ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-08-2021

>> ತಮಿಳುನಾಡು ಮಾಧ್ಯಮ ಪರಿಷತ್ ಆರಂಭಿಸಲು ಸರ್ಕಾರಕ್ಕೆ ನಿರ್ದೇಶನ >> ಮೊದಲ ಸಲ ಸಂತ್ರಸ್ತೆಯ ಪ್ರತಿರೋಧ ಇಲ್ಲದ್ದನ್ನು ಗಮನಿಸಿ ಅತ್ಯಾಚಾರ ಆರೋಪಿ ಖುಲಾಸೆ >> ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ಸಹಕರಿಸಿದ ಆರೋಪಿಗೆ ಜಾಮೀನು
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-08-2021

ನಕಲಿ ಪತ್ರಕರ್ತರು, ಕಾಸಿಗಾಗಿ ಸುದ್ದಿ ನಿಯಂತ್ರಿಸಲು ತಮಿಳುನಾಡು ಮಾಧ್ಯಮ  ಪರಿಷತ್ ಆರಂಭಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಮದ್ರಾಸ್‌ ಹೈಕೋರ್ಟ್‌

ನಕಲಿ ಪತ್ರಕರ್ತರು, ಕಾಸಿಗಾಗಿ ಸುದ್ದಿ ಮತ್ತು ದುರುದ್ದೇಶ ಹೊಂದಿದ್ದ ಮಾಧ್ಯಮ ಸಿಬ್ಬಂದಿ ಮತ್ತು ಸಂಸ್ಥೆಯನ್ನು ನಿಯಂತ್ರಿಸುವ ಸಂಬಂಧ ರಾಜ್ಯಮಟ್ಟದ ಮಾಧ್ಯಮ ನಿಯಂತ್ರಣ ಸಂಸ್ಥೆಯಾಗಿ ಕೆಲಸ ಮಾಡಲಿರುವ ತಮಿಳುನಾಡು ಮಾಧ್ಯಮ ಪರಿಷತ್ ಸೃಷ್ಟಿಸುವಂತೆ ರಾಜ್ಯ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

Madras High court
Madras High court

ಸೇವೆಯಿಂದ ನಿವೃತ್ತಿ ಹೊಂದುವ ಕೊನೆಯ ದಿನ ನ್ಯಾಯಮೂರ್ತಿ ಎನ್‌ ಕಿರುಬಾಕರನ್‌ ಅವರು ನ್ಯಾಯಮೂರ್ತಿ ಪಿ ವೇಲಮುರುಗನ್‌ ಅವರೊಡಗೂಡಿ ಮೇಲಿನ ಆದೇಶ ಮಾಡಿದ್ದಾರೆ. “ಸುದ್ದಿಯನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಅಭಿಪ್ರಾಯಗಳನ್ನು ವರದಿ ಮಾಡಲಾಗುತ್ತಿದೆ.. ತಮ್ಮ ಅಭಿಪ್ರಾಯ ಮತ್ತು ಸಿದ್ಧಾಂತಕ್ಕೆ ಅನುಗುಣವಾಗಿ ಹಲವು ಮಾಧ್ಯಮ ಸಂಸ್ಥೆಗಳು ಸುದ್ದಿ ಬಿತ್ತರಿಸುತ್ತಿವೆ. ಪ್ರತಿಯೊಬ್ಬರು ತಮ್ಮ ಅಭಿಪ್ರಾಯ/ಸಿದ್ಧಾಂತ ಹೊಂದಬಹುದಾಗಿದೆ. ಆದರೆ, ಅದನ್ನು ಸುದ್ದಿಯ ಜೊತೆ ಮಿಶ್ರಣ ಮಾಡಬಾರದು. ಇದು ಭ್ರಷ್ಟ ಚಾಳಿಗೆ ಸಮಾನವಾಗಿದ್ದು, ತಮ್ಮ ಅಭಿಪ್ರಾಯವನ್ನು ಮತ್ತೊಬ್ಬರ ಮೇಲೆ ಹೇರುವುದಾಗಿದೆ” ಎಂದು ನ್ಯಾ. ವೇಲಮುರುಗನ್‌ ಬರೆದಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಕಲಿ ಪತ್ರಕರ್ತರ ಸಂಖ್ಯೆ ವ್ಯಾಪಕವಾಗಿರುವುದರಿಂದ ತಮ್ಮ ಮೇಲೆ ದಾಳಿಯಾಗಬಹುದು ಎಂದು ನೈಜ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಹೆದರುವಂತಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮೊದಲ ಸಲವೇ ಪ್ರತಿರೋಧ ಒಡ್ಡದೇ ಇದ್ದುದು ಲೈಂಗಿಕ ಕ್ರಿಯೆಗೆ ಸಂತ್ರಸ್ತೆಯ ಸಹಮತಿ ತಿಳಿಸುತ್ತದೆ: ಮದ್ರಾಸ್‌ ಹೈಕೋರ್ಟ್‌ನಿಂದ ಆರೋಪಿ ಖುಲಾಸೆ

