ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 30-08-2021

>> ಒಂಭತ್ತು ಮಂದಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಂದ ಪ್ರಮಾಣ ವಚನ >> ಗುಜರಾತ್‌ ಸರ್ಕಾರದ ಅಧಿಸೂಚನೆ ರದ್ದುಪಡಿಸಿದ ಸುಪ್ರೀಂಕೋರ್ಟ್‌ >> ವಿಚಾರಣೆ ಬಾಕಿ ಇರುವಾಗಲೇ ಮರುಮದುವೆಗೆ ಮಹಿಳೆ ಸಿದ್ಧತೆ: ವಿಚ್ಛೇದನಕ್ಕೆ ಪತಿಗೆ ಅನುಮತಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 30-08-2021
Published on

ಇದೇ ಮೊದಲ ಬಾರಿಗೆ ಒಂಭತ್ತು ಮಂದಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಂದ  ಪ್ರಮಾಣ ವಚನ 

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡ ಒಂಭತ್ತು ಮಂದಿ ನ್ಯಾಯಮೂರ್ತಿಗಳು ಮಂಗಳವಾರ, ಆಗಸ್ಟ್‌ 31ರಂದು ಪದಗ್ರಹಣ ಮಾಡಲಿದ್ದಾರೆ. ಒಂಭತ್ತು ಮಂದಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಒಂದೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ನೂತನ ನ್ಯಾಯಮೂರ್ತಿಗಳಿಗೆ ಬೆಳಗ್ಗೆ 10:30ಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣ ವಚನದ ನೇರ ಪ್ರಸಾರವನ್ನು ಡಿಡಿ ನ್ಯೂಸ್‌, ಡಿಡಿ ಇಂಡಿಯಾ ಹಾಗೂ ಅಂತರ್ಜಾಲದ ಮೂಲಕ ವೀಕ್ಷಿಸಬಹುದಾಗಿದೆ.

Nine New Judges - Supreme Court
Nine New Judges - Supreme Court

ಸಂಪ್ರದಾಯದಿಂದ ಹೊರಬಂದು ಇದೇ ಮೊದಲ ಬಾರಿಗೆ ದೆಹಲಿಯ ಪ್ರಗತಿ ಮೈದಾನ್‌ ಮಟ್ರೋ ಸ್ಟೇಷನ್‌ ಸಮೀಪದ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಕಟ್ಟಡ ಸಮುಚ್ಚಯದಲ್ಲಿ ಪ್ರಮಾಣ ವಚನ ಸಮಾರಂಭ ಜರುಗಲಿದೆ. ಈವರೆಗೆ ಸಿಜೆಐ ಅವರ ನ್ಯಾಯಾಲಯ ಕೊಠಡಿಯಲ್ಲಿ ಪ್ರಮಾವಚನ ಸ್ವೀಕಾರ ನಡೆಯುತ್ತಿತ್ತು. ಕೋವಿಡ್‌ ಸಂಬಂಧ ನಿಯಮಾವಳಿಗಳಿಗೆ ಬದ್ಧವಾಗಿರುವ ಹಿನ್ನೆಲೆಯಲ್ಲಿ ಸಮಾರಂಭದ ಸ್ಥಳವನ್ನು ಬದಲಿಸಲಾಗಿದೆ.

ಮಾಫಿಯಾ ಜೊತೆ ಅಧಿಕಾರಿಗಳ ನಂಟು: ಗುಜರಾತ್‌ ಸರ್ಕಾರದ ಅಧಿಸೂಚನೆ ರದ್ದುಪಡಿಸಿದ ಸುಪ್ರೀಂ

ಅನುಮತಿ ಇಲ್ಲದ ಕಟ್ಟಡಗಳು ಅಥವಾ ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಮೂರು ತಿಂಗಳ ಅವಧಿಗೆ ಕಟ್ಟಡ ನಿಯಂತ್ರಣ ನಿಯಮ ಪಾಲನೆ ಹೊಣೆಗಾರಿಕೆಯಿಂದ ವಿನಾಯಿತಿ ನೀಡುವ ಗುಜರಾತ್‌ ಸರ್ಕಾರದ ಅಧಿಸೂಚನೆಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಈ ಸಡಿಲಿಕೆ ಮಾಡಿತ್ತು.

