ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 10-08-2021

>> ಅಭ್ಯರ್ಥಿಯ ಕ್ರಿಮಿನಲ್‌ ಹಿನ್ನೆಲೆ ಒಳಗೊಂಡ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲು ನಿರ್ದೇಶನ >> ತೇಜ್‌ಪಾಲ್‌ ಪ್ರಕರಣ: ಗೌಪ್ಯ ವಿಚಾರಣೆಗೆ ಮೆಹ್ತಾ ವಿರೋಧ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 10-08-2021

ಅಭ್ಯರ್ಥಿಯ ಕ್ರಿಮಿನಲ್‌ ಹಿನ್ನೆಲೆ ಒಳಗೊಂಡ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ಮತದಾರರಿಗೆ ಉಮೇದುವಾರರ ಪೂರ್ವಾಪರ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅಭ್ಯರ್ಥಿಗಳ ಕ್ರಿಮಿನಲ್‌ ಹಿನ್ನೆಲೆ ಒಳಗೊಂಡ ಮಾಹಿತಿಯನ್ನು ಪಕ್ಷದ ವೆಬ್‌ಸೈಟ್‌ನ ಮುಖಪುಟದಲ್ಲಿ ಪ್ರಕಟಿಸುವಂತೆ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಹೆಚ್ಚುವರಿ ನಿರ್ದೇಶನಗಳನ್ನು ನೀಡಿದೆ.

Supreme Court and Election Commission of india
Supreme Court and Election Commission of india

ಇದೇ ವೇಳೆ, ಅಭ್ಯರ್ಥಿಯು ತನ್ನ ಬಗ್ಗೆ ಘೋಷಿಸಿಕೊಂಡಿರುವ ಕ್ರಿಮಿನಲ್‌ ಪೂರ್ವಾಪರವನ್ನು ಒಳಗೊಂಡ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಹೀಗೆ ಮಾಡುವುದರಿಂದ ತಮ್ಮ ಮೊಬೈಲ್‌ನಲ್ಲಿ ಮತದಾರರಿಗೆ ಮಾಹಿತಿ ಲಭ್ಯವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಿರಲಿಲ್ಲ ಎಂದು ಅರ್ಜಿದಾರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಮನವಿಯ ತೀರ್ಪು ಹೊರಡಿಸುವಾಗ ಪೀಠ ಮೇಲಿನಂತೆ ಹೇಳಿದೆ.

ತೇಜ್‌ಪಾಲ್‌ ಪ್ರಕರಣ: ದೂರು ದಾಖಲಿಸಿದ ಮಹಿಳೆಗೆ ಏನಾಗಿದೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ; ಗೌಪ್ಯ ವಿಚಾರಣೆಗೆ ಮೆಹ್ತಾ ವಿರೋಧ

ಮಾಜಿ ಸಹೋದ್ಯೋಗಿ ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್‌ ತೇಜ್‌ಪಾಲ್‌ ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಗೌಪ್ಯವಾಗಿ ನಡೆಸುವಂತೆ ತೇಜಪಾಲ್‌ ಕೋರಿದ್ದಾರೆ. ಪ್ರಕರಣದ ಸೂಕ್ಷ್ಮತೆಯ ಕಾರಣದಿಂದಾಗಿ, ಅಲ್ಲಿ ಓದಬಹುದಾದ ಸಂಗತಿಗಳ ಕಾರಣದ ಹಿನ್ನೆಲೆಯಲ್ಲಿ ತಾವು ಹೀಗೆ ಹೇಳುತ್ತಿರುವುದಾಗಿ ತೇಜಪಾಲ್‌ ಪರ ಹಿರಿಯ ವಕೀಲ ಅಮಿತ್‌ ದೇಸಾಯಿ ಹೇಳಿದರು. ಇದನ್ನು ವಿರೋಧಾತ್ಮಕ ಭಾವನೆಯಿಂದ ಪರಿಗಣಿಸುವ ಅಗತ್ಯವಿಲ್ಲ. ಇದುವರೆಗೆ ನಡೆದಿರುವ ಎಲ್ಲಾ ವಿಚಾರಣೆಗಳನ್ನು ಗೌಪ್ಯವಾಗಿಯೇ ನಡೆಸಲಾಗಿದೆ ಎಂದು ಅವರು ಹೇಳಿದರು.

Tushar Mehta, Tarun Tejpal and Bombay High Court Goa Bench
Tushar Mehta, Tarun Tejpal and Bombay High Court Goa Bench

ಇದನ್ನು ವಿರೋಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸಾಮಾನ್ಯವಾಗಿ ಇಂಥ ಕೋರಿಕೆಯನ್ನು ನಾನು ಒಪ್ಪಿಕೊಳ್ಳುತ್ತಿದ್ದೆ. ಪ್ರಸ್ತುತ ಪ್ರಕರಣದಲ್ಲಿ ಸಾಂಸ್ಥಿಕ ವೈಫಲ್ಯವಾಗಿದ್ದು, ಅದು ಅಂತಿಮವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ನ್ಯಾಯಾಲಯದ ಕದತಟ್ಟದಂತೆ ಮಾಡಿದೆ ಎಂದಿದ್ದಾರೆ. “ದೂರು, ನಿಖರವಾದ ಸಂಗತಿ ಮತ್ತು ದೃಢೀಕೃತ ಸಾಕ್ಷ್ಯಗಳನ್ನು ಇಟ್ಟುಕೊಂಡು ಬಂದ ಯುವತಿಗೆ ಏನಾಗಿದೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಲಘುವಾಗಿ ಹೇಳುವುದಾದರೆ ಎರಡು ರೀತಿಯಲ್ಲಿ ಉಡುಪು ಕಳಚಲಾಗುತ್ತದೆ. ಸಂತ್ರಸ್ತೆಯ ವಸ್ತ್ರವನ್ನು ಆರೋಪಿ ಕಳಚುವುದು ಒಂದಾದರೆ, ಆರೋಪಿಯ ವಸ್ತ್ರವನ್ನು ನ್ಯಾಯಾಲಯದಲ್ಲಿ ಕಳಚುವುದು ಮತ್ತೊಂದು” ಎಂದು ಮೆಹ್ತಾ ಮಾರ್ಮಿಕವಾಗಿ ನುಡಿದರು.

Related Stories

No stories found.
Kannada Bar & Bench
kannada.barandbench.com