ಲೈಫ್ ಮಿಷನ್ ಪ್ರಕರಣ: ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಜಿ ಪ್ರಧಾನ ಕಾರ್ಯದರ್ಶಿ 5 ದಿನ ಇ ಡಿ ವಶಕ್ಕೆ

ಕೇರಳ ಸರ್ಕಾರದ ವಸತಿ ಭದ್ರತೆ ಒದಗಿಸುವ ಯೋಜನೆಯಾದ ಲೈಫ್ ಮಿಷನ್ ರಾಜ್ಯದ ಎಲ್ಲಾ ಭೂರಹಿತ ಮತ್ತು ನಿರಾಶ್ರಿತ ನಿವಾಸಿಗಳಿಗೆ ಮನೆ ಒದಗಿಸುವ ಉದ್ದೇಶದ್ದಾಗಿದೆ.
M Sivasankar
M Sivasankar

ಕೇರಳದ ಲೈಫ್ ಮಿಷನ್ ಯೋಜನೆಯಲ್ಲಿನ ಅವ್ಯವಹಾರದ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಕೇರಳದ ನ್ಯಾಯಾಲಯವೊಂದು  5 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ಒಪ್ಪಿಸಿದೆ.

ಕೇರಳ ಸರ್ಕಾರದ ವಸತಿ ಭದ್ರತೆ ಒದಗಿಸುವ ಯೋಜನೆಯಾದ ಲೈಫ್‌  ಲೈಫ್‌ (ಜೀವನ, ಒಳಗೊಳ್ಳುವಿಕೆ ಹಾಗೂ ಆರ್ಥಿಕ ಸಬಲೀಕರಣ) ಮಿಷನ್‌ ರಾಜ್ಯದ ಎಲ್ಲಾ ಭೂರಹಿತ ಮತ್ತು ನಿರಾಶ್ರಿತ ನಿವಾಸಿಗಳಿಗೆ ಮನೆ ಒದಗಿಸುವ ಉದ್ದೇಶದ್ದಾಗಿದೆ.

ಯೋಜನೆಯ ನಿರ್ದಿಷ್ಟ ಪ್ರಾಜೆಕ್ಟ್‌ಗಾಗಿ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಉಲ್ಲಂಘಿಸಿ ಅರಬ್‌ ದೇಶದಿಂದ ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ.

ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ, ಶಿವಶಂಕರ್ ಅವರನ್ನು ನಿನ್ನೆ (ಮಂಗಳವಾರ) ರಾತ್ರಿ ಬಂಧಿಸಿತ್ತು. ಇಂದು ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಅವರನ್ನು ಫೆಬ್ರವರಿ 20ರ ಸೋಮವಾರ ಮಧ್ಯಾಹ್ನ 2:30ರವರೆಗೆ ಇ ಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿತು.

ಲೈಫ್ ಮಿಷನ್ ಯೋಜನೆಯು ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಡಕ್ಕಂಚೇರಿಯ ಶಾಸಕರಾಗಿದ್ದ ಅನಿಲ್ ಅಕ್ಕರ ಅವರು 2020ರಲ್ಲಿ ದೂರು ನೀಡಿದ್ದರು. ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯೋಜನೆ ವಿರುದ್ಧ ನಿರ್ದಿಷ್ಟ ದೂರು ಸಲ್ಲಿಸಿದ್ದರು.

ರಾಜತಾಂತ್ರಿಕ ಮಾರ್ಗಗಳ ಮೂಲಕ ಅರಬ್‌ ಸಂಯುಕ್ತ ಸಂಸ್ಥಾನದಿಂದ ಭಾರತಕ್ಕೆ ಕೆಜಿಗಟ್ಟಲೆ ಚಿನ್ನ  ಕಳ್ಳಸಾಗಣೆ ಮಾಡಿದ್ದರೆನ್ನಲಾದ ಪ್ರಕರಣಕ್ಕೂ ಲೈಫ್ ಮಿಷನ್ ಪ್ರಕರಣಕ್ಕೂ ನಂಟಿದ್ದು ಶಿವಶಂಕರ್‌, ಸ್ವಪ್ನಾ ಸುರೇಶ್‌, ಸರಿತ್‌ ಅವರ ಹೆಸರು ಎರಡೂ ಪ್ರಕರಣಗಳಲ್ಲಿ ಕೇಳಿಬಂದಿದೆ.

ಲೈಫ್ ಮಿಷನ್ ಪ್ರಕರಣದಲ್ಲಿ ಶಿವಶಂಕರ್ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯ ಮೊದಲ ಹಂತದಲ್ಲಿ ಕೇಳಿಬಂದಿದ್ದವು. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್‌ ಅವರನ್ನು 2020ರ ಅಂತ್ಯದಲ್ಲೇ ಇ ಡಿ ಮತ್ತು ಕಸ್ಟಮ್ಸ್‌ ಇಲಾಖೆ ಬಂಧಿಸಿದ್ದವು. ಪ್ರಕರಣದಲ್ಲಿ ಶಿವಶಂಕರ್‌ ಜಾಮೀನು ಪಡೆದ ನಂತರ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜನವರಿ 25, 2021 ರಂದು, ಕೇರಳ ಹೈಕೋರ್ಟ್‌ ಜಾಮೀನು ನೀಡಿತ್ತು.

Related Stories

No stories found.
Kannada Bar & Bench
kannada.barandbench.com