ಕೋವಿಡ್ ವಿರುದ್ಧದ ಲಸಿಕೆ ನೀಡಲು ಮನೆಮನೆಗೆ ತೆರಳುವ ಪ್ರಾಯೋಗಿಕ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಹಾರಾಷ್ಟ್ರ ಸರ್ಕಾರದ ಮುಂದಿರಿಸಿದ್ದು, ಅದಕ್ಕೆ ಸಮ್ಮತಿ ದೊರೆತ ನಂತರ ಕೇಂದ್ರ ಸರ್ಕಾರದ ಅನುಮತಿಗೆ ಕಳುಹಿಸಲಾಗುವುದು ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆಯು ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಆದರೆ, ಇದು ಕೆಲವೊಂದು ಷರತ್ತುಗಳಿಗೆ ಒಳಪಟ್ಟಿದ್ದು ಮನೆಮನೆ ಲಸಿಕೆ ಕಾರ್ಯಕ್ರಮವು ಕೇವಲ ಹಾಸಿಗೆ ಹಿಡಿದಿರುವ, ಚಲಿಸಲಾಗದ ಫಲಾನುಭವಿಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಪ್ರಮಾಣ ಪತ್ರ ಅಗತ್ಯ. ಅಲ್ಲದೆ, ಅದೇ ವೈದ್ಯರು ಲಸಿಕೆಯ ನಂತರ ಫಲಾನುಭವಿಗಳ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಎನ್ನುವ ಬಗ್ಗೆಯೂ ಪ್ರಮಾಣ ಪತ್ರ ನೀಡಬೇಕು ಎನ್ನುವ ಇನ್ನು ಮುಂತಾದ ಷರತ್ತುಗಳನ್ನು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಆದರೆ, ಆರೋಗ್ಯ ಇಲಾಖೆಯ ಈ ಪ್ರಸ್ತಾವನೆಯ ಬಗ್ಗೆ ಬಾಂಬೆ ಹೈಕೋರ್ಟ್ ಸಂತುಷ್ಟವಾಗಿಯೇನೂ ಇಲ್ಲ. ಆರೋಗ್ಯದ ವಿಷಯವು ರಾಜ್ಯ ಪಟ್ಟಿಯಲ್ಲಿ ಬರುವ ವಿಷಯವಾಗಿದ್ದು ಇದಕ್ಕೆ ಕೇಂದ್ರದ ಅನುಮತಿಯ ಅಗತ್ಯವಿಲ್ಲ. ಕೇರಳ, ಬಿಹಾರಗಳು ಅಂತಹ ಅನುಮತಿಯನ್ನು ಪಡೆದಿವೆಯೇ? ನೀವು ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಅನುಮತಿ ಪಡೆಯುತ್ತೀರಾ? ಎಂದು ಪೀಠವು ತನ್ನ ಅಸಮಧಾನವನ್ನು ಹೊರಹಾಕಿದೆ.
ಇತ್ತೀಚೆಗಷ್ಟೇ ಕೋವಿಡ್‌ನಿಂದ ಬಳಲಿರುವವರಿಗೆ ಹಾಗೂ ಕೋವಿಡ್ ನಂತರದ ಆರೋಗ್ಯ ಪರಿಣಾಮಗಳನ್ನು ಎದುರಿಸುತ್ತಿರುವವರಿಗೆ ಮಾತ್ರ ಸಿಎ ಪರೀಕ್ಷೆಯಿಂದ ಹೊರಗುಳಿಯುವ ಆಯ್ಕೆಯನ್ನು ನೀಡಲು ತಾನು ಸಿದ್ಧವಾಗಿರುವುದಾಗಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಸಿಎ ಪರೀಕ್ಷೆಯಿಂದ ಹೊರಗುಳಿಯಲು ಅವಕಾಶ ಕೋರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯರಿಂದ ತಾವು ಕೋವಿಡ್ ಸೋಂಕಿಗೆ ಇತ್ತೀಚಿಗಷ್ಟೇ ಒಳಗಾಗಿದ್ದು ಅದರಿಂದ ಇನ್ನೂ ಚೇತರಿಸಿಕೊಳ್ಳಬೇಕಿದೆ ಎನ್ನುವ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ. ಜಿಲ್ಲಾ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಸಾಮಾನ್ಯ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನೊಂದಾಯಿತ ವೈದ್ಯಕೀಯ ಸೇವಾ ನಿರತರು ಪ್ರಮಾಣಪತ್ರಗಳನ್ನು ನೀಡಬಹುದು ಎನ್ನಲಾಗಿದೆ. ಇದರ ಜೊತೆಗೆ ಆರ್‌ಟಿಪಿಸಿಆರ್ ವರದಿ ಕಡ್ಡಾಯ ಎಂದು ಹೇಳಿದೆ.
ಅಲ್ಪ ಪ್ರಮಾಣದಲ್ಲಿ ಮಾದಕ ದ್ರವ್ಯವನ್ನು ಒಳಗೊಂಡ ಔಷಧಗಳನ್ನು ಅಕ್ರಮ ಮಾದಕ ದ್ರವ್ಯಗಳಿಂದ ಪ್ರತ್ಯೇಕಿಸಬೇಕೆ ಎಂದು ಪರಿಶೀಲಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಇದಕ್ಕೆ ಕಾರಣ 110 ಬಾಟಲಿಗಳಷ್ಟು ಕೆಮ್ಮಿನ ಸಿರಪ್ ಸಂಗ್ರಹಿಸಿಟ್ಟುಕೊಂಡದ್ದಕ್ಕಾಗಿ ಬಂಧಿತರಾದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಜಾಮೀನು ಅರ್ಜಿ.
ಈ ಎರಡರ ಬಗ್ಗೆ ಯಾವುದೇ ವ್ಯತ್ಯಾಸ ಗುರುತಿಸದಿದ್ದರೆ 20 ಕಿ.ಗ್ರಾಂಗಿಂತ ಕಡಿಮೆ ಗಾಂಜಾ ಸಂಗ್ರಹಿಸಿಟ್ಟುಕೊಂಡ ವ್ಯಾಪಾರಿ ಮತ್ತು ಒಂದು ಕೊಡೈನ್ ಕೆಮ್ಮಿನ ಸಿರಪ್ ಇರಿಸಿಕೊಂಡವರು ಒಂದೇ ರೀತಿಯ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳಲ್ಲಿ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 37ರ ಕುರಿತು ನಿರ್ಧರಿಸುವಾಗ ಏಕಸದಸ್ಯ ಪೀಠ ಭಿನ್ನ ನಿಲುವು ತಳೆಯವು ಸಾಧ್ಯತೆ ಇರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾಗಿ ನ್ಯಾಯಾಲಯ ತಿಳಿಸಿದೆ.