ಭಾರತದ ವರ್ಚಸ್ಸಿಗೆ ಧಕ್ಕೆ ತರಲೆಂದು ಕಾಂಗ್ರೆಸ್ ಪಕ್ಷವು ಕೋವಿಡ್ ಕುರಿತಾದ ಟೂಲ್‌ಕಿಟ್ (ಮಾಹಿತಿ ಸಂಕಲನ) ರೂಪಿಸಿದೆ ಎನ್ನುವ ಭಾರತೀಯ ಜನತಾ ಪಕ್ಷದ ಆರೋಪದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ತನಿಖೆ ನಡೆಸಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಅರ್ಜಿದಾರ ವಕೀಲರಾದ ಶಂಕರ್ ಶೇಖರ್ ಝಾ ಅವರು ಅರೋಪಿತ ಟೂಲ್‌ಕಿಟ್ ಬಗ್ಗೆ ತನಿಖೆ ನಡೆಸಿ, ಸೆಕ್ಷನ್ 120-ಬಿ (ಕ್ರಿಮಿನಲ್ ಸಂಚು), ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ (ಯುಎಪಿಎ) ಸೆಕ್ಷನ್ 13 ಹಾಗೂ ಇತರೆ ಐಪಿಸಿ ಸೆಕ್ಷನ್‌ಗಳಡಿ ಈ ಪ್ರಕರಣದಲ್ಲಿ ಏನಾದರೂ ಅಪರಾಧ ಘಟಿಸಿದೆಯೇ ಎನ್ನುವುದನ್ನು ಪತ್ತೆಹಚ್ಚಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯವು ಇಂತಹ ಟೂಲ್‌ಕಿಟ್‌ಗಳು ರಾಜಕೀಯ ಪ್ರಚಾರಗಳ ಭಾಗವಾಗಿವೆ. ಅರ್ಜಿದಾರರಿಗೆ ಈ ಬಗ್ಗೆ ಇಷ್ಟವಿಲ್ಲವೆಂದರೆ ಅವರು ಅದನ್ನು ನಿರ್ಲಕ್ಷಿಸಬಹುದು ಎಂದಿತು.
ಕೇರಳದ ಶಾಸನ ಸಭೆಯಲ್ಲಿ 2015ರಲ್ಲಿ ಸಿಪಿಐಎಂ ಶಾಸಕರು ನಡೆಸಿದ್ದ ದಾಂಧಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸೋಮವಾರ ಶಾಸಕರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಸಾರ್ವಜನಿಕ ಆಸ್ತಿಯನ್ನು ನಷ್ಟಗೊಳಿಸುವಂತಹ ಸದನದ ಮೈಕ್‌ಗಳನ್ನು ಕಿತ್ತೆಸೆಯುವ ಬಗೆಯ ವರ್ತನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ಡಿ ವೈ ಚಂದ್ರಚೂಡ್ ಹಾಗೂ ನ್ಯಾ. ಎಂ ಆರ್ ಶಾ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. “ಇಂತಹ ವರ್ತನೆಗಳ ಬಗ್ಗೆ ನಾವು ಕಠಿಣ ನಿಲುವು ತೆಗೆದುಕೊಳ್ಳಬೇಕು. ಇದು ಒಪ್ಪಿತ ವರ್ತನೆಯಲ್ಲ. ಮೈಕ್ ಕಿತ್ತು ಸದನದ ನೆಲಕ್ಕೆ ಎಸೆಯುತ್ತಿರುವ ಶಾಸಕರೊಬ್ಬರ ವರ್ತನೆಯನ್ನು ಗಮನಿಸಿ. ಅವರು ವಿಚಾರಣೆಯನ್ನು ಎದುರಿಸಬೇಕು,” ಎಂದು ನ್ಯಾ.ಚಂದ್ರಚೂಡ್ ಹೇಳಿದರು. ಪ್ರಕರಣದ ವಿಚಾರಣೆಯನ್ನು ಜುಲೈ 15ಕ್ಕೆ ನ್ಯಾಯಾಲಯ ಮುಂದೂಡಿದೆ.
ವಿವಾದಾಸ್ಪದ ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ಎನ್‌ಐಎ ನ್ಯಾಯಾಲಯವು ತನ್ನನ್ನೂ ಸೇರಿದಂತೆ ಪ್ರಕರಣದ ಇತರ ಏಳು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಅಕ್ರಮ ಹಣವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪಗಳಡಿ ಜಾರಿ ನಿರ್ದೇಶನಾಲಯವು ತನಿಖೆ ನಡೆಸಿ ಆರೋಪಿಗಳನ್ನು ಕಳೆದ ವರ್ಷ ಜುಲೈನಲ್ಲಿ ಬಂಧಿಸಿತ್ತು.