ಅಸಹಾಯಕರು 400-600 ರೂಪಾಯಿ ಕೊಟ್ಟು ಕೋವಿಡ್‌ ಲಸಿಕೆ ಪಡೆಯಲಾಗದು: ಕೇಂದ್ರಕ್ಕೆ ಮದ್ರಾಸ್‌ ಹೈಕೋರ್ಟ್‌ ಕಳಕಳಿ

“ದೇಶದಲ್ಲಿನ ಕುಟುಂಬ ರಚನೆಯನ್ನು ಪರಿಗಣಿಸಿದರೆ ಕೋವಿಡ್‌ ಲಸಿಕೆ ವೆಚ್ಚ ವಿಧಿಸುವುದರಿಂದ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ತಲುಪಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
Madras High Court and Covid vaccine
Madras High Court and Covid vaccine

ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಜನರು ಅಥವಾ ಕಡಿಮೆ ಸವಲತ್ತು ಹೊಂದಿರುವವರು 400-600 ರೂಪಾಯಿ ತೆತ್ತು ಕೋವಿಡ್‌ ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಕಳವಳವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಕೋವಿಡ್‌ ಸಾಂಕ್ರಾಮಿಕತೆಯನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ಕುರಿತು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಈ ಕಳಕಳಿ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌ ಶಂಕರನಾರಾಯಣನ್‌ ಅವರು ನ್ಯಾಯಾಲಯದ ಕಳಕಳಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಮೇ 1ರಿಂದ 18-45 ವಯೋಮಾನದವರಿಗೆ ಲಸಿಕೆಗೆ ನೀಡುವ ವೇಳೆಯಲ್ಲಿಯೇ ಲಸಿಕೆಯ ನೂತನ ದರ ಪ್ರಕಟಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಸರ್ಕಾರಿ ಕೌಂಟರ್‌ಗಳಲ್ಲಿ ಒಮ್ಮೆ ಲಸಿಕೆಗೆ 400 ರೂಪಾಯಿ ಹಾಗೂ ಖಾಸಗಿ ಕಡೆಗಳಲ್ಲಿ ಒಮ್ಮೆ ಲಸಿಕೆ ಪಡೆಯಲು 600 ರೂಪಾಯಿ ವಿಧಿಸುವುದರಿಂದ ದೇಶದ ಕೌಟುಂಬಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟು ನೋಡುವುದಾದರೆ ಬಹುತೇಕ ಜನ ಸಮುದಾಯಕ್ಕೆ ಅದನ್ನು ಪಡೆಯಲಾಗದು” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಕಡಿಮೆ ಸೌಕರ್ಯ ಹೊಂದಿರುವ ಜನರು, ಮೂಲಸೌಕರ್ಯವಿಲ್ಲದವರು ಮತ್ತು ಕಳೆದ ವರ್ಷದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡವರು ಹೇಗೆ ಅಷ್ಟು ದುಬಾರಿ ಮೊತ್ತ ತೆತ್ತು ಲಸಿಕೆ ಪಡೆಯುತ್ತಾರೆ ಎಂದು ನ್ಯಾಯಾಲಯ ಕೇಳಿದೆ.

Also Read
ಕೊರೊನಾ ತೀವ್ರತೆಗೆ ಕುಂಭಮೇಳ, ರಾಜಕೀಯ ಸಮಾವೇಶಗಳು ಕಾರಣ ಎಂದ ಕೇಂದ್ರದ ಮಾಜಿ ಕಾನೂನು ಸಚಿವ; ಸಿಜೆಐಗೆ ದೂರು

ವಿಚಾರಣೆಯ ಸಂದರ್ಭದಲ್ಲಿ ಗಮನಸೆಳೆದ ಪ್ರಮುಖ ಅಂಶಗಳು ಇಂತಿವೆ:

  • ಕೋವಿಡ್‌ ಎರಡನೇ ಅಲೆಯನ್ನು ತಡೆಯುವ ಸಂಪನ್ಮೂಲ ತಮಿಳುನಾಡಿನ ಬಳಿಯಿದೆ ಎಂದ ಸರ್ಕಾರ.

  • ಮತ ಎಣಿಕೆಯ ಸಂದರ್ಭದಲ್ಲಿ ಕೋವಿಡ್‌ ಸ್ಫೋಟಿಸುವುದನ್ನು ತಡೆಯಲು ವಿಶೇಷ ಕ್ರಮವಹಿಸಲು ಸೂಚಿಸಿದ ನ್ಯಾಯಾಲಯ.

  • ಆರೋಗ್ಯಕ್ಕೆ ಸಮಸ್ಯೆಯಾಗದಂತೆ ರಂಜಾನ್‌ ಸಂಭ್ರಮಾಚಣೆಗೆ ಅನುವು ಮಾಡಲು ಸೂಚನೆ.

  • ಆಮ್ಲಜನಕ ಯೋಜನೆಯ ಕುರಿತು ರಾಜ್ಯಗಳಿಗೆ ತಿಳಿಸಿರುವುದಾಗಿ ಹೇಳಿದ ಕೇಂದ್ರ ಸರ್ಕಾರ.

  • ಕಾರ್ಯಕಾರಿ ವಿಭಾಗದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದ ನ್ಯಾಯಾಲಯ.

  • ಮುಂದಿನ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ.

  • ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಖಾತರಿಪಡಿಸಬೇಕು ಎಂದು ಸರ್ಕಾರಕ್ಕೆ ಸೂಚನೆ.

Related Stories

No stories found.
Kannada Bar & Bench
kannada.barandbench.com