
ವಿವಾಹಿತ ದಂಪತಿಗಳ ವಿಚ್ಛೇದನ ಮತ್ತು ಬೇರ್ಪಡಿಕೆಗೆ ಅವಕಾಶ ನೀಡುವ ಹಿಂದೂ ವಿವಾಹ ಕಾಯ್ದೆ, 1955 (ಎಚ್‌ಎಂಎ) ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಮತ್ತು ಸೀಮಿತ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠವು, ವಿವಾಹವನ್ನು ರದ್ದುಗೊಳಿಸುವ ಕಾಯಿದೆಯಲ್ಲಿನ ನಿಬಂಧನೆಗಳನ್ನು ವಿಶಾಲವಾಗಿ ಅಥವಾ ಉದಾರವಾಗಿ ವ್ಯಾಖ್ಯಾನಿಸುವ ಮೂಲಕ ವೈವಾಹಿಕ ಅಮಾನ್ಯತೆಯ ತೀರ್ಪು ನೀಡುವುದು ವಿವಾಹದ ಪಾವಿತ್ರ್ಯವನ್ನು ಕ್ಷುಲ್ಲಕಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ. ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಸಂದರ್ಭಗಳನ್ನು ಹೊರತುಪಡಿಸಿ ವಿವಾಹದ ಸ್ಥಿರತೆ, ಘನತೆ ಮತ್ತು ಶಾಶ್ವತತೆಯನ್ನು ಕಾಪಾಡುವ ಶಾಸಕಾಂಗ ಉದ್ದೇಶವನ್ನು ಇದು ದುರ್ಬಲಗೊಳಿಸುತ್ತದೆ ಎಂದಿದೆ.
"ಎಚ್‌ಎಂಎಯ ನಿಬಂಧನೆಗಳನ್ನು, ವಿಶೇಷವಾಗಿ ವಿವಾಹವನ್ನು ಅನೂರ್ಜಿತಗೊಳಿಸುವುದು, ಅಸಿಂಧುಗೊಳಿಸುವುದು, ವಿಚ್ಛೇದನ ನೀಡುವುದು ಮತ್ತು ನ್ಯಾಯಾಂಗ ಮುಖೇನ ಮಾಡಲಾಗುವ ವಿವಾಹ ಪ್ರತ್ಯೇಕತೆಗೆ ಸಂಬಂಧಿಸಿದವುಗಳನ್ನು ಕಟ್ಟುನಿಟ್ಟಾಗಿ ಅರ್ಥೈಸಿಕೊಳ್ಳಬೇಕು ಮತ್ತು ಅನ್ವಯಿಸಬೇಕು ಎಂದು ನಾವು ದೃಢವಾಗಿ ನಂಬುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ವಿವಾಹದ ಸಮಯದಲ್ಲಿ ಅಗತ್ಯ ವಿಧಿವಿಧಾನಗಳನ್ನು ನಡೆಸಿಲ್ಲ ಎಂಬ ಕಾರಣಕ್ಕಾಗಿ ವಿವಾಹಗಳನ್ನು ರದ್ದುಪಡಿಸಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಎಚ್‌ಎಂಎ ಅಡಿಯಲ್ಲಿ ನಿರ್ವಹಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಎಚ್‌ಎಂಎಯ ಸೆಕ್ಷನ್ 7ರ ಪ್ರಕಾರ ವಿವಾಹವು ಎಂದಿಗೂ ಶಾಸ್ತ್ರೋಕ್ತವಾಗಿ ನಡೆದಿಲ್ಲ ಎಂಬ ಕಾರಣಕ್ಕಾಗಿ ವಿವಾಹವು ಅಮಾನ್ಯವಾಗಿದೆ ಎಂದು ಘೋಷಿಸಲು ಪಕ್ಷಕ್ಕೆ ಅನುವು ಮಾಡಿಕೊಡುವ ಯಾವುದೇ ನಿಬಂಧನೆಯನ್ನು ಶಾಸನವು ಹೊಂದಿಲ್ಲ ಎಂದು ಅದು ತೀರ್ಪು ನೀಡಿದೆ.
