ಕೇಂದ್ರ ಸರ್ಕಾರವು ಬರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಆಕ್ಷೇಪಿಸಿರುವ ಅರ್ಜಿಯ ವಿಚಾರಣೆಯ ವೇಳೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವ್ಯಾಜ್ಯ ಬೇಡ ಎಂದು ಸೋಮವಾರ ಕಿವಿಮಾತು ಹೇಳಿದ್ದು, ಕರ್ನಾಟಕದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ಕರ್ನಾಟಕದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ಹಲವು ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರುತ್ತಿವೆ ಎಂದಿದೆ. “ಒಕ್ಕೂಟ ಮತ್ತು ರಾಜ್ಯದ ನಡುವೆ ವ್ಯಾಜ್ಯ ಅಗತ್ಯವಿಲ್ಲ” ಎಂದು ಹೇಳಿದೆ.
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಸಂವಿಧಾನದ 32ನೇ ವಿಧಿಯಡಿ ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ ರಾಜ್ಯ ಸರ್ಕಾರವು ಅದನ್ನು ಕೇಂದ್ರದ ಗಮನಕ್ಕೆ ತರಬಹುದಿತ್ತು. ಈ ಅರ್ಜಿಗಳ ಸಲ್ಲಿಕೆಯ ಸಮಯದ ಬಗ್ಗೆ ನಮಗೆ ತಿಳಿದಿದೆ. ದಯಮಾಡಿ ನೋಟಿಸ್ ಜಾರಿ ಮಾಡಬೇಡಿ, ಅದು ಸಹ ಸುದ್ದಿಯಾಗಲಿದೆ” ಎಂದರು.
ಇದಕ್ಕೆ ಪೀಠವು ಎರಡು ವಾರಗಳಲ್ಲಿ ಸೂಚನೆ ಪಡೆದು ತಿಳಿಸುವಂತೆ ಮೆಹ್ತಾ ಹಾಗೂ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನಿರ್ದೇಶಿಸಿತು.
ರಾಜ್ಯವು ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಆರ್ಥಿಕ ನೆರವು ಬಿಡುಗಡೆ ಮಾಡಲು ಕೇಂದ್ರದ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬರದಿಂದ ರಾಜ್ಯದಲ್ಲಿ ರೂ.35,162.05 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಎನ್‌ಡಿಆರ್‌ಎಫ್‌ನಿಂದ ರಾಜ್ಯ ಸರ್ಕಾರವು ರೂ.18,171.44 ಕೋಟಿ ಆರ್ಥಿಕ ನೆರವು ಕೋರಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಪೈಕಿ 196 ತಾಲ್ಲೂಕುಗಳು ಗಂಭೀರ ಬರ ಪೀಡಿತವಾಗಿದ್ದು, 27 ತಾಲ್ಲೂಕುಗಳು ಅರೆ ಬರಪೀಡತವಾಗಿವೆ. ಮಳೆಯ ಕೊರತೆಯಿಂದ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿತವಾಗಿದೆ. ಇದರಿಂದ ದಿನ ಬಳಕೆ, ಕೃಷಿ ಹಾಗೂ ಕೈಗಾರಿಕೆಗೆ ನೀರು ಪೂರೈಕೆ ದುರ್ಲಭವಾಗಿದೆ. ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗಿದ್ದು, ರೈತರ ಬದುಕು ದಯನೀಯವಾಗಿದೆ. ಬರದಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಆದಾಯ ನಷ್ಟ, ಉದ್ಯೋಗಕ್ಕೆ ಹಾನಿ ಸೇರಿದಂತೆ ರಾಜ್ಯದ ಆರ್ಥಿಕತೆ ಭಾರಿ ಹೊಡೆತ ನೀಡಿದೆ ಎಂದು ಕರ್ನಾಟಕ ಸರ್ಕಾರದ ಅರ್ಜಿಯಲ್ಲಿ ವಿವರಿಸಲಾಗಿದೆ.