ಅಶ್ಲೀಲ ಚಿತ್ರ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪತಿ ರಾಜ್ ಕುಂದ್ರಾ ಅವರ ಕುರಿತಾಗಿ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮಾಡಲಾದ ಮಾನಹಾನಿಕರ ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಮತ್ತೆ ಅಪ್‌ಲೋಡ್ ಮಾಡದಂತೆ ಎಚ್ಚರವಹಿಸಲು ಶುಕ್ರವಾರ ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಶಿಲ್ಪಾ ಶೆಟ್ಟಿ ಮಕ್ಕಳ ಪೋಷಣೆಯ ಕುರಿತು ಯಾವುದೇ ವರದಿಗಾರಿಕೆ ಮಾಡಬಾರದು ಎಂದು ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ. “ಸುಪ್ರೀಂ ಕೋರ್ಟ್‌ನಿಂದ ಗುರುತಿಸಲ್ಪಟ್ಟ ವಿಶಾಲ ರಕ್ಷಣೆಯ ಅಡಿಯಲ್ಲಿ ಆಕೆಯ ಖಾಸಗಿತನದ ಹಕ್ಕನ್ನು ರಕ್ಷಿಸಲಾಗಿದೆ. ಖಾಸಗಿ ಹಕ್ಕಿನ ಜೊತೆಗೆ ಮಾಧ್ಯಮ ಸ್ವಾತಂತ್ರ್ಯವನ್ನು ಸರಿದೂಗಿಸಬೇಕಿದೆ” ಎಂದು ನ್ಯಾಯಮೂರ್ತಿ ಜಿ ಎಸ್ ಪಟೇಲ್ ಅವರಿದ್ದ ಏಕಸದಸ್ಯ ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ. ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮಾಧ್ಯಮಗಳು ಪರಿಗಣಿಸಬಾರದು ಎಂದಿರುವ ಪೀಠವು ಶೆಟ್ಟಿ ಕೋರಿರುವ ಇತರೆ ಮಧ್ಯಂತರ ಪರಿಹಾರಗಳನ್ನು ಮನ್ನಿಸಿಲ್ಲ.
ಹಿಂದಿನ ಪ್ರಕರಣದಲ್ಲಿ ಪ್ರತಿವಾದಿಯ ಪರವಾಗಿ ಮತ್ತು ಹಾಲಿ ಪ್ರಕರಣದಲ್ಲಿ ಫಿರ್ಯಾದುದಾರರ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರೊಬ್ಬರ ನಡೆಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ಆಘಾತ ವ್ಯಕ್ತಪಡಿಸಿದ್ದಾರೆ. ದಿವಾಳಿ ಸಂಹಿತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿವಾದಿ ಕಂಪೆನಿಯ ಪರವಾಗಿ, ಈಗ ವಾಣಿಜ್ಯ ಪ್ರಕರಣದಲ್ಲಿ ಅದೇ ಕಂಪೆನಿಯ ವಿರುದ್ಧ ವಾದಿಸುವುದು ಹಿತಾಸಕ್ತಿಯ ಸಂಘರ್ಷವಾಗುತ್ತದೆ ಎಂದು ಅವರು ಹೇಳಿದರು.
ವಕೀಲರ ನಡೆತಯಿಂದ ಕುಪಿತರಾದ ನ್ಯಾಯಮೂರ್ತಿ ಪಟೇಲ್ ಅವರು ಮಧ್ಯಂತರ ಪರಿಹಾರವಾಗಿ ನೀಡಿದ್ದ ಆದೇಶವನ್ನು ಹಿಂಪಡೆದಿದ್ದಾರೆ. “ನಿಮಗೆ ನೀಡಲಾಗಿರುವ ಪರಿಹಾರವನ್ನು ನಾನು ಮುಂದುವರಿಸುವುದಿಲ್ಲ. ನಿಮಗೆ ಏನು ಬೇಕೋ ಹಾಗೆ ಮಾಡಿ. ನಮ್ಮ ಮೌಲ್ಯಗಳು ಕುಸಿದಿವೆ. ಆದರೆ ಇಷ್ಟರಮಟ್ಟಿಗೇ! ಏನಾಗಬಹುದು ಎನ್ನುವ ಪರಿಣಾಮದ ಆಲೋಚನೆಯೇ ಇಲ್ಲವಾಗಿ ಹೋಗಿದೆ” ಎಂದು ಅವರು ವಕೀಲರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. “ಸಾಧ್ಯವಿಲ್ಲ ಎಂದು ಹೇಳುವ ನಮ್ಮ ಸಾಮರ್ಥ್ಯಕ್ಕೆ ಏನಾಗಿದೆ! ದೂರು ಸಿದ್ಧಪಡಿಸುವುದು ಮತ್ತು ಮಾಹಿತಿ ಪಡೆಯುವುದು ಒತ್ತೊಟ್ಟಿಗಿರಲಿ ತಮ್ಮ ಕಚೇರಿ ಪ್ರವೇಶಿಸಲು ಈ ಫಿರ್ಯಾದುದಾರರಿಗೆ ಹೇಗೆ ಅವಕಾಶ ಮಾಡಿಕೊಟ್ಟರು ಎಂಬುದೇ ಅರ್ಥವಾಗುತ್ತಿಲ್ಲ. ಅದು ಮತ್ತೊಂದು ಪ್ರಕರಣ ಎಂದು ಹೇಳಲು ಸಾಧ್ಯವೇ?” ಎಂದು ನ್ಯಾ. ಪಟೇಲ್ ಪ್ರಶ್ನಿಸಿದರು. ನ್ಯಾಯಾಲಯವು ಮಾರುಕಟ್ಟೆಯಾಗಿದೆ ಎಂದೂ ಬೇಸರಿಸಿದರು.