ವಿವಾಹವನ್ನು ಅಮಾನ್ಯಗೊಳಿಸುವ ಪರಿಹಾರವು ಸೆಕ್ಷನ 11 ರಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪ್ರಕರಣಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಇದು ಶಾಸನಬದ್ಧ ಉಲ್ಲಂಘನೆಗಳ ಮೇಲೆ ಅವಲಂಬಿತವಾಗಿದೆ, ಕೇವಲ ಆಚರಣೆಗಳ ಕೊರತೆಯ ಮೇಲೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ಕೌಟುಂಬಿಕ ನ್ಯಾಯಾಲಯವೊಂದರ ಆದೇಶದ ವಿರುದ್ಧ ದಂಪತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸುವಾಗ ಪೀಠವು ಈ ಅಭಿಪ್ರಾಯಗಳನ್ನು ನೀಡಿತು. ಸಪ್ತಪದಿ ಸೇರಿದಂತೆ ಹಿಂದೂ ವಿವಾಹ ವಿಧಿಗಳನ್ನು ತಮ್ಮ ವಿವಾಹದ ಸಮಯದಲ್ಲಿ ನಡೆಸಲಾಗಿಲ್ಲ ಹಾಗೂ ತಾವು ಎಂದಿಗೂ ಪತಿ ಮತ್ತು ಪತ್ನಿಯಾಗಿ ಸಹಬಾಳ್ವೆ ನಡೆಸಿಲ್ಲ ಎಂಬ ಆಧಾರದ ಮೇಲೆ ತಮ್ಮ ವಿವಾಹವನ್ನು "ಅಮಾನ್ಯ" ಎಂದು ಘೋಷಿಸಲು ಅರ್ಜಿದಾರ ದಂಪತಿಗಳು ಕೋರಿದ್ದರು.
ಬ್ರಿಟನ್‌ನ ವೀಸಾವನ್ನು ಪಡೆಯುವುದನ್ನುಸುಗಮಗೊಳಿಸಿಕೊಳ್ಳುವ ಸಲುವಾಗಿ ಕಕ್ಷಿದಾರರು ಆರ್ಯ ಸಮಾಜ ದೇವಸ್ಥಾನದಲ್ಲಿ ತಮ್ಮ ವಿವಾಹವನ್ನು ತರಾತುರಿಯಲ್ಲಿ ಮಾಡಿಕೊಂಡು ನೋಂದಾಯಿಸಿಕೊಂಡಿದ್ದರು ಎಂದು ಹೇಳಲಾಗಿದೆ. ನಂತರದ ತಾವು ಅದ್ದೂರಿಯಾಗಿ ವಿವಾಹವನ್ನು ಮಾಡಿಕೊಳ್ಳುವ ಆಲೋಚನೆ ಹೊಂದಿದ್ದರೂ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹಿಂದ ಸರಿದ್ದರು. ವಿವಾಹದ ಸಮಯದಲ್ಲಿ ಅಗತ್ಯ ವಿವಾಹ ವಿಧಿಗಳನ್ನು ನಡೆಸದ ಕಾರಣ ತಮ್ಮ ವಿವಾಹವನ್ನು ಅಮಾನ್ಯವಾಗಿದೆ ಎಂದು ಘೋಷಿಸಲು ಅವರು ಕೋರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು, ಮೇಲ್ಮನವಿಯು "ಸಂಪೂರ್ಣ ಜಾಣತನದಿಂದ ಕೂಡಿದ್ದು, ಇತ್ಯರ್ಥಗೊಂಡಿರುವ ಕಾನೂನನ್ನು ಬುಡಮೇಲು ಮಾಡುವ ಪ್ರಯತ್ನವಾಗಿದೆ" ಎಂದು ಬಣ್ಣಿಸಿತು.