ಅರ್ಚಕರ ಸಜೀವ ದಹನ: ಕೇಂದ್ರ ಸಂಸ್ಥೆಯಿಂದ ತನಿಖೆಗೆ ಆಗ್ರಹಿಸಿ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ

ದೇವಸ್ಥಾನಕ್ಕೆ ಸೇರಿದ ಭೂಮಿ ಕಬಳಿಸಲು ಯತ್ನಿಸಿದ್ದನ್ನು ತಡೆಯಲು ಪ್ರಯತ್ನಿಸಿದ ಅರ್ಚಕರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಅವರು ಸುಟ್ಟು ಗಾಯದಿಂದ ಅಸುನೀಗಿದ ಘಟನೆ ಈಚೆಗೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿತ್ತು.
Rajasthan High court
Rajasthan High court

ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಅವರನ್ನು ಜೀವಂತವಾಗಿ ದಹಿಸಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಈಚೆಗೆ ರಾಜಸ್ಥಾನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಅವರಿಗೆ ಸುಪ್ರೀಂ ಕೋರ್ಟ್ ವಕೀಲ ಪವನ್ ಪ್ರಕಾಶ್ ಪಾಠಕ್‌ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.

ದೇವಸ್ಥಾನಕ್ಕೆ ಸೇರಿದ ಸ್ಥಳವನ್ನು ಒತ್ತುವರಿ ಮಾಡಲು ಯತ್ನಿಸಿದ್ದನ್ನು ಅರ್ಚಕರು ತಡೆಯಲು ಪ್ರಯತ್ನಿಸಿದ್ದರಿಂದ ಅವರಿಗೆ ಬೆಂಕಿ ಇಟ್ಟು ದಹಿಸಲಾಗಿದೆ ಎನ್ನಲಾಗಿದೆ. “ವಿವಾದಿತ ಸ್ಥಳದಲ್ಲಿ ಇಡಲಾಗಿದ್ದ ಸಿರಿಧಾನ್ಯಗಳ ಮೂಟೆಗಳ ಮೇಲೆ ಆರು ಮಂದಿ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು, ಬಳಿಕ ನನಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು” ಎಂಬ ಅರ್ಚಕರ ಹೇಳಿಕೆಯನ್ನು ರಾಜಸ್ಥಾನ ಪೊಲೀಸರು ದಾಖಲಿಸಿಕೊಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಗುರುವಾರ ಅವರು ಸಾವನ್ನಪ್ಪಿದ್ದರು.

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ಸಂದರ್ಭ ಅಥವಾ ಸ್ಥಳದಲ್ಲಿ ಭದ್ರತೆ ಕಲ್ಪಿಸುವುದು ಮತ್ತು ಅವರ ಘನತೆಯನ್ನು ಎತ್ತಿಡಿಯುವುದು ನಿರ್ದಿಷ್ಟ ರಾಜ್ಯ ಸರ್ಕಾರಗಳ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ನ್ಯಾ. ಮಹಂತಿ ಅವರಿಗೆ ಬರೆದ ಪತ್ರದಲ್ಲಿ ಪಾಠಕ್ ಉಲ್ಲೇಖಿಸಿದ್ದಾರೆ.

“ಎಸ್‌ ಎಸ್‌ ಅಹ್ಲುವಾಲಿಯಾ ವರ್ಸಸ್ ಭಾರತ ಸರ್ಕಾರ ಮತ್ತು ಇತರರ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಎಸ್‌. ರಾಜೇಂದ್ರ ಬಾಬು ಮತ್ತು ಎಸ್‌ ಎನ್ ಫೂಕನ್ ಅವರು ಸಂವಿಧಾನದ ಪರಿಚ್ಛೇದ 21ರ ಅಡಿ ವಿಭಿನ್ನ ಜಾತಿ ಧರ್ಮ, ನಂಬಿಕೆಗೆ ಸೇರಿದ ಜನರು ಒಟ್ಟಾಗಿ ಬಾಳ್ವಿಕೆ ನಡೆಸುವುದು ಮತ್ತು ಅಲ್ಲಿನ ನಿವಾಸಿಗಳ ಜೀವನ, ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಸರ್ಕಾರದ ಕರ್ತವ್ಯವಾಗಿದ್ದು, ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದೆ” ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ವರದಿಯಾಗುವ ಮತ್ತು ವರದಿಯಾಗದ ಹೀನ ಅಪರಾಧ ಕೃತ್ಯಗಳ ಹೆಚ್ಚಳ, ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಪೊಲೀಸರ ಅಸೂಕ್ಷ್ಮತೆ, ಅಸಂಸದೀಯ ಮತ್ತು ಅನಾಗರಿಕ ನಡೆಯ ಬಗ್ಗೆ ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ದಂಗೆಕೋರರಿಂದಾಗಿ ರಾಮರಾಜ್ಯ ನಿರ್ಮಾಣದ ವಾಗ್ದಾನಕ್ಕೆ ಧಕ್ಕೆಯಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

Also Read
ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿಗೆ ಕೊರೊನಾ ದೃಢ

“500 ವರ್ಷಗಳ ಬಳಿಕ ಅಯೋಧ್ಯಾದಲ್ಲಿ ರಾಮ ಜನ್ಮಭೂಮಿ ನಿರ್ಮಾಣ ಮಾಡುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ದೇಶದ ಜನತೆ ಅತ್ಯಂತ ಸಂತೋಷ ಮತ್ತು ಉತ್ಸಾಹದಿಂದ ಕಣ್ತುಂಬಿಕೊಂಡಿದೆ. ಆದರೆ, ಇಂಥ ಘಟನೆಗಳು ನಡೆಯುವುದರಿಂದ ಸಂತ್ರಸ್ತರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಲಿದ್ದು, ಇಂಥ ಘಟನೆಗಳು ಮರುಕಳಿಸುವುದರಿಂದ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದೆನಿಸುವುದಿಲ್ಲ” ಎಂದು ಅವರು ವಿವರಿಸಿದ್ದಾರೆ.

ಪ್ರಕರಣದ ನ್ಯಾಯಿಕ ದೃಷ್ಟಿಯಿಂದ ಆಲಿಸಿ ಕೇಂದ್ರೀಯ ತನಿಖಾ ಸಂಸ್ಥೆಯಿಂದ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಬೇಕು. ಅರ್ಚಕರ ಕುಟುಂಬಸ್ಥರ ಮೇಲೆ ತೀವ್ರ ಒತ್ತಡ ಹಾಗೂ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಹೈಕೋರ್ಟ್‌ಗೆ ಪಾಠಕ್ ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com