ʼಆಯುಷ್ʼ ವ್ಯಾಪ್ತಿಗೆ ಒಳಪಡುವ ಆಯುರ್ವೇದ ವೈದ್ಯರು ನಿವೃತ್ತಿ ವಯೋಮಿತಿಯನ್ನು 65 ವರ್ಷಗಳಿಗೆ ಹೆಚ್ಚಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈವರೆಗೆ ಅವರ ನಿವೃತ್ತಿ ವಯೋಮಿತಿ 60 ವರ್ಷ ಇತ್ತು. ನಿವೃತ್ತಿ ವಯಸ್ಸು ನಿಗದಿ ಪಡಿಸುವಾಗ ಆಯುರ್ವೇದ ಮತ್ತು ಅಲೋಪತಿ ವೈದ್ಯರ ನಡುವೆ ಎರಡು ಭಿನ್ನ ವ್ಯವಸ್ಥೆ ಬಳಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ. ಅವರನ್ನು ಪ್ರತ್ಯೇಕಿಸಿ ನೋಡದೇ ಇರಲು ಇಬ್ಬರೂ ರೋಗಿಗಳಿಗಾಗಿ ಸೇವೆ ಸಲ್ಲಿಸುತ್ತಾರೆ ಎನ್ನುವ ಒಂದೇ ಆಧಾರ ಸಾಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
“ಒಂದೇ ವ್ಯತ್ಯಾಸವೆಂದರೆ ಆಯುಷ್ ವೈದ್ಯರು ಆಯುರ್ವೇದ, ಯುನಾನಿ, ಮುಂತಾದ ಸ್ಥಳೀಯ ಔಷಧಿಗಳನ್ನು ಬಳಸುತ್ತಿದ್ದಾರೆ ಮತ್ತು CHS ವೈದ್ಯರು ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ಅಲೋಪತಿಯನ್ನು ಬಳಸುತ್ತಿದ್ದಾರೆ. ನಮ್ಮ ತಿಳಿವಳಿಕೆಯಲ್ಲಿ, ಪ್ರಚಲಿತ ಸನ್ನಿವೇಶವನ್ನು ಪರಿಗಣಿಸಿ ಒಟ್ಟಾರೆಯಾಗಿ ಗಮನಿಸಿದರೆ ಚಿಕಿತ್ಸಾ ವಿಧಾನವೆನ್ನುವುದು ವಿವೇಕಯುತ ವ್ಯತ್ಯಾಸವಾಗಿ ಅರ್ಹತೆ ಪಡೆಯುವುದಿಲ್ಲ. ಆದ್ದರಿಂದ, ಅಂತಹ ಅಸಮಂಜಸವಾದ ವರ್ಗೀಕರಣ ಮತ್ತು ಆಧಾರದ ಮೇಲೆ ಮಾಡುವ ತಾರತಮ್ಯ ಖಂಡಿತವಾಗಿಯೂ ಸಂವಿಧಾನದ 14 ನೇ ವಿಧಿಗೆ ಹೊಂದಿಕೆಯಾಗುವುದಿಲ್ಲ" ಎಂದು ತೀರ್ಪು ಹೇಳಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಡಾ ರಾಮ್ ನರೇಶ್ ಶರ್ಮ ನಡುವಣ ಪ್ರಕರಣ ಇದಾಗಿದೆ.
ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಸೇವೆಯಲ್ಲಿ ತೊಡಗಿದ್ದ ವೈದ್ಯ ಡಾ. ಕಫೀಲ್ ಖಾನ್ ಅವರನ್ನು ನಾಲ್ಕು ವರ್ಷಗಳ ಕಾಲ ಹೇಗೆ ಅಮಾನತಿನಲ್ಲಿಡಲಾಗಿದೆ ಎಂಬುದನ್ನು ಸಮರ್ಥಿಸಿಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಅಲಾಹಾಬಾದ್ ಹೈಕೋರ್ಟ್ ಕೇಳಿದೆ. ತಮ್ಮ ಅಮಾನತು ಪ್ರಶ್ನಿಸಿ ಖಾನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆಯಾಗದೆ 63 ಮಕ್ಕಳು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಖಾನ್ ಅವರನ್ನು 2017ರಲ್ಲಿ ಅಮಾನತು ಮಾಡಲಾಗಿತ್ತು.
