ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 29-09-2021

>> ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ ಕಂಪೆನಿಗೆ ರೂ. 25 ಲಕ್ಷ ದಂಡ >> ರಾಜಿಗೆ ಹೊರತಾದ ಗಂಭೀರ ಅಪರಾಧ ಪ್ರಕರಣಗಳ ರದ್ದತಿಗೂ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅಧಿಕಾರ ಬಳಸಬಹುದು: ಸುಪ್ರೀಂ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 29-09-2021
Published on

ನ್ಯಾಯಾಲಯದ ಅಮೂಲ್ಯ ಸಮಯ ಹಾಳು: ಕಂಪೆನಿಯೊಂದಕ್ಕೆ ರೂ 25 ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್

ದುರುದ್ದೇಶಪೂರ್ವಕ ಮತ್ತು ಕಿಡಿಗೇಡಿತನದ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಕ್ಕಾಗಿ ಬಾಂಬೆ ಹೈಕೋರ್ಟ್‌ ಖಾಸಗಿ ಕಂಪೆನಿಯೊಂದಕ್ಕೆ ರೂ 25 ಲಕ್ಷ ದಂಡ ವಿಧಿಸಿದೆ. ಪ್ರಸ್ತುತ ಪ್ರಕರಣದಂತೆಯೇ "ಉಳಿದ ಫಿರ್ಯಾದಿದಾರರು ಕೂಡ ನ್ಯಾಯಾಲಯಗಳು ಆಟದ ಮೈದಾನವಲ್ಲ ಮತ್ತು ವ್ಯಾಜ್ಯ ಎಂಬುದು ಕಾಲಕ್ಷೇಪಕ್ಕಾಗಿ ಹಾಕುವಂಥದ್ದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ" ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

Justice Gautam PatelIndian Express
Justice Gautam PatelIndian Express

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (ಎಂಸಿಎಕ್ಸ್) ವಿರುದ್ಧ ಮೊಕದ್ದಮೆಯಲ್ಲಿ ಲಾ ಫಿನ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ವಾಣಿಜ್ಯ ನ್ಯಾಯಾಲಯಗಳ ಕಾಯಿದೆ ಉಲ್ಲೇಖಿಸಿ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಿದ್ದ 120 ದಿನಗಳ ಕಾಲಮಿತಿ ಮೀರಿದ ಕಾರಣಕ್ಕಾಗಿ ಎಂಸಿಎಕ್ಸ್‌ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನ್ಯಾ. ಗೌತಮ್ ಪಟೇಲ್ ಅವರು ಸಿಸಿ ಕಾಯಿದೆಯ ವ್ಯಾಪಕತೆಯ ಹೊರತಾಗಿಯೂ ಈ ಮೊಕದ್ದಮೆಯನ್ನು ಸಾಮಾನ್ಯ ಮೊಕದ್ದಮೆಯಾಗಿ ಸಲ್ಲಿಸಲಾಗಿದ್ದು, ಸಿಸಿ ಕಾಯಿದೆಯ ನಿಯಮಗಳು ಸಾಮಾನ್ಯ ಮೊಕದ್ದಮೆಗೆ ಅನ್ವಯವಾಗುವುದಿಲ್ಲ ಎಂದರು. ಈ ವೇಳೆ ಮಧ್ಯಂತರ ಪ್ರವೇಶ ಅರ್ಜಿಯನ್ನು ಹಿಂಪಡೆಯುವಂತೆ ಅರ್ಜಿದಾರರಿಗೆ ನ್ಯಾಯಾಲಯವು ತಿಳಿಸಿತು. ಆದರೆ, ಅರ್ಜಿದಾರರು ಇದಕ್ಕೆ ಒಪ್ಪಲಿಲ್ಲ. ಅಂತಿಮವಾಗಿ ನ್ಯಾಯಾಲಯವು ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಕ್ಕಾಗಿ ರೂ. 25 ಲಕ್ಷ ದಂಡ ವಿಧಿಸಿತು. ಒಂದು ವೇಳೆ ಆದೇಶ ಪಾಲಿಸದಿದ್ದರೆ ಶೇ 9ರ ಬಡ್ಡಿದರದೊಂದಿಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ರಾಜಿ ವ್ಯಾಪ್ತಿಗೆ ಹೊರತಾದ ಗಂಭೀರ ಅಪರಾಧ ಪ್ರಕರಣಗಳ ರದ್ದತಿಗೂ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅಧಿಕಾರ ಬಳಸಬಹುದು: ಸುಪ್ರೀಂ ಕೋರ್ಟ್‌

ಅಪರಾಧಗಳ ಗಂಭೀರತೆ ಮತ್ತು ಇತರೆ ವಾಸ್ತವಿಕ ಅಂಶಗಳನ್ನು ಆಧರಿಸಿ ರಾಜಿ ವ್ಯಾಪ್ತಿಗೆ ಹೊರತಾದ ಗಂಭೀರ ಅಪರಾಧ ಪ್ರಕರಣಗಳ ರದ್ದತಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 482ರ ಅಡಿ ಅಧಿಕಾರವನ್ನು ಹೈಕೋರ್ಟ್‌ಗಳು ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸಲು ಚಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

CJI NV Ramana, Justice Surya Kant and SC
CJI NV Ramana, Justice Surya Kant and SC

ಕ್ರಿಮಿನಲ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಂಡಿದ್ದರೂ ಅಥವಾ ಶಿಕ್ಷೆಗೆ ಸಂಬಂಧಿಸಿದಂತೆ ಮೇಲ್ಮನವಿ ವಜಾಗೊಳಿಸಿದ್ದರೂ ಹೇಯವಲ್ಲದ ಅಪರಾಧಗಳು ಅಥವಾ ಖಾಸಗಿ ರೂಪದಲ್ಲಿರುವ ಅಪರಾಧಗಳನ್ನು ರದ್ದುಮಾಡಬಹುದಾಗಿದೆ. ಶಿಕ್ಷೆ ವಿಧಿಸುವುದೇ ನ್ಯಾಯದಾನ ಏಕೈಕ ಪ್ರಕಾರವಲ್ಲ ಎಂದು ಸಿಜೆಐ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

Kannada Bar & Bench
kannada.barandbench.com