ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ನವೋದ್ಯಮವಾಗಿರುವ (ಸ್ಟಾರ್ಟ್ ಅಪ್) ಬೈಜೂಸ್ ವಿರುದ್ಧ ದಿವಾಳಿತನ ಪ್ರಕ್ರಿಯೆ ಪ್ರಾರಂಭಿಸಲು ಅಂತಾರಾಷ್ಟ್ರೀಯ ಸಾಲದಾತರು ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್ಎಸಿಲ್‌ಟಿ) ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮೊದಲ ಅರ್ಜಿಯನ್ನು ಸಾಲದಾತರ ಗುಂಪು ಸಲ್ಲಿಸಿದ್ದು, ಇದು ಬೆಂಗಳೂರಿನ ಎನ್‌ಸಿಎಲ್‌ಟಿ ರಿಜಿಸ್ಟ್ರಿ ಪರಿಶೀಲನೆಗೆ ಒಳಪಟ್ಟಿದೆ. ಎರಡನೇ ಅರ್ಜಿಯನ್ನು ಫ್ರೆಂಚ್ ಬಹುರಾಷ್ಟ್ರೀಯ ಕಂಪೆನಿಯ ಭಾರತೀಯ ಘಟಕವಾದ ಟೆಲಿಪರ್ಫಾರ್ಮೆನ್ಸ್ ಬಿಸಿನೆಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದು, ಇದು ಬೈಜೂಸ್‌ನ ಮಾತೃ ಸಂಸ್ಥೆ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ಸಾಲ ನೀಡಿದೆ.
ಈ ಅರ್ಜಿಯನ್ನು ನವದೆಹಲಿಯ ಕಿಂಗ್ ಸ್ಟಬ್ ಮತ್ತು ಕಾಸಿವಾ ಅವರು ನವೆಂಬರ್ 4, 2023ರಂದು ಸಲ್ಲಿಸಿದ್ದಾರೆ. ಎನ್‌ಸಿಎಲ್‌ಟಿ ರಿಜಿಸ್ಟ್ರಿಯ ಪರಿಶೀಲನೆಯ ನಂತರ, ಅರ್ಜಿಗೆ ಅಂತಿಮವಾಗಿ ಜನವರಿ 25, 2024ರಂದು ಸಂಖ್ಯೆ ನೀಡಲಾಗಿದ್ದು, ಸೂಕ್ತ ಸಂದರ್ಭದಲ್ಲಿ ಅದನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು.
ಸಾಲದಾತರು ಬೈಜೂಸ್ ಮಾತೃಸಂಸ್ಥೆಯಿಂದ 1.2 ಬಿಲಿಯನ್ ಡಾಲರ್ ಸಾಲವನ್ನು ಮರುಪಡೆಯಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಾರಂಭಿಸಿರುವ ದಿವಾಳಿತನ ಪ್ರಕ್ರಿಯೆಗಳನ್ನು ಸಹ ಬೈಜೂಸ್ ಪ್ರಸ್ತುತ ಎನ್‌ಸಿಎಲ್‌ಟಿ ಬೆಂಗಳೂರಿನಲ್ಲಿ ಎದುರಿಸುತ್ತಿದೆ. ಶೀರ್ಷಿಕೆ-ಪ್ರಾಯೋಜಕತ್ವ ಹಕ್ಕುಗಳ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಬಿಸಿಸಿಐಗೆ 158 ಕೋಟಿ ರೂಪಾಯಿಗಳನ್ನು ಪಾವತಿಸಲು ವಿಫಲವಾದ ನಂತರ ಬಿಸಿಸಿಐ 2023ರ ಸೆಪ್ಟೆಂಬರ್‌ನಲ್ಲಿ ಬೈಜೂಸ್ ವಿರುದ್ಧ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಬಿಸಿಸಿಐ ಜೊತೆಗಿನ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಬೈಜೂಸ್ ಪ್ರಯತ್ನಿಸುತ್ತಿರುವುದರಿಂದ ಈ ಅರ್ಜಿ ಪ್ರಸ್ತುತ ಎನ್‌ಸಿಎಲ್‌ಟಿ ಮುಂದೆ ಬಾಕಿ ಇದೆ.