ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಸಮ್ಮತಿಯ ವಯಸ್ಸು 18 ವರ್ಷಗಳಾಗಿದ್ದು, ಇದು ಅಂತಹ ಪ್ರಕರಣಗಳನ್ನು ವ್ಯವಹರಿಸುವ ನ್ಯಾಯಾಧೀಶರಿಗೆ ಕಷ್ಟಕರವಾದ ಪ್ರಶ್ನೆಗಳನ್ನು ಒಡ್ಡುತ್ತಿದೆ ಎಂಬ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸನ ರೂಪಿಸುವವರು ಈ ಬಗ್ಗೆ ಗಮನಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸಲಹೆ ನೀಡಿದರು.
ಯುನಿಸೆಫ್ ಸಹಯೋಗದೊಂದಿಗೆ ಬಾಲನ್ಯಾಯ ಕುರಿತಾದ ಸುಪ್ರೀಂ ಕೋರ್ಟ್ ಸಮಿತಿ ಶನಿವಾರ ಆಯೋಜಿಸಿದ್ದ ಪೋಕ್ಸೊ ಕಾಯಿದೆ ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
"ಪ್ರಣಯ ಪ್ರಕರಣಗಳಲ್ಲಿ ಪೋಕ್ಸೊ ನ್ಯಾಯಾಲಯಗಳ ತೀರ್ಪು ಅಥವಾ ಹದಿಹರೆಯದವರಲ್ಲಿ ಸಮ್ಮತಿಯ ಲೈಂಗಿಕ ಕ್ರಿಯೆ ಎಂಬ ವಿಷಯ ಸಮಲೋಚನಾ ಸಭೆಯಲ್ಲಿ ಚರ್ಚೆಯಾಯಿತು. ಈ ಕುರಿತು ಮಾತನಾಡಿದ ಸಿಜೆಐ “ಅಪ್ರಾಪ್ತ ವಯಸ್ಕರಲ್ಲಿ ವಾಸ್ತವಿಕವಾಗಿ ಸಮ್ಮತಿ ಇದೆಯೇ ಎಂಬುದನ್ನು ಲೆಕ್ಕಿಸದೆಯೇ ಪೋಕ್ಸೊ ಕಾಯಿದೆಯು 18 ವರ್ಷದೊಳಗಿನವರ ಎಲ್ಲಾ ಲೈಂಗಿಕ ಕ್ರಿಯೆಗಳನ್ನು ಅಪರಾಧೀಕರಿಸುತ್ತದೆ ಎಂದು ನಿಮಗೆ ತಿಳಿದಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಯಾವುದೇ ಒಪ್ಪಿಗೆ ಇರುವುದಿಲ್ಲ ಎಂಬುದು ಕಾನೂನಿನ ಊಹೆ. ನಾನು ನ್ಯಾಯಾಧೀಶನಾಗಿದ್ದಾಗ , ಈ ವರ್ಗದ ಪ್ರಕರಣಗಳು ಸಂಬಂಧಪಟ್ಟ ನ್ಯಾಯಾಧೀಶರಿಗೆ ಕಷ್ಟಕರ ಪ್ರಶ್ನೆ ಒಡ್ಡುತ್ತಿದ್ದುದನ್ನು ನೋಡಿದ್ದೇನೆ. ಈ ಸಮಸ್ಯೆಯ ಸುತ್ತ ಆತಂಕ ಬೆಳೆಯುತ್ತಿದ್ದು, ಹದಿಹರೆಯದ ಆರೋಗ್ಯದ ಕುರಿತ ತಜ್ಞರ ವಿಶ್ವಾಸಾರ್ಹ ಸಂಶೋಧನೆಯ ನೆಲೆಯಲ್ಲಿ ಶಾಸಕಾಂಗ ಇದನ್ನು ಪರಿಗಣಿಸಬೇಕು” ಎಂದರು.
ಪೋಕ್ಸೊ ಕಾಯಿದೆಯಡಿ ಸಮ್ಮತಿಯ ವಯಸ್ಸನ್ನು ಶಾಸಕಾಂಗವು ಪ್ರಸ್ತುತ ಇರುವ 18 ವರ್ಷಗಳಿಂದ ಕಡಿಮೆ ಮಾಡುವುದನ್ನು ತಾನು "ಕಾತರದಿಂದ ಎದುರು ನೋಡುತ್ತಿರುವುದಾಗಿ" ಮದ್ರಾಸ್ ಹೈಕೋರ್ಟ್ ಹೇಳಿದ ಕೆಲ ದಿನಗಳಲ್ಲಿಯೇ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"18 ವರ್ಷ ಪೂರ್ಣಗೊಳ್ಳದ ವ್ಯಕ್ತಿಯನ್ನು ಕಾಯಿದೆಯು ಮಗು ಎಂದು ವ್ಯಾಖ್ಯಾನಿಸುತ್ತದೆ. ಹೈಕೋರ್ಟ್ ಮೇಲ್ಮನವಿ ನ್ಯಾಯಾಲಯವಾಗಿದ್ದು, ಸತ್ಯ ಶೋಧನೆಯ ಅಂತಿಮ ನ್ಯಾಯಾಲಯವಾಗಿದೆ. ಹಾಗಾಗಿ, ಇದು ಕಾಯಿದೆಯಾಚೆಗೆ ಸಾಗಲಾರದು. ನನ್ನ ಸಹೋದ್ಯೋಗಿಗಳು ತಿಳಿಸಿರುವಂತೆ ಶಾಸನಸಭೆಯಲ್ಲಿ ಇದಕ್ಕೆ ತಿದ್ದುಪಡಿಯಾಗುವುದನ್ನು ಈ ನ್ಯಾಯಾಲಯವೂ ಕಾತರದಿಂದ ಎದುರು ನೋಡುತ್ತಿದೆ" ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.