ಲೈಂಗಿಕ ದೌರ್ಜನ್ಯದ ವೇಳೆ ಮೊದಲ ಬಾರಿಯೇ ದೂರುದಾರೆ ಪ್ರತಿರೋಧ ವ್ಯಕ್ತಪಡಿಸಲಿಲ್ಲ ಇದು ಆಕೆಯ ಸಹಮತವನ್ನು ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ಇತ್ತೀಚೆಗೆ ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿತು. ಅಲ್ಲದೆ ದೂರುದಾರೆ ಮಾಡಿದ ಆರೋಪಗಳ ನೈಜತೆ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

Madras High Court, Madurai Bench
Madras High Court, Madurai Bench

ಆರೋಪಿ ಮತ್ತು ದೂರುದಾರೆ ಇಬ್ಬರೂ ಕೆಲಕಾಲ ಸಹಜೀವನ ನಡೆಸಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿ ಆರೋಪಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ. ಸಂತ್ರಸ್ತೆ ಗರ್ಭಿಣಿಯಾದಾಗ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಆದರೆ ಅದಕ್ಕೆ ಆರೋಪಿ ಒಪ್ಪದೇ ಇದ್ದುದರಿಂದ ಗರ್ಭಪಾತ ಮಾಡಿಸಿಕೊಂಡಳು. ಮದುವೆಯಾಗುವುದಾಗಿ ನಂಬಿಸಿ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಳು. ಘಟನೆ ನಡೆಯುವ ವೇಳೆಗೆ ಇಬ್ಬರೂ ಪ್ರೌಢಾವಸ್ಥೆ ತಲುಪಿದ್ದರು ಎಂಬ ಅಂಶಗಳನ್ನು ಗಮನಿಸಿದ ನ್ಯಾಯಮೂರ್ತಿ ಆರ್‌ ಪೊಂಗಿಯಪ್ಪನ್‌ ಅವರಿದ್ದ ಪೀಠ ಆರೋಪಿಯನ್ನು ಖುಲಾಸೆಗೊಳಿಸಿತು.

ತಲಾಖ್ ನೀಡಿ, ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಸಹಕರಿಸಿದ ಆರೋಪ ಹೊತ್ತ ವ್ಯಕ್ತಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು

ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ನೆರವಾದ ಮತ್ತು ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ ಸೆಕ್ಷನ್‌ 4 ಉಲ್ಲಂಘಿಸಿದ ಆರೋಪ ಹೊತ್ತಿರುವ ವ್ಯಕ್ತಿಗೆ ಈಚೆಗೆ ದೆಹಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆರೋಪಿಯ ನಿರ್ದೋಷಿತನ ನಿರೂಪಿಸಲು ಗಟ್ಟಿಯಾದ ಅಂಶಗಳಿದ್ದು ಎಲ್ಲಾ ವಿವಾದಿತ ವಿಚಾರಗಳಿಗೆ ತನಿಖೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ದೇವೇಂದ್ರ ಕುಮಾರ್‌ ಹೇಳಿದ್ದಾರೆ.

ಕಾಯಿದೆಯ ಸೆಕ್ಷನ್‌ 4ರ ಪ್ರಕಾರ ಆರೋಪಿಯು ದೂರುದಾರೆಗೆ ವಿಚ್ಛೇದನ ನೀಡಿದ ಬಳಿಕ ಮತ್ತು ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಸ್ನೇಹಿತ ನಸೀಮ್‌ ಸಹ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಬಳಿಕ ವಿವಾದ ಸೃಷ್ಟಿಯಾಗಿತ್ತು. ಎಲ್ಲಾ ಆರೋಪಗಳನ್ನೂ ನಿರಾಕರಿಸಿರುವ ಆರೋಪಿಯು ಪತ್ನಿಗೆ ವಿಚ್ಛೇದನ ನೀಡಿಯೂ ಇಲ್ಲ ಮತ್ತು ಅತ್ಯಾಚಾರ ಎಸಗಿಲ್ಲ ಎಂದಿದ್ದಾರೆ. ತನ್ನ ಮುಗ್ಧತೆಯನ್ನು ಅರಿತಿರುವ ದೂರುದಾರೆಯು ಸಾಮೂಹಿಕ ಅತ್ಯಾಚಾರದ ಕಟ್ಟುಕತೆ ಹೆಣೆದು ಸುಳ್ಳು ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿದ್ದಾರೆ ಎಂದು ಆರೋಪಿ ಹೇಳಿದ್ದಾರೆ. ಅಲ್ಲದೆ, ಇಷ್ಟೆಲ್ಲಾ ಆರೋಪಗಳ ನಂತರವೂ ಮಹಿಳೆಯು ಆರೋಪಿಯ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿರುವ ಅಂಶವನ್ನೂ ಸಹ ನ್ಯಾಯಾಧೀಶರು ಜಾಮೀನು ಆದೇಶದ ವೇಳೆ ಪರಿಗಣಿಸಿದರು.

Related Stories

No stories found.
Kannada Bar & Bench
kannada.barandbench.com