ಸ್ಥಳೀಯ ಮೀಸಲಾತಿ ಜಾರಿಗೆ ಕಾರ್ಯಕಾರಿ ಸಭೆ ಕರೆದು ಎನ್‌ಎಲ್‌ಎಸ್‌ಐಯುಗೆ ನಿರ್ದೇಶಿಸುವಂತೆ ಸಿಜೆಐಗೆ ಪತ್ರ

ನಿರ್ಬಂಧಿತ ಮತ್ತು ವಂಚಿಸುವ ಸೇರ್ಪಡೆ ಮತ್ತು ವಿಸ್ತರಣೆ ಯೋಜನೆಯು ಪೂರ್ವಗ್ರಹಪೀಡಿತವಾಗಿದ್ದು, ಅದು ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನಿವೃತ್ತ ನ್ಯಾ. ವಿ ಗೋಪಾಲ ಗೌಡ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು.
NLSIU
NLSIU
Published on

ದೇಶದ ಇತರೆ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಪಾಲಿಸಲಾಗುತ್ತಿರುವಂತೆ ಸ್ಥಳೀಯ ಮೀಸಲಾತಿ ನೀತಿ ಪಾಲಿಸಲು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಕುಲಪತಿಗೆ ಕಾರ್ಯಕಾರಿ ಸಭೆ ಕರೆದು ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ಪತ್ರದ ಮೂಲಕ ಕೋರಿದ್ದಾರೆ.

ವಿಭಾಗೀಯ ಸಮತಲ ಮೀಸಲಾತಿಯು (ಕಂಪಾರ್ಟ್‌ಮೆಂಟಲೈಸ್ಡ್‌ ಹಾರಿಜಾಂಟಲ್‌ ರಿಸರ್ವೇಷನ್)‌ ಭಾರತದ ಸಂವಿಧಾನ ಮತ್ತು ಕಾನೂನು ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ಅಂಥ ಮೀಸಲಾತಿಯನ್ನು ನಿರ್ಬಂಧ ಎನ್ನಲಾಗುತ್ತದೆಯೇ ವಿನಾ ಅದನ್ನು ಮೀಸಲಾತಿ ಎನ್ನಲಾಗದು. ಸಿಎಲ್‌ಎಟಿ ಒಕ್ಕೂಟದಲ್ಲಿರುವ ಯಾವುದೇ ರಾಷ್ಟ್ರೀಯ ಕಾನೂನು ಶಾಲೆಯೂ ವಿಭಾಗೀಯ ಮೀಸಲಾತಿ ನೀತಿ ಹೊಂದಿಲ್ಲ. ಏಕೆಂದರೆ ಅದು ಮೂಲತಃ ನಿರ್ಬಂಧಿತ ಮತ್ತು ಪ್ರತ್ಯೇಕವಾಗಿದೆ ಎಂದು ಹೇಳಲಾಗಿದೆ.

ಎನ್‌ಎಲ್‌ಎಸ್‌ಐಯು ತನ್ನ ನಿರ್ಬಂಧಿತ ಮತ್ತು ವಂಚಿಸುವ ಸೇರ್ಪಡೆ ಮತ್ತು ವಿಸ್ತರಣೆ (ಇನ್‌ಕ್ಲೂಸಿವ್‌ ಮತ್ತು ಎಕ್ಸ್‌ಪ್ಯಾನ್ಷನ್‌ ಪ್ಲಾನ್‌) ಯೋಜನೆಗೆ ಬದ್ಧವಾಗಿ ನಿಂತಿದೆ. ಶೇ. 25ರಷ್ಟು ಸ್ಥಳೀಯ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರೂ ಅದು ಕಣ್ಣೊರೆಸುವ ತಂತ್ರವಾಗಿದೆಯಷ್ಟೆ. ಇದನ್ನು 2023ರ ಜನವರಿ 21ರ ಪತ್ರದಲ್ಲಿ ಆಕ್ಷೇಪಿಸಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

Also Read
ಸ್ಥಳೀಯ ಮೀಸಲಾತಿ ನೀತಿ ಜಾರಿಗೊಳಿಸದ ಎನ್‌ಎಲ್‌ಎಸ್‌ಐಯು ವಿರುದ್ಧ ವಕೀಲರು, ಸಂಘಟನೆಗಳಿಂದ ಪ್ರತಿಭಟನೆ; ಸಿಜೆಐಗೆ ಪತ್ರ

ನಿರ್ಬಂಧಿತ ಮತ್ತು ವಂಚಿಸುವ ಸೇರ್ಪಡೆ ಮತ್ತು ವಿಸ್ತರಣೆ ಯೋಜನೆಯು ಪೂರ್ವಗ್ರಹಪೀಡಿತವಾಗಿದ್ದು, ಅದು ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡ ಅವರು 2021ರ ಏಪ್ರಿಲ್‌ನಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು. ಸ್ಥಳೀಯ ಮೀಸಲಾತಿ ವಿಚಾರದ ಕುರಿತು ರಾಜ್ಯದ ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವರಿಬ್ಬರೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ನೆನಪಿಸಲಾಗಿದೆ.

Kannada Bar & Bench
kannada.barandbench.com