ನ್ಯಾಯಾಲಯದ ಆದೇಶದಂತೆ ತನಿಖಾಧಿಕಾರಿ ಮೂರು ತಿಂಗಳೊಳಗೆ ವರದಿ ಸಲ್ಲಿಸಿದ್ದರು. ಆದರೆ ಶಿಸ್ತು ಪ್ರಾಧಿಕಾರ ಹನ್ನೊಂದು ತಿಂಗಳ ಬಳಿಕ ಆದೇಶ ಜಾರಿ ಮಾಡಿತು. ಅಲ್ಲದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮುಂದಿನ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ಕೂತೂಹಲಕರ ಸಂಗತಿ ಎಂದರೆ ಖಾನ್ ಹೊರತುಪಡಿಸಿ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಉಳಿದ ಆರೋಪಿಗಳನ್ನು ಮತ್ತೆ ಸೇವೆಗೆ ಪರಿಗಣಿಸಲಾಗಿದೆ. ಈ ಹಿಂದೆ ಸಿಎಎ ವಿರೋಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧನಕ್ಕೊಳಗಾಗಿದ್ದ ಖಾನ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಬಿಡುಗಡೆ ಮಾಡಿ ಆದೇಶಿಸಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 5 ರಂದು ಮತ್ತೆ ವಿಚಾರಣೆ ನಡೆಯಲಿದೆ.
ಪ್ರಸಕ್ತ ವರ್ಷದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ 50 ಮೀಟರ್ ಶೂಟಿಂಗ್ ಸ್ಪರ್ಧೆಗೆ ನರೇಶ್ ಕುಮಾರ್ ಶರ್ಮಾ ಅವರನ್ನು ಹೆಚ್ಚುವರಿ ಕ್ರೀಡಾಪಟುವಾಗಿ ಪರಿಗಣಿಸಲಾಗದು ಎಂದು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ (ಐಪಿಸಿ) ಮಂಗಳವಾರ ತಿಳಿಸಿದೆ. ಈ ಸಂಬಂಧ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಗೆ (ಎನ್‌ಪಿಸಿ) ಅದು ಇಮೇಲ್ ರವಾನಿಸಿದೆ. ಭಾರತೀಯ ಎನ್‌ಪಿಸಿಗೆ ಹತ್ತು ಸ್ಲಾಟ್‌ಗಳನ್ನು (8 ಪುರುಷರು ಮತ್ತು 2 ಮಹಿಳೆಯರು) ನೀಡಲಾಗಿದೆ. ನಿಮಗೆ ತಿಳಿದಿರುವಂತೆ ಈ ಸ್ಲಾಟ್‌ಗಳನ್ನು ಎನ್‌ಸಿಪಿಗೆ ಹಂಚಲಾಗಿದೆಯೇ ವಿನಾ ವೈಯಕ್ತಿಕ ಕ್ರೀಡಾಪಟುವಿಗೆ ಅಲ್ಲ. ಪ್ರಕಟಿತ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಡಬ್ಲ್ಯುಎಸ್‌ಪಿಎಸ್ ಸ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ನಾವು ಯಾವುದೇ ಹೆಚ್ಚುವರಿ ಸ್ಲಾಟ್‌ಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.
ನರೇಶ್ ಕುಮಾರ್ ಶರ್ಮಾ ಅವರನ್ನು ಹೆಚ್ಚುವರಿ ಕ್ರೀಡಾಪಟುವಾಗಿ ತಕ್ಷಣ ಶಿಫಾರಸ್ಸು ಮಾಡುವಂತೆ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಗೆ ಸೋಮವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಮೇಲ್ನೋಟಕ್ಕೆ ಪ್ರತಿವಾದಿ ಸಮಿತಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ… ಈ ಸಂಬಂಧ ಅರ್ಜಿದಾರರನ್ನು ಹೆಚ್ಚುವರಿ ಆಟಗಾರ ಅಥವಾ ಹೆಚ್ಚುವರಿ ಪ್ರವೇಶಾರ್ಥಿ ಎಂದು ತಕ್ಷಣ ಶಿಫಾರಸ್ಸು ಮಾಡುವಂತೆ ಸಮಿತಿಗೆ ನಿರ್ದೇಶನ ನೀಡಲಾಗುತ್ತಿದ್ದು, ಈ ಸಂಬಂಧ ಅನುಪಾಲನಾ ವರದಿಯನ್ನು ಮಂಗಳವಾರ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಬೆನ್ನಿಗೇ ಐಪಿಸಿ ಇಮೇಲ್ ರವಾನಿಸಿದೆ.