ನರ್ಸಿಂಗ್ ಕಾಲೇಜು ಮತ್ತು ಇತರೆ ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಧಿಕಾರ ವಿಶೇಷ ಸದನ ಸಮಿತಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹೈದರಾಬಾದ್ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಸಂಸ್ಥೆ, ಕರ್ನಾಟಕ ನರ್ಸಿಂಗ್ ಸಂಸ್ಥೆಗಳ ಒಕ್ಕೂಟ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಕರ್ನಾಟಕ ವಿಧಾನ ಪರಿಷತ್ ಕಲಾಪ ಮತ್ತು ನಡಾವಳಿ ನಿಯಮ 242(ಎ) ಉಪ ನಿಯಮ 1ರಡಿ ಸದನ ಸಮಿತಿ ರಚನೆಯನ್ನು ನ್ಯಾಯಾಲಯ ಎತ್ತಿ ಹಿಡಿಯಿತು.
ಭಾರತೀಯ ನರ್ಸಿಂಗ್ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ನರ್ಸಿಂಗ್ ಕಾಲೇಜುಗಳು ನಡೆಯುತ್ತಿವೆಯೇ? ಮೂಲ ಸೌಕರ್ಯ ಸೇರಿದಂತೆ ಸೌಲಭ್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಗೆ ಅಧಿಕಾರವಿದೆ. ಕಾಲೇಜು ಮತ್ತು ಸಂಸ್ಥೆಗಳು ನಿಯಮಬದ್ಧವಾಗಿ ನಡೆಯುತ್ತಿವೆಯೇ ಎಂಬ ಬಗ್ಗೆಯೂ ಸಮಿತಿಯು ದಾಖಲೆ, ಸಾಕ್ಷ್ಯ ಪರಿಶೀಲಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಭಾರತೀಯ ಸಂವಿಧಾನದ ಕಲಂ 194(3)ರಲ್ಲಿ ರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರವನ್ನು ಉಲ್ಲೇಖಿಸಲಾಗಿದೆ. ಅದರಂತೆ ಸದನ ಸಮಿತಿ ರಚನೆ, ಅಧಿಕಾರ ಮತ್ತು ಆ ಸಮಿತಿ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸುವ, ದಾಖಲೆಗಳನ್ನು ಕೇಳುವ ಅಧಿಕಾರ ಹೊಂದಿದೆ. ಆದರೆ, ಪರಿಶೀಲನೆ ಹೆಸರಿನಲ್ಲಿ ಕಿರುಕುಳ ನೀಡುವಂತಿಲ್ಲ ಎಂದು ಪೀಠ ಹೇಳಿದೆ.
ಮೂಲ ಸೌಕರ್ಯ ಕೊರತೆ ಇದ್ದರೂ ಭಾರತೀಯ ನರ್ಸಿಂಗ್ ಮಂಡಳಿಯು ನಿಯಮಗಳನ್ನು ಉಲ್ಲಂಘಿಸಿ 2020-21ನೇ ಸಾಲಿನಲ್ಲಿ ಹೊಸ ನರ್ಸಿಂಗ್ ಕಾಲೇಜು ಮತ್ತು ಸಂಬಂಧಿತ ಆರೋಗ್ಯ ಸಂಸ್ಥೆಗಳಿಗೆ ಮಂಜೂರಾತಿ ನೀಡಿರುವ ಕುರಿತು ಪ್ರಶ್ನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕೇಳಲಾಗಿತ್ತು. ವಿಸ್ತೃತ ಚರ್ಚೆಯ ಬಳಿಕ ನರ್ಸಿಂಗ್ ಕಾಲೇಜುಗಳ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿ ರಚನೆ ಮಾಡಲು ಸದನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 2021ರ ಏಪ್ರಿಲ್ ನಲ್ಲಿ ಸಮಿತಿಯನ್ನು ರಚಿಸಿ, ಅದರ ಷರತ್ತು ಮತ್ತು ನಿಬಂಧನೆಗಳನ್ನು ಪ್ರಕಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಅರ್ಜಿದಾರರು, ಸದನ ಸಮಿತಿ ರಚನೆಗೆ ಅಧಿಕಾರವಿಲ್ಲ. ಆ ಸಮಿತಿ ಕಾಲೇಜುಗಳಿಂದ ದಾಖಲೆಗಳನ್ನು ಕೇಳುವಂತಿಲ್ಲ ಎಂದು ಆಕ್ಷೇಪಿಸಿದ್ದರು.