ತು.