
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ “ಸಿಬಿಐ ಸಂಪೂರ್ಣ ಸ್ಥಿತಿಗತಿ ವರದಿ ಸಲ್ಲಿಸಿದಾಗ ಎಲ್ಲವೂ ಬೆಳಕಿಗೆ ಬರಲಿದೆ” ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ.
ಕೆಎಂವಿಎಸ್‌ಟಿಡಿಸಿಎಲ್ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಆದೇಶಿಸುವಂತೆ ಕೋರಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ದಳವಾಯಿ ವೆಂಕಟೇಶ್ ಅವರು “ಜಾರಿ ನಿರ್ದೇಶನಾಲಯವು ವರದಿ ಸಲ್ಲಿಸಿದ್ದು, ಹಣವನ್ನು ಬಳ್ಳಾರಿ ಲೋಕಸಭಾ (ಕಾಂಗ್ರೆಸ್‌ನಿಂದ ಇ ತುಕಾರಾಂ ಆಯ್ಕೆಯಾಗಿದ್ದಾರೆ) ಚುನಾವಣೆಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. 20 ಕೋಟಿ ರೂಪಾಯಿಗಳನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ. ಅಂದಿನ ಹಣಕಾಸು ಇಲಾಖೆ ಮತ್ತು ಹಣಕಾಸು ಸಚಿವರ ಸಹಮತಿ ಇಲ್ಲದೇ ಇಂಥ ಹಗರಣ ನಡೆದಿರಲಿಕ್ಕಿಲ್ಲ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಸಿಬಿಐ ಎಲ್ಲವನ್ನೂ ತನಿಖೆ ನಡೆಸಲು ಸ್ವತಂತ್ರವಾಗಿದೆ ಎಂದು ಇದೇ ಪೀಠ ಆದೇಶಿಸಿದೆ” ಎಂದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಜನವರಿ 15ರವರೆಗಿನ ಸ್ಥಿತಿಗತಿ ವರದಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ದಳ (ಎಸ್‌ಐಟಿ) ಮುಟ್ಟಿಯೂ ಇರದ ಹಲವು ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ” ಎಂದರು.
ಆಗ ಪೀಠವು ಮುಚ್ಚಿದ ಲಕೋಟೆಯಲ್ಲಿ ಸಿಬಿಐ ಸಲ್ಲಿಸಿದ್ದ ತನಿಖಾ ವರದಿಯನ್ನು ಪರಿಶೀಲಿಸಿತು. ಆನಂತರ “ಪ್ರಕರಣದ ಮೇಲೆ ನ್ಯಾಯಾಲಯ ನಿಗಾ ಇರಿಸಿದೆ. ಸಂಪೂರ್ಣ ಸ್ಥಿತಿಗತಿ ವರದಿ ಬರಲಿ, ಎಲ್ಲವೂ ಬೆಳಕಿಗೆ ಬರಲಿದೆ” ಎಂದು ದಳವಾಯಿ ವೆಂಕಟೇಶ್ ಅವರನ್ನು ಕುರಿತು ಹೇಳಿತು. ಮುಂದಿನ ವಿಚಾರಣೆ ವೇಳೆಗೆ ಅಲ್ಲಿಯವರೆಗೆ ನಡೆಸುವ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.