Justices DY Chandrachud and MR Shah
Justices DY Chandrachud and MR Shah

ಕಟ್ಟಡ ಬಳಕೆ ಅಥವಾ ಅಗ್ನಿಶಾಮಕ ಅನುಮತಿಗಳನ್ನು ಹೊಂದಿರದ ಕಟ್ಟಡಗಳ ಅಕ್ರಮಗಳನ್ನು ಕ್ಷಮಿಸಿದರೆ ಅದು ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ಇತ್ತೀಚೆಗೆ ರಾಜಕೋಟ್‌ ಮತ್ತು ಭರೂಚ್‌ನಲ್ಲಿ ನಡೆದ ಅಗ್ನಿ ಆಕಸ್ಮಿಕಗಳಿಂದ ತಿಳಿದುಬಂದಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂಆರ್ ಶಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಯೋಜನಾಧಿಕಾರಿಗಳು ಮತ್ತು ಮಾಫಿಯಾ ನಡುವೆ ನಂಟು ಇದ್ದು ಇದರಿಂದ ತೊಂದರೆಯಾಗುವುದು ಜನರಿಗೆ ಎಂದು ಅದು ಈ ಸಂದರ್ಭದಲ್ಲಿ ತಿಳಿಸಿತು. ರಾಜ್‌ಕೋಟ್‌ ಮತ್ತು ಅಹಮದಾಬಾದ್‌ನಲ್ಲಿ ನಡೆದ ಅಗ್ನಿ ಅವಘಡಗಳ ಹಿನ್ನೆಲೆಯಲ್ಲಿ ದೇಶದೆಲ್ಲೆಡೆಯ ಕೋವಿಡ್‌ ಆಸ್ಪತ್ರೆಗಳಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕಗಳ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆ ಬಾಕಿ ಇರುವಾಗಲೇ ಮರುಮದುವೆಗೆ ಮಹಿಳೆ ಸಿದ್ಧತೆ: ವಿಚ್ಛೇದನ ಪಡೆಯಲು ಪತಿಗೆ ಬಾಂಬೆ ಹೈಕೋರ್ಟ್‌ ಅನುಮತಿ

ವಿಚ್ಛೇದನ ಪ್ರಕರಣದ ವಿಚಾರಣೆ ಬಾಕಿ ಇರುವಾಗ ಪತ್ನಿ ಪತಿಯ ವಿರುದ್ಧ ಸುಳ್ಳು ಆರೋಪ ಮಾಡಿದ್ದು ವಿವಾಹ ಜಾಲತಾಣಗಳಲ್ಲಿ ತನ್ನ ಸ್ವವಿವರವನ್ನು ಅಪ್‌ಲೋಡ್‌ ಮಾಡಿರುವ ಹಿನ್ನೆಲೆಯಲ್ಲಿ ಪತಿ ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂದು ಪರಿಗಣಿಸಿದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಆತ ವಿಚ್ಛೇದನ ಪಡೆಯಲು ಅನುಮತಿಸಿತು.

Nagpur Bench
Nagpur Bench

ಪತಿ ಕ್ರೌರ್ಯ ಅನುಭವಿಸಿದ್ದಾರೆಂದು ಸಾಬೀತುಪಡಿಸಲು ಪತ್ನಿಯ ಕ್ರೂರ ಆರೋಪಗಳು ಮತ್ತು ವಿಚಾರಣೆ ಬಾಕಿ ಇರುವಾಗಲೇ ಮರುಮದುವೆಗೆ ನಿರ್ಧಾರ ಕೈಗೊಂಡ ಸಂಗತಿ ಸಾಕು ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್‌ಕರ್‌ ಮತ್ತು ಜಿ ಎ ಸನಪ್ ಅವರಿದ್ದ ವಿಭಾಗೀಯ ಪೀಠ ಈ ಸಂದರ್ಭದಲ್ಲಿ ತಿಳಿಸಿತು. ಅಕೋಲಾದಲ್ಲಿನ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com