ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |02-4-2021

>> ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧದ ಭ್ರಷ್ಟಾಚಾರ ಆರೋಪ; ಏ.5ಕ್ಕೆ ಸಿಬಿಐ ತನಿಖೆಗೆ ನೀಡುವ ಕುರಿತ ತೀರ್ಪು >> ಬಾಂಬೆ ಹೈಕೋರ್ಟ್‌ ಪ್ರಧಾನ ಪೀಠದಲ್ಲಿ ಏಪ್ರಿಲ್‌ 18ರವರೆಗೆ ಭೌತಿಕ ವಿಚಾರಣೆ ಮುಂದುವರಿಕೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |02-4-2021
Published on

ಪರಂ ಬೀರ್‌ ಸಿಂಗ್‌ ವರ್ಸಸ್‌ ಅನಿಲ್‌ ದೇಶಮುಖ್‌: ಸಿಬಿಐ ವಿಚಾರಣೆ ಕುರಿತು ಏಪ್ರಿಲ್‌ 5ರಂದು ತೀರ್ಪು ನೀಡಲಿರುವ ಬಾಂಬೆ ಹೈಕೋರ್ಟ್‌

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಭಾಗಿಯಾಗಿದ್ದಾರೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸುವಂತೆ ಕೋರಿ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಂ ಬೀರ್‌ ಸಿಂಗ್‌ ಸಲ್ಲಿಸಿದ್ದ ಮನವಿಯ ಕುರಿತಾದ ತೀರ್ಪನ್ನು ಬಾಂಬೆ ಹೈಕೋರ್ಟ್‌ ಏಪ್ರಿಲ್‌ 5ರಂದು ಹೊರಡಿಸಲಿದೆ.

Anil Deshmukh, Param Bir Singh
Anil Deshmukh, Param Bir Singh

ವಾದಿ-ಪ್ರತಿವಾದಿಗಳನ್ನು ಬುಧವಾರ ವಿಸ್ತೃತವಾಗಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಂಪಕರ್‌ ದತ್ತ ಮತ್ತು ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ತೀರ್ಪು ಕಾಯ್ದಿರಿಸಿದೆ. ಇದಕ್ಕೆ ಸಂಬಂಧಿಸಿದ ಮೂರು ಮನವಿಗಳಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯವು ಆದೇಶ ಹೊರಡಿಸಲಿದೆ. ಪರಂ ಬೀರ್‌ ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ದಳದಿಂದ ತನಿಖೆ ನಡೆಸುವಂತೆ ಘನಶ್ಯಾಮ್‌ ಉಪಾಧ್ಯಾಯ ಕೋರಿದ್ದಾರೆ. ಮೋಹನ್‌ ಭಿಡೆ ಅವರು ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸಿಬಿಐ ಅಥವಾ ಮತ್ತೊಂದು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿ ಡಾ. ಜೈಶ್ರೀ ಪಾಟೀಲ್‌ ಅವರು ಮನವಿ ಮಾಡಿದ್ದಾರೆ.

ಬಾಂಬೆ ಹೈಕೋರ್ಟ್‌ ಪ್ರಧಾನ ಪೀಠದಲ್ಲಿ ಏಪ್ರಿಲ್‌ 18ರವರೆಗೆ ಭೌತಿಕ ವಿಚಾರಣೆ ಮುಂದುವರಿಕೆ

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಫಿರ್ಯಾದುದಾರರು ಮತ್ತು ವಕೀಲರ ಭೌತಿಕ ಚಟುವಟಿಕೆಗಳನ್ನು ಮಿತಿಗೊಳಿಸಬೇಕು ಎಂಬ ಕೂಗಿನ ನಡುವೆಯೂ ಭೌತಿಕ ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಬಾಂಬೆ ಹೈಕೋರ್ಟ್‌ನ ಪ್ರಧಾನ ಪೀಠ ಹೇಳಿದೆ. ಹಿಂದಿನ ಸೂಚನೆಯಂತೆ ಪ್ರಕರಣದ ನಿಯೋಜನೆ ಮತ್ತು ವಿಚಾರಣೆಯ ಪಟ್ಟಿಯು ಮುಂದುವರಿಯಲಿದೆ ಎಂದು ರಿಜಿಸ್ಟ್ರಾರ್‌ ಜನರಲ್‌ ಹೊಸ ನೋಟಿಸ್‌ನಲ್ಲಿ ತಿಳಿಸಿದ್ದು, ಇದೇ ಸಂದರ್ಭದಲ್ಲಿ ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಲಾಗಿದೆ.

Bombay High Court
Bombay High Court

ಪ್ರಧಾನ ಪೀಠದಲ್ಲಿ ಏಪ್ರಿಲ್‌ 5 ರಿಂದ 18ರ ವರೆಗೆ ಒಟ್ಟು 25 ಪೀಠಗಳಲ್ಲಿ ಭೌತಿಕ ವಿಚಾರಣೆ ನಡೆಯಲಿದೆ. 10 ವಿಭಾಗೀಯ ಪೀಠಗಳು ಹಾಗೂ 15 ಏಕಸದಸ್ಯ ಪೀಠಗಳನ್ನು ಗುರುತಿಸಲಾಗಿದೆ. ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ 28ರಂದು ಹೈಬ್ರಿಡ್‌ ಮಾದರಿಯಲ್ಲಿ ವಿಚಾರಣೆ ನಡೆಸುವ ಸಂಬಂಧ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ನೋಟಿಸ್‌ ಹೊರಡಿಸಲಾಗಿದೆ. ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸುವ ಸಂಬಂಧ ಬಾಂಬೆ ವಕೀಲರ ಪರಿಷತ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ನೀಡಿದ ಬಳಿಕ ಸಭೆ ನಡೆಸಲಾಗಿತ್ತು. ಈ ಪ್ರಸ್ತಾವನೆಗೆ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಏಪ್ರಿಲ್‌ 5ರವರೆಗೆ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಲಾಗಿದೆ.

Kannada Bar & Bench
kannada.barandbench.com